Asianet Suvarna News Asianet Suvarna News

‘ರೈತರ ವಿರುದ್ಧ ಸಿಎಂ ಆಕ್ಷೇಪಾರ್ಹ ಹೇಳಿಕೆ’

ಭಾರತದ ಸಂವಿಧಾನದ ಮೂರನೇ ಪರಿಚ್ಛೇದದ ಅಡಿಯಲ್ಲಿ ಸ್ವೀಕರಿಸಿದ ಪ್ರಮಾಣ ವಚನದ ಸ್ಪಷ್ಟ ಉಲ್ಲಂಘನೆಯೂ ಆಗಿದೆ. ರೈತರ ವಿರುದ್ಧ ಅವರ ಮಾತುಗಳು ಅತ್ಯಂತ ಆಕ್ಷೇಪಾರ್ಹ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಹೇಳಿದ್ದಾರೆ. 

BJP Leader BS Yeddyurappa Slams CM HD Kumaraswamy
Author
Bengaluru, First Published Jul 25, 2018, 2:26 PM IST

ಬೆಂಗಳೂರು :  ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಉತ್ತರ ಕರ್ನಾಟಕದ ಜನರ ಬಗ್ಗೆ ಆಡಿದ ಮಾತುಗಳು ಅವರು ಅಲಂಕರಿಸಿದ  ಮುಖ್ಯಮಂತ್ರಿಯ ಪದವಿಗೆ ಅಪಮಾನ ಮಾಡುವಂಥದ್ದು ಎಂದು ವಿಧಾನಸಭೆಯ ಪ್ರತಿಪಕ್ಷದ ನಾಯಕ ಬಿ. ಎಸ್.ಯಡಿಯೂರಪ್ಪ ತೀಕ್ಷ್ಣವಾಗಿ ಹೇಳಿದ್ದಾರೆ. 

ರಾಜ್ಯದ ಇತಿಹಾಸದಲ್ಲಿ ಯಾವ ಮುಖ್ಯಮಂತ್ರಿಯೂ ಇಂತಹ ದುರಹಂಕಾರದ ಮತ್ತು ಅಪಮಾನಕರದ ಮಾತುಗಳನ್ನು ಆಡಿರಲಿಲ್ಲ. ಕುಮಾರಸ್ವಾಮಿ ಅವರು ಸೋಮವಾರ ಚನ್ನಪಟ್ಟಣದಲ್ಲಿ ಆಡಿದ ಒಂದೊಂದು ಮಾತು ಇಡೀ ರಾಜ್ಯದ ಜನ ಸಮೂಹಕ್ಕೆ ಅವಮಾನವಷ್ಟೇ ಅಲ್ಲ, ಜನರ ಮನಸ್ಸಿಗೆ ನೋವು ಮತ್ತು ಘಾಸಿ  ಉಂಟುಮಾಡಿದೆ ಎಂದೂ ಅವರು ಕಿಡಿಕಾರಿದ್ದಾರೆ.

ಮುಂದಿನ ದಿನಗಳಲ್ಲಿ ಕುಮಾರಸ್ವಾಮಿ ಅವರ ನಡೆ ನುಡಿ ಮತ್ತು ಅವರ ಜನ ವಿರೋಧಿ ನೀತಿ ಬಗ್ಗೆ ನಮ್ಮ ಪಕ್ಷ ಹೋರಾಟ ರೂಪಿಸುವುದಲ್ಲದೇ ಇವರ ಸಂವಿಧಾನ ವಿರೋಧಿ ಹೇಳಿಕೆಗಳನ್ನು ರಾಜ್ಯಪಾಲರ ಮತ್ತು ರಾಷ್ಟ್ರಪತಿಗಳ ಗಮನಕ್ಕೆ ತರುತ್ತೇವೆ. ಏಕೆಂದರೆ ಕುಮಾರಸ್ವಾಮಿಯವರ ಹೇಳಿಕೆ ಭಾರತದ ಸಂವಿಧಾನದ ಮೂರನೇ ಪರಿಚ್ಛೇದದ ಅಡಿಯಲ್ಲಿ ಸ್ವೀಕರಿಸಿದ ಪ್ರಮಾಣ ವಚನದ ಸ್ಪಷ್ಟ ಉಲ್ಲಂಘನೆಯೂ ಆಗಿದೆ ಎಂದು ಅವರು ತಿಳಿಸಿದ್ದಾರೆ.

ಯಾಕೋ ಏನೋ ಕುಮಾರಸ್ವಾಮಿ ಅವರು ತಮ್ಮ ಮನಸ್ಸಿನ ಹಿಡಿತ ಕಳೆದುಕೊಳ್ಳುತ್ತಿರುವುದಲ್ಲದೆ, ಬುದ್ಧಿಯ ಸ್ಥಿಮಿತ ಕೂಡ ಕಳೆದು ಕೊಳ್ಳುತ್ತಿದ್ದಾರೆ. ಒಕ್ಕೂಟ ವ್ಯವಸ್ಥೆ ಯಲ್ಲಿ ಒಬ್ಬ ಮುಖ್ಯಮಂತ್ರಿ ಈ ರೀತಿ ಸ್ವೇಚ್ಛಾಚಾರದ ಮಾತುಗಳನ್ನು ಆಡುವುದು ಇಡೀ ಒಕ್ಕೂಟ  ವ್ಯವಸ್ಥೆಗೆ ಅಪಾಯಕಾರಿ. ಮುಖ್ಯಮಂತ್ರಿಗಳು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಇದ್ದೇನೆ ಎನ್ನುವುದನ್ನು ಮರೆತಿದ್ದಾರೆಯೋ ಅಥವಾ ಪ್ರಜಾಪ್ರಭುತ್ವದ ಅರ್ಥ ತಿಳಿದಿಲ್ಲವೋ ಗೊತ್ತಾಗುತ್ತಿಲ್ಲ. ಪ್ರಜಾಪ್ರಭುತ್ವದಲ್ಲಿ ನೂರಕ್ಕೆ ನೂರರಷ್ಟು ಒಂದೇ ಪಕ್ಷಕ್ಕೆ ಮತ ಹಾಕಿ ಗೆಲ್ಲಿಸಿದರೆ, ವ್ಯವಸ್ಥೆಯಲ್ಲಿ ಏನೋ ದೋಷವಿರುತ್ತದೆ ಮತ್ತು ನಿರಂಕುಶತ್ವಕ್ಕೆ ದಾರಿ ಮಾಡಿಕೊಡುತ್ತದೆ ಎನ್ನುವ ಅರಿವು ಅವರಿಗೆ ಇರಬೇಕು ಎಂದು ಯಡಿಯೂರಪ್ಪ ಪ್ರಕಟಣೆ ಮೂಲಕ ಖಾರವಾಗಿ ಹೇಳಿದ್ದಾರೆ. 

ಮುಖ್ಯಮಂತ್ರಿಗಳು ಅಧಿಕಾರ ಕಳೆದುಕೊಳ್ಳುತ್ತೇನೆ ಎಂಬ ಭಯದಲ್ಲಿ ಬುದ್ಧಿ ಸ್ಥಿಮಿತವಿಲ್ಲದ ಮಾತುಗಳನ್ನು ಆಡುತ್ತಿದ್ದಾರೆ. ಯಾವುದೇ ಭಾಗವಾಗಲೀ ಅಥವಾ ಜನರಾಗಲಿ ತಮಗೆ ಮತ ಹಾಕಿಲ್ಲ ಎಂದರೆ ಅವರು ಕೇಳುವ ಹಕ್ಕನ್ನು ಕಳೆದುಕೊಳ್ಳುವುದಿಲ್ಲ. ರಾಜ್ಯದ ಯಾವುದೇ ಭಾಗದ ಜನರಿಗೆ ಸರ್ಕಾರವನ್ನು ಪ್ರಶ್ನೆ ಮಾಡುವ ಮತ್ತು ಕೇಳುವ ಹಕ್ಕಿದೆ ಎಂದರು.

Follow Us:
Download App:
  • android
  • ios