ನವದೆಹಲಿ[ಆ.18]: ಪ್ರಧಾನಿ ನರೇಂದ್ರ ಮೋದಿ ಅವರು ಪ್ರವಾಹ ಪರಿಹಾರ ಕುರಿತ ನಮ್ಮ ಅಹವಾಲನ್ನು 45 ನಿಮಿಷಗಳ ಕಾಲ ಆಲಿಸಿದ್ದಾರೆ. ಕೇಂದ್ರದಲ್ಲಿ ಕಾಂಗ್ರೆಸ್‌ ಸರ್ಕಾರ ಇದ್ದ ಸಂದರ್ಭದಲ್ಲಿ ರಾಜ್ಯದ ನೆರೆ ಹಾಗೂ ಬರದ ಬಗ್ಗೆ ಚರ್ಚಿಸಲು ಸಮಯವನ್ನೇ ನೀಡುತ್ತಿರಲಿಲ್ಲ ಎಂದು ಮಾಜಿ ಉಪ ಮುಖ್ಯಮಂತ್ರಿ ಆರ್‌.ಅಶೋಕ್‌ ದೂರಿದ್ದಾರೆ.

ದೆಹಲಿಯಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಪ್ರಧಾನಿ ಮೋದಿ ರಾಜ್ಯಕ್ಕೆ ಸೂಕ್ತ ಪ್ರಮಾಣದಲ್ಲಿ ಪರಿಹಾರ ಬಿಡುಗಡೆ ಮಾಡಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ನಮ್ಮ ಸರ್ಕಾರವನ್ನು ಕಾಂಗ್ರೆಸ್‌ಗೆ ಹೋಲಿಕೆ ಮಾಡಲು ಸಾಧ್ಯವಿಲ್ಲ. ಡಾ.ಮನಮೋಹನ್‌ ಸಿಂಗ್‌ ಮತ್ತು ಮೋದಿ ಸರ್ಕಾರದ ಕೊಡುಗೆಯನ್ನು ತುಲನೆ ಮಾಡುವ ಮೂಲಕ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹುಳಿ ಹಿಂಡುವ ಕೆಲಸವನ್ನು ಮಾಡಬಾರದು. ಅವರಿಗೆ ಹುಳಿ ಸಿದ್ದರಾಮಯ್ಯ ಎಂಬ ಬಿರುದು ಬೇಡ, ‘ನಿದ್ದೆರಾಮಯ್ಯ’ ಎಂಬ ಬಿರುದೇ ಇರಲಿ ಎಂದು ಅಶೋಕ್‌ ಲೇವಡಿ ಮಾಡಿದರು.

ಕಾಂಗ್ರೆಸ್‌ಗೆ ಈ ಬಾರಿ ರಾಜ್ಯದಲ್ಲಿ ಲೋಕಸಭೆಯಲ್ಲಿ ಒಂದಾದರೂ ಸೀಟು ಸಿಕ್ಕಿದೆ. ಪರಿಸ್ಥಿತಿ ಹೀಗೆ ಮುಂದುವರೆದ ಶೂನ್ಯಕ್ಕೆ ಸೀಮಿತವಾಗಬೇಕಾಗುತ್ತದೆ ಎಂದು ಕಾಲೆಳೆದರು.