ಎಚ್’ಕೆ ಪಾಟೀಲ್’ಗೆ ಬಿಜೆಪಿಯ ಒಗ್ಗಟ್ಟಿನ ಸವಾಲ್

First Published 12, Mar 2018, 10:54 AM IST
BJP Give Tough Competition To HK Patil
Highlights

ಮೂರೂವರೆ ದಶಕಗಳಿಂದ ಸಕ್ರಿಯ ರಾಜಕಾರಣದಲ್ಲಿರುವ ಎಚ್.ಕೆ. ಪಾಟೀಲ್ ಅವರ ವಿಧಾನಸಭೆ ಪ್ರವೇಶ ಕನಸು ಕಳೆದ ಚುನಾವಣೆಯಲ್ಲಿ ನನಸಾಗಿತ್ತು. ಸಿದ್ದರಾಮಯ್ಯ ಸರ್ಕಾರದಲ್ಲಿ ಐದು ವರ್ಷಗಳಿಂದ ಸಚಿವರಾಗಿರುವ ಅವರು ಮತ್ತೊಮ್ಮೆ ಗದಗ ಕ್ಷೇತ್ರದಿಂದ ಅದೃಷ್ಟ ಪರೀಕ್ಷೆಗೆ ಇಳಿಯಲು ಮುಂದಾಗಿದ್ದಾರೆ.

ಗದಗ: ಮೂರೂವರೆ ದಶಕಗಳಿಂದ ಸಕ್ರಿಯ ರಾಜಕಾರಣದಲ್ಲಿರುವ ಎಚ್.ಕೆ. ಪಾಟೀಲ್ ಅವರ ವಿಧಾನಸಭೆ ಪ್ರವೇಶ ಕನಸು ಕಳೆದ ಚುನಾವಣೆಯಲ್ಲಿ ನನಸಾಗಿತ್ತು. ಸಿದ್ದರಾಮಯ್ಯ ಸರ್ಕಾರದಲ್ಲಿ ಐದು ವರ್ಷಗಳಿಂದ ಸಚಿವರಾಗಿರುವ ಅವರು ಮತ್ತೊಮ್ಮೆ ಗದಗ ಕ್ಷೇತ್ರದಿಂದ ಅದೃಷ್ಟ ಪರೀಕ್ಷೆಗೆ ಇಳಿಯಲು ಮುಂದಾಗಿದ್ದಾರೆ.

ಅವರನ್ನು ಮಣಿಸಲು ಬಿಜೆಪಿ ಎಲ್ಲ ಪ್ರಯತ್ನಗಳನ್ನೂ ನಡೆಸುತ್ತಿದೆ. ಗದಗ ಕ್ಷೇತ್ರದಲ್ಲಿ ಈವರೆಗೂ ಅತಿ ಹೆಚ್ಚು ಬಾರಿ ಗೆದ್ದಿರುವುದು ಕಾಂಗ್ರೆಸ್ ಪಕ್ಷವೇ. ಎಚ್.ಕೆ. ಪಾಟೀಲ್ ತಂದೆ ದಿವಂಗತ ಕೆ. ಎಚ್. ಪಾಟೀಲ್ ನಿಧನದ ನಂತರ ಡಿ.ಆರ್. ಪಾಟೀಲ್ (ಎಚ್.ಕೆ. ಪಾಟೀಲ್ ಅವರ ಸೋದರ) ಕ್ಷೇತ್ರ ಪ್ರತಿನಿಧಿಸುತ್ತಿದ್ದರು. ಜನತಾ ಪರಿವಾರದಿಂದ ಸಿ.ಎಸ್. ಮುತ್ತಿನಪೆಂಡಿಮಠ ಹಾಗೂ ಬಿಜೆಪಿಯಿಂದ ಶ್ರೀಶೈಲಪ್ಪ ಬಿದರೂರ ಗೆದ್ದಿದ್ದು ಬಿಟ್ಟರೆ, ಉಳಿದ ಚುನಾವಣೆಗಳಲ್ಲಿ ಕಾಂಗ್ರೆಸ್ಸಿನದ್ದೇ ಪಾರಮ್ಯ.

1984ರಿಂದ ವಿಧಾನಪರಿಷತ್ ಸದಸ್ಯರಾಗಿದ್ದ ಎಚ್.ಕೆ. ಪಾಟೀಲ್ ಅವರು 2008ರಲ್ಲಿ ಮೊದಲ ಬಾರಿ ವಿಧಾನಸಭೆ ಚುನಾವಣೆಗೆ ಸ್ಪರ್ಧೆ ಮಾಡಿದ್ದರು. ಗೆಲುವು ದಕ್ಕಲಿಲ್ಲ. ಸತತವಾಗಿ ತಮ್ಮನ್ನು ಆರಿಸಿ ಕಳುಹಿಸಿದ್ದ ಪದವೀಧರ ಕ್ಷೇತ್ರದಿಂದ 2009ರಲ್ಲಿ ಸ್ಪರ್ಧೆ ಮಾಡಿದರೂ, ಅಲ್ಲಿ ಮೊದಲ ಬಾರಿಗೆ ಪರಾಭವಗೊಂಡರು. ಒಂದೇ ವರ್ಷದ ಅವಧಿಯಲ್ಲಿ ಎರಡು ಸೋಲುಗಳಿಂದ ಹಿನ್ನಡೆ ಅನುಭವಿಸಿದ್ದ ಎಚ್.ಕೆ. ಪಾಟೀಲ್ ಅವರು 2013ರ ಚುನಾವಣೆಯಲ್ಲಿ ಜಯಭೇರಿ ಬಾರಿಸುವ ಮೂಲಕ ಪುಟಿದೆದ್ದರು. ಸಿದ್ದರಾಮಯ್ಯ ಸಂಪುಟದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರಾದರು. ಕಾರ್ಯಕ್ರಮಗಳ ಅನುಷ್ಠಾನ ಹಾಗೂ ಪಾರದರ್ಶಕತೆಗಾಗಿ ಪಾಟೀಲ್ ಅವರ ಇಲಾಖೆಗೆ ನಾಲ್ಕು ಬಾರಿ ಕೇಂದ್ರ ಸರ್ಕಾರದ ಪ್ರಶಸ್ತಿ ಲಭಿಸಿದೆ.

ರಾಜ್ಯಾದ್ಯಂತ ಶುದ್ಧ ಕುಡಿಯುವ ನೀರು ಘಟಕ ವಿಸ್ತರಿಸಿದ್ದಾರೆ. ಇನ್ನು ಕ್ಷೇತ್ರ ವ್ಯಾಪ್ತಿಯಲ್ಲಿ ಗದಗ- ಬೆಟಗೇರಿಯನ್ನು ದೇಶದ ಮೊದಲ ವೈ-ಫೈ ಸಿಟಿಯಾಗಿ ಪರಿವರ್ತಿಸಿದ್ದಾರೆ. ಜಿಲ್ಲೆಯಲ್ಲಿರುವ ಎಲ್ಲ 342 ಜನವಸತಿ ಪ್ರದೇಶಗಳಿಗೆ ನದಿ ನೀರು ಪೂರೈಸುವ 1042  ಕೋಟಿ ರು. ವೆಚ್ಚದ ಯೋಜನೆ ರೂಪಿಸಿದ್ದಾರೆ. ಇಂತಹ ಯೋಜನೆ ರಾಷ್ಟ್ರದಲ್ಲಿಯೇ ಮೊದಲು. ಇದಲ್ಲದೆ ದೇಶದ ಮೊತ್ತ ಮೊದಲ ಗ್ರಾಮೀಣಾಭಿವೃದ್ಧಿ ವಿಶ್ವವಿದ್ಯಾಲಯವನ್ನು ಸ್ವಕ್ಷೇತ್ರ ಗದಗಿನಲ್ಲಿ ಸ್ಥಾಪಿಸಿದ್ದಾರೆ. ಹೀಗಾಗಿ ಮತದಾರರು ಮತ್ತೊಮ್ಮೆ ತಮ್ಮನ್ನು ಆಶೀರ್ವದಿಸಬಹುದು ಎಂಬ ಪ್ರಬಲ ವಿಶ್ವಾಸ ಹೊಂದಿದ್ದಾರೆ.

ಕಳೆದ ಬಾರಿ ಬಿಜೆಪಿ ಮೂರು ಹೋಳಾಗಿದ್ದರಿಂದ ಎಚ್.ಕೆ. ಪಾಟೀಲ್ ಅವರಿಗೆ ಲಾಭವೇ ಆಗಿತ್ತು. ಈ ಬಾರಿ ಆ ಪಕ್ಷ ಒಗ್ಗೂಡಿ, ಚುನಾವಣೆ ಎದುರಿಸುತ್ತಿದೆ. ಇದಲ್ಲದೆ ಗದಗ ಕ್ಷೇತ್ರದಲ್ಲಿ ಬಳ್ಳಾರಿಯ ಹಾಲಿ ಸಂಸದ ಹಾಗೂ ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ. ಶ್ರೀರಾಮುಲು ಪ್ರಭಾವ ಜೋರಾಗಿದೆ. 11 ವರ್ಷಗಳಿಂದ ರಾಮುಲು ಅಭಿಮಾನಿಗಳು ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮ ನಡೆಸಿಕೊಂಡು ಬಂದಿದ್ದಾರೆ. ತಂದೆ- ತಾಯಿಗಳಿಗೆ ಮದುವೆ ಭಾರ ಇಳಿಸಿದ ರಾಮುಲು ಬಗ್ಗೆ ಇಲ್ಲಿನ ಜನರಿಗೆ ವಿಶೇಷ ಪ್ರೀತಿ ಇದೆ.

ಇವತ್ತಿಗೂ ಗದಗ ನಗರದ ಮೇಲೆ ಯಾವುದೇ ಹೆಲಿಕಾಪ್ಟರ್ ಹಾರಾಡಿದರೂ ‘ರಾಮುಲು ಬಂದರು’ ಎಂದು ಅನಕ್ಷರಸ್ಥ ಮಹಿಳೆಯರು ಮಾತಾಡಿಕೊಳ್ಳುವುದು ಮಾಮೂಲಿ ಎಂಬಂತಿದೆ. ಕಳೆದ ಬಾರಿ ಎಚ್.ಕೆ. ಪಾಟೀಲ್ ಅವರಿಗೆ ಪ್ರಬಲ ಪೈಪೋಟಿ ಒಡ್ಡಿದ್ದು ರಾಮುಲು ಅವರು ಕಟ್ಟಿದ್ದ ಬಿಎಸ್ಸಾರ್ ಕಾಂಗ್ರೆಸ್ ಅಭ್ಯರ್ಥಿ. ಈ ಬಾರಿ ರಾಮುಲು ಬಿಜೆಪಿ ಅಭ್ಯರ್ಥಿ ಪರ ಪ್ರಚಾರ ಮಾಡಿದರೆ ಎಚ್.ಕೆ. ಪಾಟೀಲರು ಹೆಚ್ಚಿನ ಶ್ರಮ ಹಾಕಬೇಕಾಗುತ್ತದೆ.

ವರದಿ – ಶಿವಕುಮಾರ ಕುಷ್ಟಗಿ

loader