ಬೆಂಗಳೂರು[ಜು.12] :  ಅತೃಪ್ತರ ರಾಜೀನಾಮೆ ವಿಚಾರದಲ್ಲಿ ಸ್ಪೀಕರ್‌ ನಡೆ ವಿರುದ್ಧ ಬಿಜೆಪಿ ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ಪ್ರತ್ಯೇಕವಾಗಿ ಸುದ್ದಿಗಾರರ ಜತೆ ಮಾತನಾಡಿದ ಬಿಜೆಪಿ ನಾಯಕರಾದ ಬಸವರಾಜ ಬೊಮ್ಮಾಯಿ, ಆರ್‌.ಅಶೋಕ್‌, ಮಾಧುಸ್ವಾಮಿ, ಕೆ.ಎಸ್‌.ಈಶ್ವರಪ್ಪ ಮತ್ತಿತರರು ಸ್ಪೀಕರ್‌ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. 

ಸುಪ್ರೀಂಕೋರ್ಟ್‌ ನಿರ್ದೇಶನದಂತೆ ಅತೃಪ್ತ ಶಾಸಕರು ಖುದ್ದು ಸ್ಪೀಕರ್‌ ರಮೇಶ್‌ ಕುಮಾರ್‌ ಅವರ ಮುಂದೆ ಹಾಜರಾಗಿರುವ ಹಿನ್ನೆಲೆಯಲ್ಲಿ ಸ್ಪೀಕರ್‌ ಅವರಿಗೆ ಶಾಸಕರ ರಾಜೀನಾಮೆ ಅಂಗೀಕರಿಸದೆ ಬೇರೆ ದಾರಿ ಇಲ್ಲ ಎಂದು ಹೇಳಿದ್ದಾರೆ. ಅಲ್ಲದೆ, ಸಮ್ಮಿಶ್ರ ಸರ್ಕಾರ ಬಹುಮತ ಕಳೆದುಕೊಂಡಿದ್ದು, ಕೂಡಲೇ ಮುಖ್ಯಮಂತ್ರಿಗಳು ರಾಜೀನಾಮೆ ನೀಡಬೇಕು. 

ಇಲ್ಲವಾದಲ್ಲಿ ಪಕ್ಷ ಶುಕ್ರವಾರದಿಂದ ಆರಂಭವಾಗುವ ವಿಧಾನಸಭಾ ಅಧಿವೇಶನದಲ್ಲಿ ಹೋರಾಟ ನಡೆಸಲಿದೆ. ಸದನವನ್ನು ಬಹಿಷ್ಕರಿಸದೆ, ‘ಬಹುಮತ ಇಲ್ಲದ ಸರ್ಕಾರದ ಚಳಿ ಜ್ವರ ಬಿಡಿಸುವ ಕೆಲಸ ಮಾಡಲಿದೆ’ ಎಂದಿದ್ದಾರೆ.