ಆಂತರಿಕ ವರದಿಗಳ ಪ್ರಕಾರ ಮಧ್ಯಪ್ರದೇಶ ಮತ್ತು ರಾಜಸ್ಥಾನದಲ್ಲಿ ಪಕ್ಷಕ್ಕೆ ಪ್ರತಿಕೂಲ ಪರಿಸ್ಥಿತಿ ಎರಡೂ ರಾಜ್ಯಗಳಲ್ಲಿ ನಾಯಕತ್ವ ಬದಲಾವಣೆಗೆ ಚಿಂತನೆ
ಡಿಸೆಂಬರ್‌ನಲ್ಲಿ ನಡೆಯಲಿರುವ ಚುನಾವಣೆಯಲ್ಲಿ ಬಿಜೆಪಿಯ ಆಂತರಿಕ ವರದಿಗಳ ಪ್ರಕಾರ ಮಧ್ಯಪ್ರದೇಶ ಮತ್ತು ರಾಜಸ್ಥಾನದಲ್ಲಿ ಪಕ್ಷಕ್ಕೆ ಪ್ರತಿಕೂಲ ಪರಿಸ್ಥಿತಿಯಿದೆ. ಇದರಿಂದ ಬಿಜೆಪಿಯ ಮ್ಯಾನೇಜರ್ ಗಳು ನಿದ್ದೆಗೆಡುವಂತಾಗಿದೆ. ಮಧ್ಯಪ್ರದೇಶದಲ್ಲಿ ಶೇ.75ರಷ್ಟು ಶಾಸಕರಿಗೆ ಟಿಕೆಟ್ ಕೊಡುವುದು ಸಾಧ್ಯವೇ ಇಲ್ಲ ಎಂದು ಅಮಿತ್ ಶಾ ಹೇಳಿದ್ದು, ಶಿವರಾಜ್ ಸಿಂಗ್ ಚೌಹಾಣ್ ಒಪ್ಪಿಕೊಂಡಿದ್ದಾರೆ.
ಆದರೆ ಶಾಸಕರಿಗೆ ಟಿಕೆಟ್ ನಿರಾಕರಿಸಲು ರಾಜಸ್ಥಾನದ ಮುಖ್ಯಮಂತ್ರಿ ವಸುಂಧರಾ ರಾಜೇ ತಯಾರಿಲ್ಲ. ತನ್ನ ಬೆಂಬಲಿಗ ಶಾಸಕರಿಗೆ ಟಿಕೆಟ್ ತಪ್ಪಿಸಿ ತನ್ನನ್ನು ರಾಜಸ್ಥಾನದ ಬಿಜೆಪಿ ನಾಯಕತ್ವದಿಂದ ಕೆಳಕ್ಕೆ ಇಳಿಸುವ ಯೋಜನೆ ಇದು ಎಂದು ವಸುಂಧರಾ ಕೂಗಾಡುತ್ತಿದ್ದಾರಂತೆ.
ಅಪ್ಪ ಮತ್ತು ಪ್ರಿಯಾಂಕಾ
ತಂದೆ ರಾಜೀವ್ ಗಾಂಧಿ ಬಗ್ಗೆ ತನ್ನ ನೆನಪುಗಳನ್ನು ಪುಸ್ತಕ ರೂಪದಲ್ಲಿ ಪ್ರಿಯಾಂಕಾ ಗಾಂಧಿ ಹೊರತರಲಿದ್ದು, 2019ರ ಚುನಾವಣೆಗೆ ಮೊದಲು ಜನವರಿಯಲ್ಲಿ ಪುಸ್ತಕ ಮಾರುಕಟ್ಟೆಗೆ ಬರಲಿದೆಯಂತೆ. ಯಾರೂ ನೋಡದ ಕುಟುಂಬದ ಕೆಲ ಖಾಸಗಿ ಚಿತ್ರಗಳನ್ನು ಕೂಡ ಪ್ರಿಯಾಂಕಾ ಪ್ರಕಟಿಸುವ ಬಗ್ಗೆ ನಿರೀಕ್ಷೆಗಳಿವೆ. ತಾಯಿ ಸೋನಿಯಾ ಕೈಯಿಂದಲೇ ಪುಸ್ತಕ ಬಿಡುಗಡೆಯಾಗಬಹುದು.
[ಪ್ರಶಾಂತ್ ನಾತು ಅವರ ಇಂಡಿಯಾ ಗೇಟ್ ಅಂಕಣದ ಆಯ್ದ ಭಾಗ]
