ನಾಗಾಲ್ಯಾಂಡಲ್ಲಿ ಸರ್ಕಾರ ರಚಿಸಲು ಬಿಜೆಪಿ ಮೈತ್ರಿಕೂಟ ಸಿದ್ಧ

news | Monday, March 5th, 2018
Suvarna Web Desk
Highlights

ನಾಗಾಲ್ಯಾಂಡ್‌ ವಿಧಾನಸಭೆ ಚುನಾವಣೆಯಲ್ಲಿ ಬಹುಮತಕ್ಕೆ ಒಂದೇ ಒಂದು ಸ್ಥಾನ ಕಡಿಮೆ ಗೆದ್ದಿದ್ದ ಎನ್‌ಡಿಪಿಪಿ-ಬಿಜೆಪಿ ಮೈತ್ರಿಕೂಟ, ಇಬ್ಬರು ಶಾಸಕರ ಬೆಂಬಲ ಗಿಟ್ಟಿಸಿಕೊಂಡು ಸರ್ಕಾರ ರಚಿಸಲು ಸನ್ನದ್ಧವಾಗಿದೆ.

ಕೊಹಿಮಾ: ನಾಗಾಲ್ಯಾಂಡ್‌ ವಿಧಾನಸಭೆ ಚುನಾವಣೆಯಲ್ಲಿ ಬಹುಮತಕ್ಕೆ ಒಂದೇ ಒಂದು ಸ್ಥಾನ ಕಡಿಮೆ ಗೆದ್ದಿದ್ದ ಎನ್‌ಡಿಪಿಪಿ-ಬಿಜೆಪಿ ಮೈತ್ರಿಕೂಟ, ಇಬ್ಬರು ಶಾಸಕರ ಬೆಂಬಲ ಗಿಟ್ಟಿಸಿಕೊಂಡು ಸರ್ಕಾರ ರಚಿಸಲು ಸನ್ನದ್ಧವಾಗಿದೆ. ಜೆಡಿಯುನಿಂದ ಗೆದ್ದ ಒಬ್ಬ ಶಾಸಕ ಹಾಗೂ ಪಕ್ಷೇತರನಾಗಿ ಗೆದ್ದ ಇನ್ನೊಬ್ಬ ಶಾಸಕನ ಬೆಂಬಲ ಎನ್‌ಡಿಪಿಪಿ-ಬಿಜೆಪಿ ಮೈತ್ರಿಕೂಟಕ್ಕೆ ದೊರಕಿದ್ದು, ಒಟ್ಟು 32 ಶಾಸಕ ಬಲದೊಂದಿಗೆ ಮೈತ್ರಿಕೂಟದ ನಾಯಕರು ರಾಜ್ಯಪಾಲ ಪಿ.ಬಿ. ಆಚಾರ್ಯ ಅವರ ಬಳಿ ಭಾನುವಾರ ಸರ್ಕಾರ ರಚಿಸುವ ಹಕ್ಕು ಮಂಡಿಸಿದರು. ಬಹುಮತ ಇರುವುದರಿಂದ ರಾಜ್ಯಪಾಲರು ಸರ್ಕಾರ ರಚಿಸಲು ಒಪ್ಪಿಗೆ ನೀಡಿದರು.

60 ಶಾಸಕ ಬಲದ ನಾಗಾಲ್ಯಾಂಡ್‌ ವಿಧಾನಸಭೆಯಲ್ಲಿ ಸರ್ಕಾರ ರಚಿಸಲು 31 ಸ್ಥಾನಗಳು ಬೇಕು. 30 ಸ್ಥಾನ ಗೆದ್ದಿದ್ದ ಬಿಜೆಪಿ ಮೈತ್ರಿಕೂಟ (ಎನ್‌ಡಿಪಿಪಿ 18+ಬಿಜೆಪಿ 12) ಇನ್ನಿಬ್ಬರ ಬೆಂಬಲ ಗಿಟ್ಟಿಸಿ 32 ಸ್ಥಾನಗಳೊಂದಿಗೆ ಸರಳ ಬಹುಮತ ಗಿಟ್ಟಿಸಿಕೊಂಡಿದೆ. ಮೂರು ಬಾರಿ ಮುಖ್ಯಮಂತ್ರಿಯಾಗಿದ್ದ ನೆಫಿಯು ರಿಯೋ ಮತ್ತೆ ಮುಖ್ಯಮಂತ್ರಿಯಾಗಲಿದ್ದಾರೆ.

ನಾಗಾಲ್ಯಾಂಡಿನ ಹಾಲಿ ಮುಖ್ಯಮಂತ್ರಿ ಟಿ.ಆರ್‌.ಝೇಲಿಯಾಂಗ್‌ ಅವರ ಎನ್‌ಪಿಎಫ್‌ ಪಕ್ಷ 27 ಸ್ಥಾನ ಗೆದ್ದು ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದರೂ ಮೈತ್ರಿ ಸರ್ಕಾರ ರಚಿಸಲು ಬೇಕಾದಷ್ಟುಶಾಸಕರ ಬೆಂಬಲ ಗಳಿಸುವಲ್ಲಿ ವಿಫಲವಾಗಿದೆ. 2013ರಲ್ಲಿ ಒಂದು ಸ್ಥಾನ ಮಾತ್ರ ಗೆದ್ದಿದ್ದ ಬಿಜೆಪಿ ಈ ಬಾರಿ 20 ಸ್ಥಾನಗಳಲ್ಲಿ ಸ್ಪರ್ಧಿಸಿ 12 ಸ್ಥಾನಗಳ ಭರ್ಜರಿ ಜಯ ಸಾಧಿಸಿದೆ. ಬಿಜೆಪಿಯ ಮೈತ್ರಿ ಪಕ್ಷವಾಗಿರುವ ಎನ್‌ಡಿಪಿಪಿ 40 ಸ್ಥಾನಗಳಲ್ಲಿ ಸ್ಪರ್ಧಿಸಿ 18 ಸ್ಥಾನ ಗಳಿಸಿದೆ.

Comments 0
Add Comment