ಹಾಸನ [ಜು.16]: ಮೈತ್ರಿ ಸರ್ಕಾರ ಸಂಕಷ್ಟದಲ್ಲಿದ್ದರೂ ಲೋಕೋಪಯೋಗಿ ಇಲಾಖೆಯಲ್ಲಿ ವರ್ಗಾವಣೆ ದಂಧೆ ಮಿತಿಯಿಲ್ಲದೇ ನಡೆಯುತ್ತಿದೆ. ಸಚಿವ ಎಚ್‌.ಡಿ. ರೇವಣ್ಣ ಅವರು ಲೋಕೋಪಯೋಗಿ ಮಂತ್ರಿಯಲ್ಲ, ಅವರು ವರ್ಗಾವಣೆ (ಟ್ರಾನ್ಸ್‌ಫರ್‌) ಖಾತೆ ಸಚಿವರಾಗಿದ್ದಾರೆ ಎಂದು ಮಾಜಿ ಸಚಿವ ಎ. ಮಂಜು ವ್ಯಂಗ್ಯವಾಡಿದ್ದಾರೆ.

ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಿಂದೆ ರೋಮ್‌ ಹೊತ್ತಿ ಉರಿಯುತ್ತಿದ್ದಾಗ ಅಲ್ಲಿನ ದೊರೆಯಾಗಿದ್ದಂತಹ ನೀರೋ ಪಿಟೀಲು ಕೊಯ್ದಿದ್ದ ಅನ್ನುವಂತೆ ಸಚಿವ ಎಚ್‌.ಡಿ. ರೇವಣ್ಣ ರಾಜ್ಯದ ಮೈತ್ರಿ ಸರ್ಕಾರಕ್ಕೆ ಅಭದ್ರತೆ ಕಾಡುತ್ತಿರುವ ಸಂದರ್ಭದಲ್ಲಿ ನೂರಾರು ಅಧಿಕಾರಿಗಳನ್ನು ವರ್ಗಾವಣೆ ಮಾಡಿಸುತ್ತಿದ್ದಾರೆ ಎಂದು ಆರೋಪಿಸಿದರು.

ಅಪ್ಪ-ಮಕ್ಕಳ ಪಕ್ಷದ ಪರವಾಗಿ ನಿಲ್ಲಬೇಡಿ. ನಿಂತರೆ ನಾನು ನಿಮ್ಮ ಜೊತೆ ಇರುವುದಿಲ್ಲ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ ಹೇಳಿದ್ದೆ. ಇನ್ನು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌. ಯಡಿಯೂರಪ್ಪನವರು ಕೂಡ ಅಪ್ಪ- ಮಕ್ಕಳನ್ನು ನಂಬಿದರೆ ಬೀದಿಗೆ ಬರ್ತೀರಿ ಅಂತ ಸದನದಲ್ಲಿ ಹೇಳಿದ್ದರು. ಆ ಮಾತಿನಂತೆ ಡಿ.ಕೆ.ಶಿವಕುಮಾರ್‌ ಬೀದಿಯಲ್ಲಿ ನಿಂತುಕೊಂಡರು ಎಂದರು.