ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಕಾಂಗ್ರೆಸ್ ಮುಖಂಡರು ವಿಧಾನ ಪರಿಷತ್ ಸದಸ್ಯ ಕೆ.ಗೋವಿಂದರಾಜು ಅವರಿಗೆ ಸೇರಿದ ಡೈರಿಯಲ್ಲಿರುವ ಮಾಹಿತಿ ಹೇಗೆ ದೊರಕಿತು ಎಂಬುದರ ಬದಲಾಗಿ ಡೈರಿಯಲ್ಲಿ ಉಲ್ಲೇಖವಾಗಿರುವ ಅಂಶಗಳ ಕುರಿತಂತೆ ಬಹಿರಂಗ ಚರ್ಚೆ ಬರಲಿ. ಎಷ್ಟೆಷ್ಟು ಹಣ ಯಾರಿಗೆ ಮತ್ತು ಯಾವಾಗ ಸಂದಾಯ ಮಾಡಿದ್ದೀರಿ ಎಂಬ ಬಗ್ಗೆ ಡೈರಿಯಲ್ಲಿ ಉಲ್ಲೇಖವಾಗಿರುವ ಕುರಿತಂತೆ ಚರ್ಚೆಗೆ ಬಿಜೆಪಿ ಸಿದ್ಧ ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ಅರವಿಂದ್ ಲಿಂಬಾವಳಿ ಸವಾಲು ಹಾಕಿದ್ದಾರೆ.
ಬೆಂಗಳೂರು(ಫೆ. 21): ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಕಾಂಗ್ರೆಸ್ ಮುಖಂಡರು ವಿಧಾನ ಪರಿಷತ್ ಸದಸ್ಯ ಕೆ.ಗೋವಿಂದರಾಜು ಅವರಿಗೆ ಸೇರಿದ ಡೈರಿಯಲ್ಲಿರುವ ಮಾಹಿತಿ ಹೇಗೆ ದೊರಕಿತು ಎಂಬುದರ ಬದಲಾಗಿ ಡೈರಿಯಲ್ಲಿ ಉಲ್ಲೇಖವಾಗಿರುವ ಅಂಶಗಳ ಕುರಿತಂತೆ ಬಹಿರಂಗ ಚರ್ಚೆ ಬರಲಿ. ಎಷ್ಟೆಷ್ಟು ಹಣ ಯಾರಿಗೆ ಮತ್ತು ಯಾವಾಗ ಸಂದಾಯ ಮಾಡಿದ್ದೀರಿ ಎಂಬ ಬಗ್ಗೆ ಡೈರಿಯಲ್ಲಿ ಉಲ್ಲೇಖವಾಗಿರುವ ಕುರಿತಂತೆ ಚರ್ಚೆಗೆ ಬಿಜೆಪಿ ಸಿದ್ಧ ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ಅರವಿಂದ್ ಲಿಂಬಾವಳಿ ಸವಾಲು ಹಾಕಿದ್ದಾರೆ.
ವಿಧಾನಸೌಧದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಧಾನ ಪರಿಷತ್ ಸದಸ್ಯ ಕೆ.ಗೋವಿಂದರಾಜು ಅವರ ಬಳಿ ಸಿಕ್ಕ ಡೈರಿಯ ವಿಚಾರದ ಕುರಿತಂತೆ ಯಡಿಯೂರಪ್ಪ ಮಾತನಾಡುತ್ತಿದ್ದಂತೆಯೇ ಕಾಂಗ್ರೆಸ್ಸಿಗರು ಚರ್ಚೆಯ ದಾರಿ ತಪ್ಪಿಸುವ ಸಲುವಾಗಿ ಯಡಿಯೂರಪ್ಪನವರ ಪ್ರಕರಣಗಳ ಕುರಿತಂತೆ ಮಾತನಾಡಲು ಆರಂಭಿಸುತ್ತಾರೆ. ಯಡಿಯೂರಪ್ಪನವರ ವಿರುದ್ಧದ ಆರೋಪಗಳ ವಿಚಾರವನ್ನು ನ್ಯಾಯಾಲಯ ನಿರ್ಧರಿಸುತ್ತದೆ ಎಂದು ತಿರುಗೇಟು ನೀಡಿದರು.
ಯಡಿಯೂರಪ್ಪ ಅವರ ವಿರುದ್ಧ ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ಕೀಳುಮಟ್ಟದ ಭಾಷೆ ಬಳಸುವ ಮೂಲಕ ಭ್ರಷ್ಟಾಚಾರದ ಕುರಿತಂತೆ ನಡೆಯುತ್ತಿರುವ ಚರ್ಚೆಯ ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಯಡಿಯೂರಪ್ಪನವರ ವಯಸ್ಸಿಗೆ ಬೆಲೆ ಕೊಡಬೇಕು.ಇಂತಹ ಕೀಳು ಮಟ್ಟದ ಹೇಳಿಕೆ ಯುವಕರಾದ ದಿನೇಶ್ ಅವರಿಗೆ ಶೋಭೆ ತರುವುದಿಲ್ಲ. ವಿಷಯಾಂತರ ಮಾಡುವುದರಿಂದ ಸತ್ಯವನ್ನು ಮರೆಮಾಚಲು ಸಾಧ್ಯವಿಲ್ಲ ಎಂದು ವಾಗ್ದಾಳಿ ನಡೆಸಿದರು.
ಸಿಎಂ ಸಿದ್ದರಾಮಯ್ಯ ಹೈಕಮಾಂಡ್‌ಗೆ ನೀಡಿರುವ ಕಪ್ಪ ಹಾಗೂ ಸ್ಟೀಲ್ ಬ್ರಿಡ್ಜ್ ಪ್ರಕರಣದಲ್ಲಿ ಕಿಕ್‌ಬ್ಯಾಕ್ ಪಡೆದಿರುವ ಕುರಿತ ಬಿಜೆಪಿ ಅಧ್ಯಕ್ಷ ಯಡಿಯೂರಪ್ಪ ಅವರು ಮಾಡಿರುವ ಆರೋಪಗಳಿಗೆ ಬಿಜೆಪಿ ಈಗಲೂ ಬದ್ಧರಾಗಿದ್ದೇವೆ. ಬಿಜೆಪಿ ಮಾಡಿರುವ ಆರೋಪಗಳ ಬಗ್ಗೆ ಯಾವುದಾದರೂ ತನಿಖೆಗೆ ಆದೇಶ ನೀಡಲಿ ಎಂದು ಲಿಂಬಾವಳಿ ಸವಾಲು ಹಾಕಿದರು.
ವಿಧಾನ ಪರಿಷತ್ ಸದಸ್ಯ ಗೋವಿಂದರಾಜು ಅವರಿಗೆ ಸಂಶಯ ಇರುವುದು ಡೈರಿ ಬಗೆಗಲ್ಲ. ಡೈರಿಯಲ್ಲಿ ₹ ೯೦೦ ಕೋಟಿ ರು.ಗಳ ಲೆಕ್ಕವಿದ್ದರೂ ಯಡಿಯೂರಪ್ಪ ಸಾವಿರ ಕೋಟಿ ಎನ್ನುತ್ತಿದ್ದಾರಲ್ಲ ಎಂಬ ಬಗೆಗೆ ಸಂಶಯವಿದೆ. ಸಿದ್ದರಾಮಯ್ಯನವರು ನನ್ನನ್ನು ಬಿಟ್ಟು ಬೇರೊಬ್ಬ ಏಜೆಂಟ್‌ನನ್ನು ನೇಮಕ ಮಾಡಿಕೊಂಡಿದ್ದಾರೆಯೇ ಎಂಬ ಗೊಂದಲ ಅವರನ್ನು ಕಾಡುತ್ತಿದೆ. ಗೋವಿಂದರಾಜು ಅವರು ಹೈಕಮಾಂಡ್‌ಗೆ ಹಣ ಕೊಟ್ಟಿಲ್ಲ ಎಂದು ಎಲ್ಲಿಯೂ ಹೇಳಿಲ್ಲ. ಬದಲಾಗಿ ಐಟಿ ಇಲಾಖೆಗೆ ಪತ್ರ ಬರೆದು, ನನ್ನ ಡೈರಿಯ ವಿವರ ಲೀಕ್ ಮಾಡಲಾಗಿದೆಯೇ? ಎಂದು ಪ್ರಶ್ನಿಸಿದ್ದಾರೆ. ಐಟಿ ಇಲಾಖೆ ಭ್ರಷ್ಟರ ಮೇಲೆ ದಾಳಿ ನಡೆಸಿದರೂ ಅವರೆಲ್ಲರೂ ಕಾಂಗ್ರೆಸ್ಸಿಗರಾಗಿದ್ದಾರೆ ಇಲ್ಲವೇ ಕಾಂಗ್ರೆಸ್ಸಿಗರ ಹಣ ಇಟ್ಟುಕೊಂಡ ಅಧಿಕಾರಿಗಳಾಗಿದ್ದಾರೆ. ಆದರೆ ಐಟಿ ಇಲಾಖೆ ಕಾಂಗ್ರೆಸ್ ಎಂಬ ಕಾರಣಕ್ಕೆ ಯಾರ ಮೇಲೂ ದಾಳಿ ನಡೆಸಿಲ್ಲ ಎಂದು ಸಮರ್ಥಿಸಿಕೊಂಡರು.
ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಯಡಿಯೂರಪ್ಪ ಹೈಕಮಾಂಡ್‌ಗೆ ಚೆಕ್ ಮೂಲಕ ಹಣ ಸಂದಾಯ ಮಾಡಿರುವುದಾಗಿ ಆರೋಪಿಸಿದ್ದಾರೆ. ಒಂದು ವೇಳೆ ಈ ಬಗ್ಗೆ ಕುಮಾರಸ್ವಾಮಿ ಅವರ ಬಳಿ ದಾಖಲೆ ಇದ್ದರೆ ಬಿಡುಗಡೆ ಮಾಡಲಿ ಎಂದು ಸವಾಲು ಹಾಕಿದರು.
