ಬಿಜೆಪಿ ಹಿರಿಯ ಮುಖಂಡರೂ ಆಗಿರುವ ಮಾಜಿ ಸಚಿವರಾದ ವಿ.ಶ್ರೀನಿವಾಸ್‌ ಪ್ರಸಾದ್‌ ಮತ್ತು ಉಮೇಶ್‌ ಕತ್ತಿ ಅವರು ಪಕ್ಷದ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಅವರನ್ನು ಭೇಟಿಯಾಗಿ ಕುಟುಂಬದ ಸದಸ್ಯರಿಗೆ ಟಿಕೆಟ್‌ ನೀಡುವ ಕುರಿತಂತೆ ಚರ್ಚೆ ನಡೆಸಿದ್ದಾರೆ.

ಬೆಂಗಳೂರು : ಬಿಜೆಪಿ ಹಿರಿಯ ಮುಖಂಡರೂ ಆಗಿರುವ ಮಾಜಿ ಸಚಿವರಾದ ವಿ.ಶ್ರೀನಿವಾಸ್‌ ಪ್ರಸಾದ್‌ ಮತ್ತು ಉಮೇಶ್‌ ಕತ್ತಿ ಅವರು ಪಕ್ಷದ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಅವರನ್ನು ಭೇಟಿಯಾಗಿ ಕುಟುಂಬದ ಸದಸ್ಯರಿಗೆ ಟಿಕೆಟ್‌ ನೀಡುವ ಕುರಿತಂತೆ ಚರ್ಚೆ ನಡೆಸಿದ್ದಾರೆ.

ಶ್ರೀನಿವಾಸ್‌ ಪ್ರಸಾದ್‌ ಅವರು ತಮ್ಮ ಅಳಿಯ ಹರ್ಷವರ್ಧನ ಅವರಿಗೆ ನಂಜನಗೂಡು ಟಿಕೆಟ್‌ ನೀಡುವಂತೆ ಬೇಡಿಕೆ ಇಟ್ಟರೆ, ಉಮೇಶ್‌ ಕತ್ತಿ ಅವರು ಸಹೋದರ ರಮೇಶ್‌ ಕತ್ತಿ ಅವರಿಗೆ ಬೆಳಗಾವಿ ಟಿಕೆಟ್‌ ನೀಡುವಂತೆ ಮನವಿ ಮಾಡಿದರು.

ಶುಕ್ರವಾರ ಡಾಲರ್ಸ್‌ ಕಾಲೋನಿಯಲ್ಲಿರುವ ಯಡಿಯೂರಪ್ಪ ನಿವಾಸಕ್ಕೆ ಭೇಟಿ ನೀಡಿ ಸಮಾಲೋಚನೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಪ್ರಸಾದ್‌, ನಾನು ಹಿಂದೆ ಹೇಳಿದಂತೆ ಈ ಬಾರಿ ಚುನಾವಣೆಗೆ ಸ್ಪರ್ಧಿಸುವುದಿಲ್ಲ. ನನ್ನ ಅಳಿಯ ಹರ್ಷವರ್ಧನ ಕೂಡ ಆಕಾಂಕ್ಷಿಯಾಗಿದ್ದಾನೆ. ಯಾರು ಸಮರ್ಥರೋ ಅವರಿಗೆ ಟಿಕೆಟ್‌ ಕೊಡಿ ಎಂಬುದನ್ನು ಹೇಳಿದ್ದೇನೆ ಎಂದರು.

ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ನಂಜನಗೂಡು ಕ್ಷೇತ್ರದಲ್ಲಿ ಯಾರಿಗೆ ಟಿಕೆಟ್‌ ನೀಡಿದರೂ ನಾನು ಸಹಕಾರ ಕೊಡುತ್ತೇನೆ. ಪಕ್ಷದ ಪರ ಪ್ರಚಾರ ನಡೆಸುತ್ತೇನೆ ಎಂದು ಸ್ಪಷ್ಟಪಡಿಸಿದರು.

ಉಮೇಶ್‌ ಕತ್ತಿ ಮಾತನಾಡಿ, ನಾನು ಈಗಿರುವ ಹುಕ್ಕೇರಿ ಕ್ಷೇತ್ರದಿಂದಲೇ ಕಣಕ್ಕಿಳಿಯಲು ಬಯಸಿದ್ದೇನೆ. ನನ್ನ ಸಹೋದರ ಹಾಗೂ ಮಾಜಿ ಸಂಸದ ರಮೇಶ್‌ ಕತ್ತಿಗೆ ಬೆಳಗಾವಿಯಿಂದ ಟಿಕೆಟ್‌ ಕೇಳಿದ್ದೇನೆ. ವರಿಷ್ಠರು ಯಾವ ಕ್ಷೇತ್ರದಿಂದ ಟಿಕೆಟ್‌ ನೀಡುತ್ತಾರೋ ಅಲ್ಲಿ ಸ್ಪರ್ಧಿಸುತ್ತೇವೆ ಎಂದು ತಿಳಿಸಿದರು.