Asianet Suvarna News Asianet Suvarna News

ಬಿಜೆಪಿಯ ಈ ಇಬ್ಬರು ನಾಯಕರ ನಡುವೆಯೇ ಆರಂಭವಾಗಿದೆ ತಿಕ್ಕಾಟ

ಅಧಿಕಾರ ಹಿಡಿಯಲು ಪ್ರಯತ್ನಿಸಿ ವಿಫಲವಾದ ಬೆನ್ನಲ್ಲೇ ಬಿಜೆಪಿಯಲ್ಲಿ ಆಂತರಿಕ ತಿಕ್ಕಾಟ ಆರಂಭವಾ ಗಿದೆ. ಪ್ರಯತ್ನ ವಿಫಲವಾದ ಹಿನ್ನೆಲೆಯಲ್ಲಿ ಪಕ್ಷದ ರಾಷ್ಟ್ರೀಯ ಸಹ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್
ಅವರು ಪರೋಕ್ಷವಾಗಿ ಮಾಜಿ ಡಿಸಿಎಂ ಆರ್.ಅಶೋಕ್ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.

BJP Leader BL Santhosh Un Happy Over R Ashok
Author
Bengaluru, First Published Oct 1, 2018, 8:27 AM IST

ಬೆಂಗಳೂರು: ಬಿಬಿಎಂಪಿ ಚುನಾವಣೆಯಲ್ಲಿ ಅಧಿಕಾರ ಹಿಡಿಯಲು ಪ್ರಯತ್ನಿಸಿ ವಿಫಲವಾದ ಬೆನ್ನಲ್ಲೇ ಬಿಜೆಪಿಯಲ್ಲಿ ಆಂತರಿಕ ತಿಕ್ಕಾಟ ಆರಂಭವಾ ಗಿದೆ. ಪ್ರಯತ್ನ ವಿಫಲವಾದ ಹಿನ್ನೆಲೆಯಲ್ಲಿ ಪಕ್ಷದ ರಾಷ್ಟ್ರೀಯ ಸಹ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಅವರು ಪರೋಕ್ಷವಾಗಿ ಮಾಜಿ ಡಿಸಿಎಂ ಆರ್.ಅಶೋಕ್ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ. ‘ತಂಡಸ್ಫೂರ್ತಿ ಇಲ್ಲದವರು ಹಾಗೂ ಗೆಲುವಿನ ಕೀರ್ತಿ ಯನ್ನು ಹಂಚಿಕೊಳ್ಳಲು ಸಿದ್ಧರಿಲ್ಲದವರು ಎಂದಿಗೂ ಗೆಲುವನ್ನು ಸಾಧಿಸಲಾರರು -ಚಾಣಕ್ಯ’ ಎಂದು ಸಂತೋಷ್ ಅವರು ತಮ್ಮ ಫೇಸ್‌ಬುಕ್ ಗೋಡೆಯ ಮೇಲೆ ಬರೆದುಕೊಂಡಿರುವುದು ಇದೀಗ ಬಿಜೆಪಿ ಪಾಳೆಯದಲ್ಲಿ ಚರ್ಚೆಗೆ ಕಾರಣವಾಗಿದೆ. 

ಸಂತೋಷ್ ಅವರು ಅಶೋಕ್ ಅವರನ್ನು ಉದ್ದೇಶಿಸಿಯೇ ಈ ಮಾತನ್ನು ಹೇಳಿದ್ದು ಎಂದು ವಿಶ್ವಸನೀಯ ಮೂಲಗಳು ತಿಳಿಸಿವೆ. ಆದರೆ ಇದಕ್ಕೆ ಪ್ರತಿಯಾಗಿ ಪಕ್ಷದ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಅವರು, ಕೇಂದ್ರ ಸಚಿವರಾದ ನಿರ್ಮಲಾ ಸೀತಾರಾಮನ್ ಮತ್ತು ಅನಂತ್ ಕುಮಾರ್ ಅವರು ಚುನಾವಣೆಗೆ ಗೈರು ಹಾಜರಾಗದೆ ಇದ್ದಿದ್ದರೆ ನಿಶ್ಚಿತವಾಗಿ ಅಶೋಕ್ ನಡೆಸಿದ ಪ್ರಯತ್ನ ಯಶಸ್ವಿ ಆಗುತ್ತಿತ್ತು. ಅನಗತ್ಯವಾಗಿ ಈ ವಿಚಾರದಲ್ಲಿ ಅಶೋಕ್ ಅವರನ್ನು ಟೀಕಿಸುವುದು, ದೂರುವುದು ಯಾರಿಗೂ ಶೋಭೆ ತರುವಂತಹದ್ದಲ್ಲ. 

ಅವರ ಪ್ರಾಮಾಣಿಕ ಪ್ರಯತ್ನಕ್ಕೆ ನಾನು ಅಭಿನಂದನೆ ಸಲ್ಲಿಸುತ್ತೇನೆ ಎಂದು ಹೇಳಿಕೆ ನೀಡಿದ್ದಾರೆ. ಇದು ಸಂತೋಷ್ ಅವರಿಗೆ ನೀಡಿರುವ ತಿರುಗೇಟು ಎಂದು ವಿಶ್ಲೇಷಿಸಲಾಗುತ್ತಿದೆ. ಕಳೆದ ಕೆಲವು ದಿನಗಳ ಹಿಂದೆ ಜೆಡಿಎಸ್ ಮತ್ತು ಕಾಂಗ್ರೆಸ್ ನೇತೃತ್ವದ ಸಮ್ಮಿಶ್ರ ಸರ್ಕಾರದಲ್ಲಿನ ಶಾಸಕರ ಅಸಮಾಧಾನದ ಲಾಭ ಪಡೆದುಕೊಂಡು ಪರ್ಯಾಯ ಸರ್ಕಾರ ರಚನೆ ಮಾಡುವ ಬಿಜೆಪಿ ನಾಯಕರ ಯತ್ನ ವಿಫಲವಾದ  ಹಿನ್ನೆಲೆಯಲ್ಲಿ ಬಿಬಿಎಂಪಿಯಲ್ಲಿ ಯಾವುದೇ ಕಾರಣಕ್ಕೂ ಅಧಿಕಾರದಿಂದ ವಂಚಿತವಾಗದಂತೆ ತಂತ್ರಗಾರಿಕೆ ರೂಪಿಸಬೇಕು ಎಂಬ ಆಶಯವನ್ನು ಬಿಜೆಪಿ ವರಿಷ್ಠರು ಹೊಂದಿದ್ದರು. ಈ ಸಂದೇಶವನ್ನು ಸಂತೋಷ್ ಅವರು ಬೇರೊಬ್ಬರ ಮೂಲಕ ಅಶೋಕ್ ಅವರಿಗೆ ತಲುಪಿಸಿದ್ದರು ಎನ್ನಲಾಗಿದೆ. 

ಆದರೆ, ಅಶೋಕ್ ಅವರು ಈ ವಿಷಯದಲ್ಲಿ ಪಕ್ಷದ ಇತರ ಮುಖಂಡರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ತಾವೇ ಮುಂದಾಗಿ ನಿರ್ಧಾರ ಕೈಗೊಂಡಿದ್ದರಿಂದ ಬಿಬಿಎಂಪಿಯಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಸೇರಿದಂತೆ ಪಕ್ಷೇತರ ಸದಸ್ಯರ ಪೈಕಿ ಕೆಲವರು ಬೆಂಬಲ ನೀಡಲು ಮುಂದೆ ಬಂದರೂ ಅದನ್ನು ಸರಿಯಾಗಿ ನಿಭಾಯಿಸಲಿಲ್ಲ ಎಂಬ ಆರೋಪ ಕೇಳಿಬಂದಿದೆ. ಇದು ಬಿಬಿಎಂಪಿ ಮೇಯರ್ ಮತ್ತು ಉಪಮೇಯರ್ ಚುನಾವಣೆ ದಿನ ಕಣ್ಣಿಗೆ ಕಾಣುವಂತೆಯೇ ನಡೆದಿದೆ.

ಹೀಗಾಗಿಯೇ ಅಶೋಕ್ ಅವರ ನಿಲುವಿನಿಂದ ಆಕ್ರೋಶಗೊಂಡ ಸಂತೋಷ್ ಅವರು ಫೇಸ್‌ಬುಕ್ ಮೂಲಕ ಅಸಮಾಧಾನ ಹೊರಹಾ ಕಿದ್ದಾರೆ. ಜತೆಗೆ ಪಕ್ಷದ ವರಿಷ್ಠರಿಗೂ ಮಾಹಿತಿ ರವಾನಿಸಿದ್ದಾರೆ ಎಂದು ತಿಳಿದುಬಂದಿದೆ. 

Follow Us:
Download App:
  • android
  • ios