ನವದೆಹಲಿ[ಏ.30]: ಜೀವನೋಪಾಯಕ್ಕಾಗಿ ಒಂದು ಸಮಯದಲ್ಲಿ ಚಹಾ ಮಾರುತ್ತಿದ್ದ ಬಿಜೆಪಿ ಕಾರ್ಪೋರೇಟರ್ ಅವತಾರ್ ಸಿಂಗ್ ಉತ್ತರ ದೆಹಲಿಯ ಮೇಯರ್ ಆಗಿ ಅವಿರೋಧ ಆಯ್ಕೆಯಾಗಿದ್ದಾರೆ. ಸಿಂಗ್ ಈ ಸ್ಥಾನಕ್ಕೇರಿದ ಮೊದಲ ದಲಿತ ಸಿಖ್ ನಾಯಕರಾಗಿದ್ದಾರೆ. ನಗರ ನಿಗಮದ ಹಿರಿಯ ಸದಸ್ಯರೊಬ್ಬರು ಈ ವಿಚಾರವಾಗಿ ಪ್ರತಿಕ್ರಿಯಿಸುತ್ತಾ 'ದೆಹಲಿ ಬಿಜೆಪಿ ಪ್ರಮುಖ ನಾಯಕ ಮನೋಜ್ ತಿವಾರಿಯವರೇ ಸಿಂಗ್ ಹೆಸರನ್ನು ನಾಮನಿರ್ದೆಶನ ಮಾಡಿದ್ದರು ಹಾಗೂ ನಗರ ನಿಗಮದ ಸಾಮಾನ್ಯ ಸಭೆಯಲ್ಲಿ ನಡೆದ ಚುನಾವಣೆಯಲ್ಲಿ ಅವರನ್ನು ಮೆಯರ್ ಆಗಿ ಅವಿರೊಧ ಆಯ್ಕೆ ಮಾಡಲಾಗಿದೆ' ಎಂದಿದ್ದಾರೆ.

ದೆಹಲಿ ಬಿಜೆಪಿಯ ಹಿರಿಯ ಸದಸ್ಯರೊಬ್ಬರು ಮಾತನಾಡುತ್ತಾ 'ಸಿಂಗ್ ಬಿಜೆಪಿಯ ಅತ್ಯಂತ ಶ್ರಮಜೀವಿ ನಾಯಕ. ತನ್ನ ಕಠಿಣ ಪರಿಶ್ರಮದ ಫಲವಾಗಿ ಅವರು ಚಹಾ ಮಾರುವುದರಿಂದ ಆರಂಭಿಸಿ, ಮೇಯರ್ ಸ್ಥಾನಕ್ಕೇರಿದ್ದಾರೆ' ಎಂದಿದ್ದಾರೆ. ಸಿಂಗ್ ರಾಮ್ ಲೀಲಾದಲ್ಲಿ ಹಲವಾರು ಪಾತ್ರಗಳಲ್ಲಿ ನಟಿಸುತ್ತಿದ್ದರು. ಇಷ್ಟೇ ಅಲ್ಲದೇ ಅವರು ಪಂಚತಾರಾ ಹೋಟೆಲ್ ಒಂದರಲ್ಲಿ ಮಾಣಿಯಾಗಿಯೂ ದುಡಿದಿದ್ದಾರೆ ಎನ್ನಲಾಗುತ್ತಿದೆ.

ಇದಕ್ಕೂ ಮೊದಲು ಬಿಜೆಪಿ ಕಾರ್ಪೋರೇಟರ್ ಸುನಿತಾ ಕಾಂಗ್ಡಾರನ್ನು ಸಭೆಯೊಂದರಲ್ಲಿ ಸರ್ವಾನುಮತಿಯಿಂದ ದಕ್ಷಿಣ ದೆಹಲಿಯ ನಗರ ನಿಗಮದ ಮೇಯರ್ ಆಗಿ ಆಯ್ಕೆ ಮಾಡಲಾಗಿತ್ತು. ಇದೇ ಸಂದರ್ಭದಲ್ಲಿ ಬಿಜೆಪಿ ಆಡಳಿತದ ನಗರ ನಿಗಮವು ಸರ್ವಾನುಮತಿಯಿಂದ ರಾಜದತ್ತ್ ಗೆಹ್ಲೋಟ್ ರನ್ನುತನ್ನ ನೂತನ ಉಪ ಮೇಯರ್ ಆಗಿ ಆಯ್ಕೆ ಮಾಡಿದೆ. 

ಉತ್ತರ ದೆಹಲಿಯ ಬಿಜೆಪಿ ಕಾರ್ಪೋರೇಟರ್ ಆಗಿ ಆಯ್ಕೆಯಾದ ಅವತಾರ್ ಸಿಂಗ್ ರವರಿಗೆ ಪ್ರಧಾನಿ ಮೋದಿ ಕೂಡಾ ಟ್ವೀಟ್ ಮಾಡಿ ಶುಭಾಶಯ ತಿಳಿಸಿದ್ದಾರೆ.