ಮುಂಬೈನಲ್ಲಿ ಬಿಜೆಪಿ ಯಾವತ್ತೂ ಕೂಡ ಪ್ರಬಲ ಶಕ್ತಿಯಾಗಿರಲಿಲ್ಲ. ಆದರೆ, ಈ ಬಾರಿ ಕೇಸರೀ ಪಡೆ 80 ಕ್ಷೇತ್ರಗಳ ಗಡಿ ಮುಟ್ಟಿ ಅಚ್ಚರಿಯ ಸಾಧನೆ ತೋರಿದೆ.
ಮುಂಬೈ(ಫೆ. 23): ಮುಂಬೈ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಶಿವಸೇನೆ ನಂಬರ್ ಒನ್ ಸ್ಥಾನ ಪಡೆದಿದೆ. ಆದರೆ, ಬಹುಮತ ಗಳಿಸುವ ಶಿವಸೇನೆ ಆಸೆಗೆ ಬಿಜೆಪಿ ತಣ್ಣೀರೆರಚಿದೆ. ಶಿವಸೇನೆಗೆ ತೀವ್ರ ಪೈಪೋಟಿ ನೀಡಿರುವ ಬಿಜೆಪಿ ಎರಡನೇ ಸ್ಥಾನ ಪಡೆದಿದೆ. ಇನ್ನು ಕಾಂಗ್ರೆಸ್ ಪಕ್ಷ ಮೂರನೇ ಸ್ಥಾನಕ್ಕೆ ಕುಸಿದು ಹೀನಾಯ ಸೋಲನುಭವಿಸಿದೆ. ಎನ್'ಸಿಪಿ ಕೂಡ ನಿರಾಶೆ ಅನುಭವಿಸಿದೆ.
ಪಾಲಿಕೆಯ 227 ಸ್ಥಾನಗಳ ಪೈಕಿ ಈಗಾಗಲೇ 225 ಕ್ಷೇತ್ರಗಳ ಫಲಿತಾಂಶ ಪ್ರಕಟವಾಗಿದೆ. ಶಿವಸೇನೆ 84 ಹಾಗೂ ಬಿಜೆಪಿ 80 ಸ್ಥಾನಗಳನ್ನು ಗೆದ್ದುಕೊಂಡಿವೆ. ಕಾಂಗ್ರೆಸ್ ಪಕ್ಷ 31 ಸ್ಥಾನಕ್ಕೆ ತೃಪ್ತಿ ಪಟ್ಟಿದೆ. ಈಗ ಪಾಲಿಕೆಯ ಗದ್ದುಗೆಯನ್ನು ಯಾರು ಹಿಡಿಯಲಿದ್ದಾರೆ ಎಂಬುದು ಕುತೂಹಲ. ಸಾಂಪ್ರದಾಯಿಕವಾಗಿ ಮಿತ್ರಪಕ್ಷಗಳಾದ ಶಿವಸೇನೆ ಮತ್ತು ಬಿಜೆಪಿ ಪಕ್ಷಗಳ ನಡುವೆ ಈಗ್ಗೆ ಕೆಲ ವರ್ಷಗಳಿಂದ ಬಿರುಕು ಮೂಡಿದೆ.
ಮುಂಬೈ ಚುನಾವಣೆ:
ಒಟ್ಟು ಕ್ಷೇತ್ರಗಳು 227
ಶಿವಸೇನೆ: 84
ಬಿಜೆಪಿ: 81
ಕಾಂಗ್ರೆಸ್: 31
ಎನ್'ಸಿಪಿ: 19
ಎಂಎನ್'ಎಸ್: 7
ಎಸ್'ಪಿ: 6
ಎಂಐಎಂ: 3
ಐಎನ್'ಡಿ: 4
ಎಬಿಎಸ್: 1
ಸುಳ್ಳಾಯ್ತು ಶಿವಸೇನೆ ಭವಿಷ್ಯ:
ಮುಂಬೈನಲ್ಲಿ ಬಿಜೆಪಿ 50 ಕ್ಷೇತ್ರಗಳನ್ನೂ ಗೆಲ್ಲೋ ಯೋಗ್ಯತೆ ಹೊಂದಿಲ್ಲ ಎಂದು ನಿನ್ನೆಯವರೆಗೂ ಶಿವಸೇನೆ ಮುಖಂಡರು ಪ್ರತಿಪಾದಿಸುತ್ತಾ ಬಂದಿದ್ದರು. ಮುಂಬೈನಲ್ಲಿ ಬಿಜೆಪಿ ಯಾವತ್ತೂ ಕೂಡ ಪ್ರಬಲ ಶಕ್ತಿಯಾಗಿರಲಿಲ್ಲ. ಆದರೆ, ಈ ಬಾರಿ ಕೇಸರೀ ಪಡೆ 80 ಕ್ಷೇತ್ರಗಳ ಗಡಿ ಮುಟ್ಟಿ ಅಚ್ಚರಿಯ ಸಾಧನೆ ತೋರಿದೆ.
ನಿಜವಾಯ್ತು ಚುನಾವಣೋತ್ತರ ಸಮೀಕ್ಷೆ:
ಮುಂಬೈ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ನಡೆದ ಮತಗಟ್ಟೆ ಸಮೀಕ್ಷೆಗಳು ಬಹುತೇಕ ನಿಜವಾಗಿವೆ. ಇತ್ತೀಚಿನ ಸಮೀಕ್ಷೆಯೊಂದು ಬಿಜೆಪಿ 80-88 ಸೀಟ್'ಗಳನ್ನು ಗೆಲ್ಲಬಹುದೆಂದು ಅಂದಾಜಿಸಿತ್ತು. ಇದು ನಿಜವಾಗಿದೆ. ಶಿವಸೇನೆ 86-92 ಸ್ಥಾನಗಳನ್ನು ಪಡೆಬಹುದು ಎಂದು ಹೇಳಲಾಗಿತ್ತು. ಅದೂ ಕೂಡ ಹೆಚ್ಚೂಕಡಿಮೆ ನಿಜವಾಗಿದೆ.
ಮತಗಟ್ಟೆ ಸಮೀಕ್ಷೆ ಮತ್ತು ವಾಸ್ತವ
ಶಿವಸೇನೆ: 86-92, 84
ಬಿಜೆಪಿ: 80-88, 81
ಕಾಂಗ್ರೆಸ್: 30-34, 31
