ಬೆಂಗಳೂರು [ಜು.25]:  ಜೆಡಿಎಸ್‌ ಮತ್ತು ಕಾಂಗ್ರೆಸ್‌ ನೇತೃತ್ವದ ಸಮ್ಮಿಶ್ರ ಸರ್ಕಾರ ಪತನಗೊಂಡ ಬೆನ್ನಲ್ಲೇ ಪರ್ಯಾಯ ಸರ್ಕಾರ ರಚಿಸುವ ಸಂಬಂಧ ಪ್ರತಿಪಕ್ಷ ಬಿಜೆಪಿಯ ಹೈಕಮಾಂಡ್‌ ಆತುರ ತೋರದಿರಲು ನಿರ್ಧರಿಸಿದೆ.

ಕಾಂಗ್ರೆಸ್‌ ಮತ್ತು ಜೆಡಿಎಸ್‌ಗೆ ಸೇರಿದ 15 ಶಾಸಕರ ರಾಜೀನಾಮೆ ಇನ್ನೂ ಅಂಗೀಕಾರವಾಗಲಿ ಅಥವಾ ತಿರಸ್ಕಾರವಾಗಲಿ ಆಗದೇ ಇರುವುದರಿಂದ ಎಚ್ಚರಿಕೆಯ ಹೆಜ್ಜೆ ಇಡುತ್ತಿರುವ ವರಿಷ್ಠರು ಕಾನೂನಿನ ತೊಡಕುಗಳ ಬಗ್ಗೆ ಅನುಮಾನಗಳನ್ನು ನಿವಾರಿಸಿಕೊಂಡ ನಂತರವೇ ಸರ್ಕಾರ ರಚನೆಗೆ ಮುಂದಾಗುವುದು ಸೂಕ್ತ ಎಂಬ ನಿಲುವಿಗೆ ಬಂದಿದ್ದಾರೆ ಎಂದು ಉನ್ನತ ಮೂಲಗಳಿಂದ ತಿಳಿದು ಬಂದಿದೆ.

ಹೀಗಾಗಿ, ಮುಖ್ಯಮಂತ್ರಿ ಸ್ಥಾನಕ್ಕಾಗಿ ಶಾಸಕಾಂಗ ಪಕ್ಷದ ನಾಯಕನನ್ನು ಆಯ್ಕೆ ಮಾಡಲು ಬುಧವಾರ ನಡೆಯಬೇಕಿದ್ದ ಸಭೆ ನಡೆಯಲಿಲ್ಲ. ಸಭೆ ನಡೆಸಲು ಶಾಸಕಾಂಗ ಪಕ್ಷದ ನಾಯಕರೂ ಆಗಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಅವರು ಸಿದ್ಧರಾಗಿದ್ದರೂ ಬಿಜೆಪಿ ಹೈಕಮಾಂಡ್‌ನಿಂದ ತುಸು ಕಾಯಿರಿ ಎಂಬ ಸಂದೇಶ ರವಾನೆಯಾಯಿತು.

ಬುಧವಾರವೇ ಶಾಸಕಾಂಗ ಪಕ್ಷದ ಸಭೆಯಲ್ಲಿ ನಾಯಕನನ್ನು ಆಯ್ಕೆ ಮಾಡಿ ಅದರ ಪ್ರತಿಯೊಂದಿಗೆ ರಾಜ್ಯಪಾಲರನ್ನು ಭೇಟಿ ಮಾಡಿ ಸರ್ಕಾರ ರಚನೆಗೆ ಹಕ್ಕೊತ್ತಾಯ ಮಂಡಿಸಲು ಮಂಗಳವಾರ ರಾತ್ರಿಯೇ ತೀರ್ಮಾನಿಸಲಾಗಿತ್ತು. ಆದರೆ, ಬುಧವಾರ ಬೆಳಗ್ಗೆ ದೆಹಲಿಯಿಂದ ಬಂದ ಸಂದೇಶದಲ್ಲಿ ಆತುರ ಬೇಡ ಎಂಬ ಸಲಹೆ ನೀಡಲಾಗಿದೆ. ನಾವು ಕಾನೂನು ತೊಡಕುಗಳ ಬಗ್ಗೆ ಪರಿಶೀಲಿಸಿ ಮಾಹಿತಿ ನೀಡುತ್ತೇವೆ. ಅಲ್ಲಿವರೆಗೆ ಮುಂದಿನ ಪ್ರಕ್ರಿಯೆ ನಡೆಸುವುದು ಬೇಡ ಎಂಬ ಸೂಚನೆ ರವಾನಿಸಿದ್ದಾರೆ ಎಂದು ಪಕ್ಷದ ಹಿರಿಯ ನಾಯಕರೊಬ್ಬರು ‘ಕನ್ನಡಪ್ರಭ’ಕ್ಕೆ ಮಾಹಿತಿ ನೀಡಿದರು.

ಇದರ ಪರಿಣಾಮ ಯಡಿಯೂರಪ್ಪ ಅವರು ಬುಧವಾರ ಬೆಳಗ್ಗೆ ತಮ್ಮ ನಿವಾಸದಲ್ಲಿ ಪಕ್ಷದ ಮುಖಂಡರೊಂದಿಗೆ ಸಮಾಲೋಚನೆ, ವಿವಿಧಡೆಯಿಂದ ಆಗಮಿಸಿದ್ದ ಕಾರ್ಯಕರ್ತರ ಶುಭಾಶಯ ಕೋರಿದ ನಂತರ ರಾಷ್ಟ್ರೀಯ ಸ್ವಯಂಸೇವಕ ಸಂಘದ ಮುಖಂಡರನ್ನು ಭೇಟಿ ಮಾಡಲು ಚಾಮರಾಜಪೇಟೆಗೆ ತೆರಳಿದರು. ಅಲ್ಲಿಂದ ನಂತರ ನೇರವಾಗಿ ತಮ್ಮ ನಿವಾಸಕ್ಕೇ ವಾಪಸಾಗಿ ಸರಣಿ ಸಭೆಗಳನ್ನು ಮುಂದುವರೆಸಿದರು.

ವಿಳಂಬಕ್ಕೇನು ಕಾರಣ?

- ಕಳೆದ 14 ತಿಂಗಳ ಹಿಂದೆ ಯಡಿಯೂರಪ್ಪ ನೇತೃತ್ವದಲ್ಲಿ ಬಿಜೆಪಿ ಸರ್ಕಾರ ರಚನೆಯಾಗಿ ನಂತರ ಮೂರೇ ದಿನಗಳಲ್ಲಿ ಬಹುಮತ ಸಾಬೀತುಪಡಿಸದೆ ಪತನಗೊಂಡಿತ್ತು. ಹೀಗಾಗಿ, ಈ ಬಾರಿ ಮತ್ತೊಮ್ಮೆ ಅಂಥ ಬೆಳವಣಿಗೆಗಳಿಗೆ ಆಸ್ಪದ ಕೊಡದಂತೆ ಎಲ್ಲ ರೀತಿಯ ಬಂದೋಬಸ್‌್ತ ಮಾಡಿಕೊಂಡು ಸರ್ಕಾರ ರಚಿಸುವುದು ಸೂಕ್ತ ಎಂಬ ನಿಲುವಿಗೆ ಬಂದಿದೆ. ಒಂದು ವೇಳೆ ಈಗ ಸರ್ಕಾರ ರಚನೆಯಾಗಿ ಪತನಗೊಂಡರೆ ರಾಷ್ಟ್ರೀಯ ಮಟ್ಟದಲ್ಲಿ ಅಪಮಾನ ಎದುರಿಸಬೇಕಾಗುತ್ತದೆ ಎಂಬ ಕಾರಣಕ್ಕಾಗಿ ಗಡಿಬಿಡಿ ಮಾಡದಿರುವ ನಿಲುವು ಕೈಗೊಂಡಿದೆ.

- ಕಾಂಗ್ರೆಸ್‌ ಮತ್ತು ಜೆಡಿಎಸ್‌ನ ಅತೃಪ್ತ ಶಾಸಕರ ರಾಜೀನಾಮೆ ಇನ್ನೂ ಇತ್ಯರ್ಥವಾಗುವುದು ಬಾಕಿ ಇದೆ. ವಿಧಾನಸಭೆಯ ಸ್ಪೀಕರ್‌ ಹಂತದಲ್ಲಿ ಅಥವಾ ಸುಪ್ರೀಂಕೋರ್ಟ್‌ ಹಂತದಲ್ಲಿ ಪರಿಹಾರ ಸಿಕ್ಕಲ್ಲಿ ಮಾತ್ರ ಬಿಜೆಪಿ ಸರ್ಕಾರ ರಚನೆಯಾದ ನಂತರ ಸುಭದ್ರವಾಗಿರುತ್ತದೆ. ಇಲ್ಲದಿದ್ದರೆ ಕಿರಿಕಿರಿ ತಪ್ಪಿದ್ದಲ್ಲ. ಹೀಗಾಗಿ, ಈ ವಿಷಯದಲ್ಲಿ ಕಾನೂನು ತಜ್ಞರ ಅಭಿಪ್ರಾಯ ಸಂಗ್ರಹಿಸಿ ಮುಂದುವರೆಯಲು ಮುಂದಾಗಿದೆ.

- ಕಾನೂನಿನ ತೊಡಕುಗಳು ನಿವಾರಣೆಯಾದ ನಂತರ ಪಕ್ಷದ ರಾಷ್ಟ್ರೀಯ ಸಂಸದೀಯ ಮಂಡಳಿ ಸಭೆಯಲ್ಲಿ ಚರ್ಚಿಸಿ ಸರ್ಕಾರ ರಚನೆ ಪ್ರಕ್ರಿಯೆ, ಯಾವಾಗ ಪ್ರಮಾಣವಚನ ಸ್ವೀಕರಿಸಬೇಕು, ಯಾರೆಲ್ಲ ಪ್ರಮಾಣ ಸ್ವೀಕರಿಸಬೇಕು ಎಂಬುದನ್ನೆಲ್ಲ ಚರ್ಚಿಸಿ ನಿರ್ಧಾರ ಕೈಗೊಳ್ಳಲು ಸಮಯ ಬೇಕಾಗುತ್ತದೆ. ನಂತರ ಆ ನಿರ್ಧಾರದೊಂದಿಗೆ ಕೇಂದ್ರದಿಂದ ವೀಕ್ಷಕರೊಬ್ಬರನ್ನು ರಾಜ್ಯಕ್ಕೆ ಕಳುಹಿಸಿ ಮುಂದಿನ ಪ್ರಕ್ರಿಯೆ ನಡೆಸಬೇಕಾಗುತ್ತದೆ.