ಮಹದಾಯಿ ಜಲವಿವಾದದ ಬಗ್ಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಮತ್ತೆ ತಮ್ಮ ಪಕ್ಷದ ನಿಲುವು ಸ್ಪಷ್ಟಪಡಿಸಿದ್ದಾರೆ. ಮಹದಾಯಿ ವಿಚಾರವಾಗಿ ತಾವು ಈಗಾಗಲೇ ಸಾಕಷ್ಟುಬಾರಿ ಮಾತನಾಡಿದ್ದು, ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುತ್ತಿದ್ದಂತೆ ವಿವಾದವನ್ನು ಬಗೆಹರಿಸಲಾಗುವುದು ಅವರು ಮಂಗಳವಾರ ಇಲ್ಲಿ ನಡೆಸಿದ ಸುದ್ದಿಗೋಷ್ಠಿ ವೇಳೆ ಹೇಳಿದರು.

ದಾವ​ಣ​ಗೆರೆ: ಮಹದಾಯಿ ಜಲವಿವಾದದ ಬಗ್ಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಮತ್ತೆ ತಮ್ಮ ಪಕ್ಷದ ನಿಲುವು ಸ್ಪಷ್ಟಪಡಿಸಿದ್ದಾರೆ. ಮಹದಾಯಿ ವಿಚಾರವಾಗಿ ತಾವು ಈಗಾಗಲೇ ಸಾಕಷ್ಟುಬಾರಿ ಮಾತನಾಡಿದ್ದು, ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುತ್ತಿದ್ದಂತೆ ವಿವಾದವನ್ನು ಬಗೆಹರಿಸಲಾಗುವುದು ಅವರು ಮಂಗಳವಾರ ಇಲ್ಲಿ ನಡೆಸಿದ ಸುದ್ದಿಗೋಷ್ಠಿ ವೇಳೆ ಹೇಳಿದರು.

ಉತ್ತರಪ್ರದೇಶದ ‘ಯೋಗಿ’ ಪ್ರಯೋಗವನ್ನು ಕರ್ನಾಟಕದಲ್ಲೂ ಮಾಡಲು ಬಿಜೆಪಿ ಮನಸ್ಸು ಮಾಡಿದೆ. ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿ​ಸಲು ಮಠಾ​ಧೀ​ಶರು ಆಸಕ್ತಿ ತೋರಿ​ದರೆ ಮೆರಿಟ್‌ ಆಧಾ​ರ​ದಲ್ಲಿ ರಾಷ್ಟ್ರೀಯ ಸಮಿ​ತಿ ಮುಂದೆ ಚರ್ಚಿಸಿ, ಅವ​ಕಾಶ ನೀಡ​ಲಾ​ಗು​ವುದು ಎಂದು ಬಿಜೆಪಿ ಅಧ್ಯಕ್ಷ ಅಮಿತ್‌ ಶಾ ಭರವಸೆ ನೀಡಿದ್ದಾರೆ.

ದಾವಣಗೆರೆ, ಚಿತ್ರದುರ್ಗದಲ್ಲಿ ಮಂಗಳವಾರ ಪಕ್ಷದ ಪ್ರಚಾರ ನಡೆಸಿದ ಶಾ ಅವರು ವಿವಿಧ ಮಠಾಧೀಶರ ಭೇಟಿಗೂ ಮುನ್ನ ಮಾತನಾಡಿ, ಕೆಲ ಕಡೆ ಸ್ವಾಮೀ​ಜಿ​ಗಳು ಚುನಾ​ವ​ಣೆಗೆ ಸ್ಪರ್ಧಿ​ಸುವ ಇಂಗಿತ ವ್ಯಕ್ತ​ಪ​ಡಿ​ಸು​ತ್ತಿದ್ದು, ಈ ಬಗ್ಗೆ ಪಕ್ಷವೂ ಸಕಾ​ರಾ​ತ್ಮ​ಕ​ವಾಗಿ ಸ್ಪಂದಿ​ಸ​ಲಿದೆ ಎಂದು ಸ್ಪಷ್ಟಪಡಿಸಿದರು.

ಇದೇ ವೇಳೆ ಈ ಪ್ರವಾಸದ ವೇಳೆ ವೀರಶೈವ ಲಿಂಗಾಯತ ಮಠಗಳಿಗೆ ತಮ್ಮ ಭೇಟಿಯನ್ನು ಸಮರ್ಥಿಸಿಕೊಂಡ ಅವರು ವೀರ​ಶೈವ ಲಿಂಗಾ​ಯತ ಮಠ​ಗ​ಳಷ್ಟೇ ಅಲ್ಲ ನಾಡಿನ ಎಲ್ಲಾ ಮಠ, ಮಂದಿ​ರ​ಗ​ಳಿಗೂ ನಾನು ಹೋಗು​ತ್ತೇನೆ. ಎಲ್ಲರ ಆಶೀ​ರ್ವಾ​ದವೂ ನಮಗೆ ಬೇಕು. ತುಮ​ಕೂರು ಸಿದ್ಧ​ಗಂಗಾ ಮಠ​ದಲ್ಲಿ ನಡೆ​ದಾ​ಡುವ ದೇವರು ಡಾ

ಶಿ​ವ​ಕು​ಮಾರ ಸ್ವಾಮಿ​ಗಳ ದರ್ಶನಾಶೀರ್ವಾದ ಪಡೆ​ದಿದ್ದೇನೆ ಎಂದರು.

ಬಿನ್ನವತ್ತಳೆ ಸ್ವೀಕಾರ: ತಮ್ಮ ಎರಡು ದಿನಗಳ ಕರ್ನಾಟಕ ಪ್ರವಾಸದ ಮೊದಲ ದಿನ ತುಮಕೂರಿನ ಸಿದ್ಧಗಂಗಾ ಮಠ, ರಾತ್ರಿ ಬೆಕ್ಕಿನ ಕಲ್ಮಠ ಮಠದಲ್ಲಿ ಸ್ವಾಮೀಜಿಗಳ ಜತೆಗೆ ಗೌಪ್ಯ ಮಾತುಕತೆ ನಡೆಸಿದ್ದ ಅಮಿತ್‌ ಶಾ ಅವರು ಎರಡನೇ ದಿನ ಚಿತ್ರದುರ್ಗದಲ್ಲಿರುವ ರಾಜ್ಯದ ಪ್ರಭಾವಿ ಮಠಾಧಿಪತಿಗಳನ್ನು ಭೇಟಿಯಾದರು. ದಾವಣಗೆರೆಯಲ್ಲಿ ಮುಷ್ಟಿಅಕ್ಕಿ ಅಭಿಯಾನದಲ್ಲಿ ಪಾಲ್ಗೊಂಡು ನೇರವಾಗಿ ಸಿರಿಗೆರೆಗೆ ತೆರಳಿದ ಶಾ, ಅಲ್ಲಿಂದ ಮಾದಾರ ಚನ್ನಯ್ಯ ಪೀಠ, ನಂತರ ಚಿತ್ರದುರ್ಗದ ಮುರುಘಾ ಮಠಕ್ಕೆ ತೆರಳಿ ಶ್ರೀಗಳ ಆಶೀರ್ವಾದ ಪಡೆದರು.

ತರಳಬಾಳು ಹಾಗೂ ಚಿತ್ರದುರ್ಗ ಮುರುಘಾ ಮಠದ ಶ್ರೀಗಳೊಂದಿಗೆ ಮಾತನಾಡುವಾಗ ಪ್ರಮುಖ ರಾಜಕಾರಣಿಗಳು ಉಪಸ್ಥಿತರಿದ್ದರಾದರೂ ಮಾದಾರ ಚೆನ್ನಯ್ಯ ಮಠದಲ್ಲಿ ಶಾ ಮತ್ತು ಮಾದಾರ ಶ್ರೀಗಳು ಇಬ್ಬರೇ 15 ನಿಮಿಷಗಳ ಕಾಲ ಮಾತುಕತೆ ನಡೆಸಿದ್ದು ಕುತೂಹಲ ಮೂಡಿಸಿತು.

ಲಿಂಗಾಯತ ಧರ್ಮಕ್ಕೆ ಸ್ವತಂತ್ರ ಸ್ಥಾನಮಾನ ನೀಡಲು ರಾಜ್ಯಸರ್ಕಾರ ತೀರ್ಮಾನ ಕೈಗೊಂಡು ಕೇಂದ್ರಕ್ಕೆ ಪ್ರಸ್ತಾವ ಕಳಿಸಿದೆ. ಇದಕ್ಕೆ ಒಪ್ಪಿಗೆ ಸೂಚಿಸಲು ಕೇಂದ್ರ ಸರ್ಕಾರದ ಮೇಲೆ ಒತ್ತಡ ಹಾಕುವಂತೆ ಶಿವಮೂರ್ತಿ ಮುರುಘಾ ಶರಣರು ಅಮಿತ್‌ ಶಾ ಅವರಲ್ಲಿ ಮನವಿ ಮಾಡಿದ್ದಾರೆ. ಇನ್ನು ಪರಿಶಿಷ್ಟರಲ್ಲಿ ಒಳಮೀಸಲಾತಿಗೆ ಸಂಬಂಧಿಸಿ ಮಾದಿಗ ಸಮುದಾಯ ಹೋರಾಟ ಮಾಡಿಕೊಂಡು ಬರುತ್ತಿದೆ. ಈ ಸಂಬಂಧ ರಾಜ್ಯ ಸರ್ಕಾರದಿಂದ ಪ್ರಸ್ತಾವ ಬಂದಲ್ಲಿ ಕೇಂದ್ರ ಪೂರಕವಾಗಿ ಸ್ಪಂದಿಸಬೇಕು. ಮಾದಿಗ ಸಮುದಾಯಕ್ಕೆ ಕೇಂದ್ರ ಸರ್ಕಾರದಲ್ಲಿ ಹೆಚ್ಚಿನ ಪ್ರಾತಿನಿಧ್ಯ ನೀಡಬೇಕೆಂದು ಮಾದಾರ ಚೆನ್ನಯ್ಯ ಸ್ವಾಮೀಜಿ ಮನವಿ ಮಾಡಿಕೊಂಡರೆಂದು ಮೂಲಗಳು ತಿಳಿಸಿವೆ.

ಆದರೆ, ಸಿರಿಗೆರೆ ಶ್ರೀಗಳು ಅಮಿತ್‌ ಶಾ ಅವರೊಂದಿಗೆ ನಡೆಸಿದ ಮಾತುಕತೆ ವಿವರಗಳು ಬಹಿರಂಗಗೊಂಡಿಲ್ಲ. ಈ ಸಂಬಂಧ ಮಾತುಕತೆ ವೇಳೆ ಹಾಜರಿದ್ದ ರಾಜಕಾರಣಿಗಳೂ ಪ್ರತಿಕ್ರಿಯಿಸಲು ನಿರಾಕರಿಸಿದ್ದಾರೆ.