ಬೆಂಗಳೂರು :  ನಗರದ ಚಾಲುಕ್ಯ ವೃತ್ತದಿಂದ ಹೆಬ್ಬಾಳದವರೆಗೆ ಸ್ಟೀಲ್‌ ಬ್ರಿಜ್‌ ನಿರ್ಮಿಸುವ ಯೋಜನೆಯನ್ನು ಪುನಃ ಜಾರಿಗೆ ತರಲು ರಾಜ್ಯ ಸರ್ಕಾರ ಮುಂದಾಗಿರುವುದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿರುವ ಬಿಜೆಪಿ, ಯಾವುದೇ ಕಾರಣಕ್ಕೂ ಯೋಜನೆ ಜಾರಿಗೊಳಿಸಲು ಬಿಡುವುದಿಲ್ಲ ಎಂದು ಸ್ಪಷ್ಟವಾಗಿ ಹೇಳಿದೆ.

ಉಕ್ಕಿನ ಸೇತುವೆಗೆ ಪರಿಸರ ಪ್ರೇಮಿಗಳು ಸೇರಿದಂತೆ ಹಲವು ಮಂದಿಯ ವಿರೋಧ ಇದೆ. ಬಿಜೆಪಿಯಿಂದಲೂ ಸಹ ಯೋಜನೆಗೆ ಸಹಮತ ಇಲ್ಲ. ಯಾವುದೇ ಕಾರಣಕ್ಕೂ ಯೋಜನೆಗೆ ಅವಕಾಶ ನೀಡುವುದಿಲ್ಲ ಎಂದು ಮಾಜಿ ಸಚಿವ ಕಟ್ಟಾಸುಬ್ರಹ್ಮಣ್ಯ ತಿಳಿಸಿದ್ದಾರೆ.

ಬಿಜೆಪಿ ಕಚೇರಿಯಲ್ಲಿ ಬುಧವಾರ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಅಭಿವೃದ್ಧಿ ಕಾರ್ಯಗಳಿಗೆ ಬಿಜೆಪಿ ವಿರೋಧ ಇಲ್ಲ. ಬಿಜೆಪಿ ಆಡಳಿತಾವಧಿಯಲ್ಲಿ ಚಾಲುಕ್ಯ ವೃತ್ತದಿಂದ ಏರ್‌ಪೋರ್ಟ್‌ವರೆಗೆ ಮೇಲ್ಸೇತುವೆ ಮಾಡುವ ಬಗ್ಗೆ ನೀಲಿನಕ್ಷೆ ರೂಪಿಸಲಾಗಿದೆ. ಅದನ್ನು ಸರ್ಕಾರ ಕಾರ್ಯರೂಪಕ್ಕೆ ತರಲು ಹಿಂದೇಟು ಹಾಕುತ್ತಿದೆ. ಉಕ್ಕಿನ ಸೇತುವೆ ನಿರ್ವಹಣೆ ದುಬಾರಿಯಾಗಲಿದೆ. ಸರ್ಕಾರಕ್ಕೆ ಅನಗತ್ಯ ವೆಚ್ಚ ಮತ್ತು ಪರಿಸರಕ್ಕೂ ಹಾನಿಯಾಗುವ ಹಿನ್ನೆಲೆಯಲ್ಲಿ ಯೋಜನೆಗೆ ವಿರೋಧ ವ್ಯಕ್ತಪಡಿಸಲಾಗುತ್ತಿದೆ ಎಂದು ಹೇಳಿದರು.

ನಗರದ ಶಿವಾನಂದ ವೃತ್ತದಲ್ಲಿ ಉಕ್ಕಿನ ಸೇತುವೆ ನಿರ್ಮಾಣ ಕಾಮಗಾರಿಯನ್ನು ಒಂಬತ್ತು ತಿಂಗಳಲ್ಲಿ ಪೂರ್ಣಗೊಳಿಸುವ ಬಗ್ಗೆ ಅಶ್ವಾಸನೆ ನೀಡಲಾಗಿತ್ತು. ಆದರೆ, ಎರಡು ವರ್ಷವಾದರೂ ಪೂರ್ಣಗೊಂಡಿಲ್ಲ. ಸ್ಟೀಲ್‌ ಬ್ರೀಜ್‌ ಮತ್ತು ವೈಟ್‌ ಟಾಪಿಂಗ್‌ ಮೇಲೆ ಸರ್ಕಾರಕ್ಕೆ ವ್ಯಾಮೋಹ ಬಂದಿದೆ ಎಂದು ಟೀಕಿಸಿದರು.

ಇಂದಿರಾ ಕ್ಯಾಂಟೀನ್‌ ವಿಫಲ:  ಕಾಂಗ್ರೆಸ್‌ ಆಡಳಿತದ ಅವಧಿಯಲ್ಲಿ ಆರಂಭವಾದ ಇಂದಿರಾ ಕ್ಯಾಂಟೀನ್‌ ಯೋಜನೆಯು ಸಂಪೂರ್ಣ ವಿಫಲವಾಗಿದೆ. ಇಂದಿರಾ ಕ್ಯಾಂಟೀನ್‌ನಲ್ಲಿ ಎಷ್ಟುಜನ ಬಂದು ಊಟ ಮಾಡಿದ್ದಾರೆ, ಎಷ್ಟುಹಣ ವ್ಯಯಿಸಲಾಗಿದೆ ಎಂಬ ನಿಖರವಾದ ಮಾಹಿತಿ ಗೊತ್ತಿಲ್ಲ, ಜನತೆಯ ಹಣ ಗುತ್ತಿಗೆದಾರರ ಪಾಲಾಗುತ್ತಿದೆ. ಈ ಬಗ್ಗೆ ಸಮಗ್ರ ತನಿಖೆಯಾಗಬೇಕು ಎಂದು ಇದೇ ವೇಳೆ ಕಟ್ಟಾಒತ್ತಾಯಿಸಿದರು.

ಇಂದಿರಾ ಕ್ಯಾಂಟೀನ್‌ನನ್ನು ಪಾರದರ್ಶಕವಾಗಿ ಜನರಿಗೆ ಅನುಕೂಲವಾಗುವಂತೆ ನಡೆಸಬೇಕು. ಇಲ್ಲದಿದ್ದರೆ ಮುಚ್ಚಬೇಕು. ಬಡವರಿಗೆ ಕಡಿಮೆ ದರದಲ್ಲಿ ಆಹಾರ ನೀಡುವುದಕ್ಕೆ ವಿರೋಧ ಇಲ್ಲ. ಆದರೆ, ನ್ಯಾಯಯುತವಾಗಿ ನಡೆಸಬೇಕು ಎಂಬುದು ಮಾತ್ರ ನಮ್ಮ ಕಾಳಜಿಯಾಗಿದೆ ಎಂದರು.