ಶಿವಮೊಗ್ಗ : ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರದ ಅಧಿಕಾರಿಗಳು, ಮಂತ್ರಿಗಳು ಲೂಟಿ ಮಾಡುತ್ತಿದ್ದಾರೆ. ಇದಕ್ಕೆ ಸಾಕ್ಷಿಗಳು ಸಿಗುತ್ತಿವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.

ಶಿವಮೊಗ್ಗದಲ್ಲಿ ಮಾತನಾಡಿದ ಯಡಿಯೂರಪ್ಪ, ಸಚಿವ ಪುಟ್ಟರಂಗ ಶೆಟ್ಟಿ ಪಿಎ  ಮೋಹನ್ ಹಣ ಸಾಗಿಸುವಾಗ ಸಿಕ್ಕಿ ಬಿದ್ದಿದ್ದಾನೆ. ಈ ನಿಟ್ಟಿನಲ್ಲಿ ತಕ್ಷಣವೇ ಪುಟ್ಟರಂಗಶೆಟ್ಟಿ ರಾಜೀನಾಮೆ ನೀಡಬೇಕು. ಸಿಎಂ ಕುಮಾರಸ್ವಾಮಿ ನೈತಿಕ ಹೊಂಎ ಹೊತ್ತು ಸಚಿವ ಸ್ಥಾನದಿಂದ ಪುಟ್ಟರಂಗಶೆಟ್ಟಿಯವರನ್ನು ಕೈ ಬಿಡಬೇಕು ಎಂದು ಹೇಳಿದರು.  

ಪ್ರಧಾನಿ  ನರೇಂದ್ರ ಮೋದಿಯವರು 10 ಪರ್ಸೆಂಟ್ ಸರ್ಕಾರ ಎಂದಿದ್ದರು. ಇದು 20 ಪರ್ಸೆಂಟ್ ಸರ್ಕಾರ ಎಂದು ಸಾಬೀತಾಗಿದೆ. ಮೋಹನ್ ಹಣ ತೆಗೆದುಕೊಂಡು ಸಚಿವರ ಮನೆಗೆ ಹೋಗುವಾಗ ಸಿಕ್ಕಿ ಬಿದ್ದಿದ್ದು, ಇದರಿಂದ ಡೀಲ್  ಮಾಡಿರುವುದು ಪತ್ತೆ ಯಾಗಿದೆ ಎಂದು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. 

ಇನ್ನು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದಿಂದ ರಫೆಲ್ ಡೀಲ್ ನಡೆದಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದ್ದರೂ ವೀರಪ್ಪ ಮೊಯ್ಲಿ ಯವರು ರಾಹುಲ್ ಗಾಂಧಿಯನ್ನು ಸಮರ್ಥಿಸಿ ಕೊಳ್ಳಲು ಕೇಂದ್ರ ಸರ್ಕಾರದ ಮೇಲೆ ದೂರುತ್ತಿದ್ದಾರೆ. ಆದರೆ ರಾಜ್ಯದಲ್ಲಿಯೇ  ದೊಡ್ಡ ದೊಡ್ಡ ಲೂಟಿಗಳಾಗುತ್ತಿವೆ ಎಂದರು. 

ತೈಲದರ ಏರಿಕೆ ಸಮಂಜಸವಲ್ಲ : ಇನ್ನು ರಾಜ್ಯದಲ್ಲಿ ಪೆಟ್ರೋಲ್ ,ಡಿಸೆಲ್ ಮೇಲಿನ ತೆರಿಗೆ ಏರಿಕೆಯ ಬಗ್ಗೆಯೂ ಪ್ರತಿಕ್ರಿಯಿಸಿದ ಬಿಎಸ್ ವೈ  ದರ ಹೆಚ್ಚಳ ಮಾಡುತ್ತಿರುವುದು ಸಿಎಂ ಕುಮಾರಸ್ವಾಮಿ ಗೆ ಶೋಭೆ ತರುವುದಿಲ್ಲ. ಪ್ರಧಾನಿ ನರೇಂದ್ರ ಮೋದಿಯವರು ಪೆಟ್ರೋಲಿಯಂ ಉತ್ಪನ್ನಗಳ ಬೆಲೆ ಇಳಿಸಿದರೂ ಈ ಸರ್ಕಾರ ಹೆಚ್ಚು ಮಾಡುತ್ತಿರುವುದು  ಸರಿಯಲ್ಲ ಎಂದರು. 

ಸಾಲಮನ್ನಾ ಅನುಕೂಲ ಸಿಗುತ್ತಿಲ್ಲ :  ರಾಜ್ಯದಲ್ಲಿ ರೈತರ ಸಾಲ ಮನ್ನಾ ಮಾಡುವುದಾಗಿ ಸಿಎಂ ಹೇಳಿದ್ದರೂ, ರೈತರಿಗೆ ಯೋಜನೆಯ ಅನುಕೂಲ ದೊರೆಯುತ್ತಿಲ್ಲ. ಇದರಿಂದ ರೈತರ ಆತ್ಮಹತ್ಯೆ ಹೆಚ್ಚುತ್ತಲೇ ಇದೆ. ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ಬದುಕಿದ್ದೂ ಕೂಡ ಸತ್ತಂತಾಗಿದೆ ಎಂದು ಬಿ.ಎಸ್.ಯಡಿಯೂರಪ್ಪ ವಾಗ್ದಾಳಿ ನಡೆಸಿದ್ದಾರೆ.