ಕಾಂಗ್ರೆಸ್ ನಾಯಕನಿಗೆ ಬಿಜೆಪಿ ಶಾಸಕಿ ಪುತ್ರನ ಬೆದರಿಕೆ! ಶೂಟ್ ಮಾಡುವುದಾಗಿ ಸಾಮಾಜಿಕ ಜಾಲತಾಣದಲ್ಲಿ ಬೆದರಿಕೆ! ಕಾಂಗ್ರೆಸ್ ಸಂಸದ ಜ್ಯೋತಿರಾದಿತ್ಯ ಸಿಂಧಿಯಾಗೆ ಜೀವ ಬೆದರಿಕೆ! ಫೇಸ್‌ಬುಕ್ ನಲ್ಲಿ ಬೆದರಿಕೆ ಹಾಕಿದ ಬಿಜೆಪಿ ಶಾಸಕಿ ಪುತ್ರ! ಮಧ್ಯಪ್ರದೇಶ ಬಿಜೆಪಿ ಶಾಸಕಿ ಉಮಾದೇವಿ ಖತಿಕ್ ಪುತ್ರ 

ಧಮೋಹ್(ಸೆ.3): ಬಿಜೆಪಿ ಶಾಸಕಿ ಉಮಾದೇವಿ ಖತಿಕ್ ಅವರ ಪುತ್ರ ಪ್ರಿನ್ಸ್‌ದೀಪ್‌ ಲಾಲ್‌ಚಂದ್ ಖತಿಕ್, ಕಾಂಗ್ರೆಸ್ ಸಂಸದ ಜ್ಯೋತಿರಾದಿತ್ಯ ಸಿಂಧಿಯಾ ಅವರನ್ನು ಶೂಟ್ ಮಾಡುವುದಾಗಿ ಸಾಮಾಜಿಕ ಮಾಧ್ಯಮಗಳಲ್ಲಿ ಬೆದರಿಕೆ ಹಾಕಿದ್ದಾರೆ.

ಜ್ಯೋತಿರಾದಿತ್ಯ ಸಿಂಧಿಯಾ, ನಿಮ್ಮ ದೇಹದಲ್ಲಿ ಝಾನ್ಸಿ ರಾಣಿಯನ್ನು ಕೊಂದ ಜೀವಾಜಿರಾವ್ ರಕ್ತ ಹರಿಯುತ್ತಿದ್ದು, ನೀವು ಹಟ್ಟಾಗೆ ಬಂದರೆ ನಾನು ನಿಮ್ಮನ್ನು ಶೂಟ್ ಮಾಡುತ್ತೇನೆ. ಒಂದು ನೀವು ಸಾಯಬೇಕು ಇಲ್ಲ ನಾನು ಸಾಯಬೇಕು ಎಂದು ಲಾಲ್‌ಚಂದ್ ಖತಿಕ್ ಫೇಸ್ ಬುಕ್ ನಲ್ಲಿ ಬರೆದುಕೊಂಡಿದ್ದಾರೆ.

ಸೆಪ್ಟೆಂಬರ್ 5ರಂದು ಹಟ್ಟಾ ಜಿಲ್ಲೆಯಲ್ಲಿ ಜ್ಯೋತಿರಾದಿತ್ಯ ಸಿಂಧಿಯಾ ಸಮಾವೇಶ ನಿಗದಿಯಾಗಿದ್ದು, ಜಿಲ್ಲೆಗೆ ಆಗಮಿಸದಂತೆ ಬಿಜೆಪಿ ಶಾಸಕಿಯ ಪುತ್ರ ಕಾಂಗ್ರೆಸ್ ನಾಯಕನಿಗೆ ಈ ರೀತಿ ಬೆದರಿಕೆ ಹಾಕಿದ್ದಾರೆ.

ಈ ಪೋಸ್ಟ್ ದುರದೃಷ್ಟಕರ. ಸಿಂಧಿಯಾ ಅವರು ಒಬ್ಬ ಗೌರವಯುತ ಸಂಸದರು. ನಾನು ನನ್ನ ಪುತ್ರನನ್ನು ಕರೆದು ಪೋಸ್ಟ್ ತೆಗೆದುಹಾಕುವಂತೆ ಸೂಚಿಸುತ್ತೇನೆ ಎಂದು ಮಧ್ಯ ಪ್ರದೇಶದ ಹಟ್ಟಾ ವಿಧಾನಸಭಾ ಕ್ಷೇತ್ರದ ಶಾಸಕಿ ಉಮಾದೇವಿ ಸ್ಪಷ್ಟಪಡಿಸಿದ್ದಾರೆ.