ಬಳ್ಳಾರಿ :  ಕಾಂಗ್ರೆಸ್‌ನ ಸೋನಿಯಾ ಗಾಂಧಿ ಕುಟುಂಬ ಹಾಗೂ ಜೆಡಿಎಸ್‌ನ ಎಚ್‌.ಡಿ. ದೇವೇಗೌಡ ಅವರ ಕುಟುಂಬ ‘ರಿಪಬ್ಲಿಕ್‌ ಆಫ್‌ ಫ್ಯಾಮಿಲಿ’ ಮಾಡಿಕೊಂಡಿವೆ ಎಂದು ಆರೋಪಿಸಿರುವ ಶಾಸಕ ಬಿ.ಶ್ರೀರಾಮುಲು, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಏಕವಚನದಲ್ಲೇ ವಾಗ್ದಾಳಿ ನಡೆಸಿದ್ದಾರೆ.

ಗುರುವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕುಟುಂಬ ರಾಜಕಾರಣದ ಬಗ್ಗೆ ಆರೋಪ ಮಾಡುವ ಈ ಎರಡು ಪಕ್ಷಗಳ ಧುರೀಣರು ತಮ್ಮ ಕುಟುಂಬದ ಸದಸ್ಯರನ್ನೇ ರಾಜಕೀಯಕ್ಕೆ ಕರೆ ತರುತ್ತಿಲ್ಲವೇ? ಎಂದು ಪ್ರಶ್ನಿಸಿದರಲ್ಲದೆ, ರಿಪಬ್ಲಿಕ್‌ ಆಫ್‌ ಫ್ಯಾಮಿಲಿ ಮಾಡಿಕೊಂಡಿದ್ದಾರೆ ಎಂದು ದೂರಿದರು.

ಸೋನಿಯಾ ಗಾಂಧಿ ಅವರು ಬಳ್ಳಾರಿಯಿಂದ ಗೆದ್ದ ಬಳಿಕ ರಾಜೀನಾಮೆ ನೀಡಿ ಹೋದರು. ಮರಳಿ ಬಳ್ಳಾರಿ ಕಡೆಗೆ ತಿರುಗಿ ನೋಡಲಿಲ್ಲ. ಈ ಹಿಂದಿನ ಸರ್ಕಾರದಲ್ಲಿ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಅವರು ದಲಿತ ವಿದ್ಯಾರ್ಥಿಗಳಿಗೆ ಮಾತ್ರ ಪ್ರವಾಸ ಮಾಡಿಸಿದರು. ದಲಿತ ಮಕ್ಕಳಿಗೆ ಲ್ಯಾಪ್‌ಟ್ಯಾಪ್‌ ನೀಡಿದರು. ಈ ಮೂಲಕ ಮಕ್ಕಳಲ್ಲಿ ವಿಷಬೀಜ ಬಿತ್ತುವ ಕೆಲಸ ಮಾಡಿದರು. ವೀರಶೈವ-ಲಿಂಗಾಯತ ಎಂದು ಪ್ರತ್ಯೇಕ ಧರ್ಮ ಮಾಡಲು ಹೋಗಿ ಧರ್ಮದಲ್ಲಿ ಕಂದಕ ಸೃಷ್ಟಿಮಾಡಿದರು. ಓದಿಕೊಂಡು ಬುದ್ಧಿವಂತರಾದವರು ಈ ರೀತಿಯ ಕೆಲಸ ಮಾಡಬಹುದೆ? ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಹರಿಹಾಯ್ದರು.

ವಾಲ್ಮೀಕಿ ಸಮಾಜಕ್ಕೆ ಅವಮಾನ:  ವಾಲ್ಮೀಕಿ ಮಹರ್ಷಿಗಳ ಪ್ರಶಸ್ತಿಗೆ ಆಯ್ಕೆಯಾದ ಮಾಜಿ ಪ್ರಧಾನಮಂತ್ರಿ ಎಚ್‌.ಡಿ.ದೇವೇಗೌಡರು ಪ್ರಶಸ್ತಿ ಪಡೆಯಲು ಬರಲಿಲ್ಲ. ಮುಖ್ಯಮಂತ್ರಿ ಹಾಗೂ ಉಪ ಮುಖ್ಯಮಂತ್ರಿಗಳಾಗಲೀ ಸಮಾರಂಭಕ್ಕೆ ಬರದೆ ಸಮಾಜಕ್ಕೆ ಅವಮಾನಗೊಳಿಸಿದರು ಎಂದು ದೂರಿದರು.

108 ಆ್ಯಂಬುಲೆನ್ಸ್‌ ಬಂದರೆ ಜನ ನನ್ನನ್ನು ಸ್ಮರಿಸುತ್ತಾರೆ

ಸಿದ್ದರಾಮಯ್ಯ ಸಾಕಷ್ಟುಓದಿಕೊಂಡಿದ್ದಾನೆ. ಆತನಷ್ಟುಬುದ್ಧಿವಂತ ನಾನಲ್ಲ. ಆತನಿಗೆ ಹೋಲಿಸಿದರೆ ನಾನು ದಡ್ಡ ಎಂದು ಒಪ್ಪಿಕೊಳ್ಳುತ್ತೇನೆ. ಆದರೆ, ನನಗೆ ಸಂವಿಧಾನ ಗೊತ್ತಿದೆ. ಅಂಬೇಡ್ಕರ್‌ ಅವರ ಆಶಯಗಳು ಏನು ಅಂತ ತಿಳಿದಿದೆ. ಅಷ್ಟುಮಾತ್ರ ಖಚಿತವಾಗಿ ಹೇಳಲು ಬಯಸುತ್ತೇನೆ. ನನ್ನನ್ನು 420 ಎಂದು ಸಿದ್ದರಾಮಯ್ಯ ಜರಿದಿದ್ದಾರೆ. 307, 305 ಸೆಕ್ಷನ್‌ ಗೊತ್ತು ಎಂದು ಹೇಳಿದ್ದಾರೆ. ಸಿದ್ದರಾಮಯ್ಯ ಅವರು ನೆನಪಿಟ್ಟುಕೊಳ್ಳಬೇಕು. 108 ಅಂಬ್ಯುಲೆನ್ಸ್‌ ಬಂದರೆ ಜನ ನನ್ನನ್ನು ನೆನಪಿಸಿಕೊಳ್ಳುತ್ತಾರೆ ರಾಮುಲು ಹೇಳಿದರು.

ಇದು ಸ್ವಾಭಿಮಾನದ ಚುನಾವಣೆ. ಕಾಂಗ್ರೆಸ್‌ನ ಇಡೀ ನಾಯಕರು ಬಳ್ಳಾರಿಗೆ ಬಂದು ಕುಳಿತಿದ್ದಾರೆ. ಎಷ್ಟೇ ಜನರು ಬರಲಿ. ಬಳ್ಳಾರಿ ಜಿಲ್ಲೆಯ ಜನರು ಸ್ವಾಭಿಮಾನಿಗಳು. ತವರು ಮನೆಯ ಮಗಳನ್ನು ಎಂದೂ ಬಿಟ್ಟುಕೊಡುವುದಿಲ್ಲ. ಬಿಜೆಪಿ ಅಭ್ಯರ್ಥಿ ಜೆ.ಶಾಂತಾ ಅವರನ್ನು ಭಾರೀ ಬಹುಮತದಿಂದ ಚುನಾಯಿಸುತ್ತಾರೆ ಎಂಬ ವಿಶ್ವಾಸವಿದೆ ಎಂದು ಹೇಳಿದರು.