ಬನವಾಸಿ, ಶಿರಸಿ, ಕೊಲ್ಲೂರು, ಆನೆಗುಡ್ಡೆ, ಉಡುಪಿ ದೇವಸ್ಥಾನಗಳಿಗೆ ಭೇಟಿ | ಸ್ತ್ರೀಶಕ್ತಿ ಸಂಘದವರನ್ನು ಪ್ರವಾಸಕ್ಕೆ ಕೊಂಡೊಯ್ದ ಬಿಜೆಪಿ ಮುಖಂಡ

ಶಿವಮೊಗ್ಗ (ಏ.24): ಬಿಜೆಪಿ ಮುಖಂಡ ಬಿಜೆಪಿ ನಾಯಕ ಕೆ.ಎಸ್‌.ಈಶ್ವರಪ್ಪ ಅವರು ಶಿವಮೊಗ್ಗ ಜಿಲ್ಲೆಯ ಸ್ತ್ರೀಶಕ್ತಿ ಸಂಘಟನೆಗಳ ಸದಸ್ಯರಿಗೆ ಪ್ರವಾಸಭಾಗ್ಯ ಕಲ್ಪಿಸಿದ್ದಾರೆ. ಬರೋಬ್ಬರಿ 4000 ಸದಸ್ಯರನ್ನು 80 ಬಸ್‌ಗಳಲ್ಲಿ ಕರೆದೊಯ್ದು ದೇಗುಲಗಳ ದರ್ಶನ ಮಾಡಿಸಿದ್ದಾರೆ.

ಸ್ತ್ರೀಶಕ್ತಿ ಸಂಘದ ನಾಲ್ಕು ಸಾವಿರಕ್ಕೂ ಹೆಚ್ಚು ಮಂದಿ ಸದಸ್ಯರು ಉತ್ತರ ಕನ್ನಡ ಜಿಲ್ಲೆ, ಉಡುಪಿಯ ಪ್ರವಾಸ ಮಾಡಿದ್ದಾರೆ. ಶನಿವಾರ ಬೆಳಗ್ಗೆ ಆರಂಭವಾದ ಈ ಪ್ರವಾಸ ಭಾನುವಾರ ರಾತ್ರಿ ಮುಕ್ತಾಯ​ವಾಗಿದೆ. ಧಾರ್ಮಿಕ ಸ್ಥಳಗಳ ವೀಕ್ಷಣೆಯೇ ಈ ಪ್ರವಾಸದ ಉದ್ದೇಶ. ಉತ್ತರ ಕನ್ನಡ ಜಿಲ್ಲೆಯ ಬನವಾಸಿ ಶ್ರೀ ದೇವಸ್ಥಾನ, ಅಲ್ಲಿಂದ ಮಾರಿಕಾಂಬಾ ದೇವಾಲಯ, ಈಶ್ವರ, ಗಣಪತಿ ದೇವಸ್ಥಾನ, ಗೋಳಿಯ ಶ್ರೀ ಸಿದ್ಧಿವಿನಾಯಕ ದೇವಸ್ಥಾನಕ್ಕೆ ತೆರಳಿದರು.

ನಂತರ ಮುರುಡೇಶ್ವರ, ಕೊಲ್ಲೂರು, ಆನೆಗುಡ್ಡೆ ಹಾಗೂ ಉಡುಪಿಯ ಕೃಷ್ಣಮಠಕ್ಕೆ ಭೇಟಿ ನೀಡಿ ನೇರವಾಗಿ ಶಿವಮೊಗ್ಗಕ್ಕೆ ವಾಪಸಾಗಿದೆ. ಈ ವೇಳೆ ಕೊಲ್ಲೂರಲ್ಲಿ ಚಂಡಿಕಾ ಯಾಗದಲ್ಲಿ ಪಾಲ್ಗೊಂಡಿದ್ದ ಈ ತಂಡ ಉಡುಪಿಯಲ್ಲಿ ಪೇಜಾವರ ಶ್ರೀಗಳನ್ನು ಭೇಟಿಯಾಗಿ ಆಶೀರ್ವಾದ ಪಡೆಯಿತು.

ಈಶ್ವರಪ್ಪ ಅವರು ಈ ರೀತಿಯ ಧಾರ್ಮಿಕ ಪ್ರವಾಸ ಆಯೋಜಿಸು​ತ್ತಿರುವುದು ಇದೇ ಮೊದಲೇನಲ್ಲ. ಈ ಪ್ರವಾಸವೆಲ್ಲವೂ ಈಶ್ವರಪ್ಪ ಅವರ ಮಾರ್ಗದರ್ಶನದಲ್ಲೇ ನಡೆಯುತ್ತಿರುವ, ಶಿವಮೊಗ್ಗದ ಶ್ರೀ ಮಾರಿಕಾಂಬಾ ಮೈಕ್ರೋ ಫೈನಾನ್ಸ್‌ ಹೆಸರಲ್ಲಿ ಆಯೋಜಿ​ಸÇ​ಾ​ಗುತ್ತಿದೆ. ಆಗಾಗ್ಗೆ ಸ್ತ್ರೀಶಕ್ತಿ ಸಂಘದವರನ್ನು ಪ್ರವಾಸಕ್ಕಾಗಿ ಕರೆದೊಯ್ಯುತ್ತಾರೆ. ಒಮ್ಮೆಯಂತೂ ಈ ಪ್ರವಾಸ ಹಾವೇರಿಯಲ್ಲಿ ನಡೆದ ಸಂಗೊಳ್ಳಿ ರಾಯಣ್ಣ ಬ್ರಿಗೇಡ್‌ ಸಮಾವೇಶದತ್ತ ಮುಖ ಮಾಡಿದ್ದುಂಟು.

ಈ ಬಾರಿ ಶನಿವಾರ ಮುಂಜಾನೆ ಶಿವಮೊಗ್ಗದಿಂದ ಹೊರಟು, ಬನವಾಸಿ, ಶಿರಸಿ, ಮುರುಡೇಶ್ವರ ವೀಕ್ಷಿಸಿ, ರಾತ್ರಿ ಕೊಲ್ಲೂರಲ್ಲಿ ಈ ತಂಡ ತಂಗಿತ್ತು. ಅಲ್ಲಿ ಭಾನುವಾರ ಬೆಳಗ್ಗೆ ಚಂಡಿಕಾ ಹೋಮ ನೆರವೇರಿಸಿ ಆನೆಗುಡ್ಡೆ, ಉಡುಪಿ ಕ್ಷೇತ್ರಗಳಿಗೆ ತೆರಳಿ ಶಿವಮೊಗ್ಗಕ್ಕೆ ಹಿಂದಿರುಗಿದೆ.