50 ಅಭ್ಯರ್ಥಿಗಳ ವೆಚ್ಚಕ್ಕೆ ಬಿಜೆಪಿಯಿಂದಲೇ ಹಣ

First Published 17, Mar 2018, 7:32 AM IST
BJP Give Money To Candidate
Highlights

ವಿಧಾನಸಭಾ ಚುನಾವಣೆಯಲ್ಲಿ ಗೆಲ್ಲುವ ಹೊಸಮುಖಗಳಿಗಾಗಿ ಶೋಧ ನಡೆಸಿರುವ ಬಿಜೆಪಿ ಹೈಕಮಾಂಡ್‌ ಅಂಥ ಸುಮಾರು 40ರಿಂದ 50 ಅಭ್ಯರ್ಥಿಗಳ ಸಂಪೂರ್ಣ ಚುನಾವಣೆ ಖರ್ಚು ವೆಚ್ಚ ನೋಡಿಕೊಳ್ಳುವ ನಿರ್ಧಾರಕ್ಕೆ ಬಂದಿದೆ.

ವಿಜಯ್‌ ಮಲಗಿಹಾಳ

ಬೆಂಗಳೂರು : ವಿಧಾನಸಭಾ ಚುನಾವಣೆಯಲ್ಲಿ ಗೆಲ್ಲುವ ಹೊಸಮುಖಗಳಿಗಾಗಿ ಶೋಧ ನಡೆಸಿರುವ ಬಿಜೆಪಿ ಹೈಕಮಾಂಡ್‌ ಅಂಥ ಸುಮಾರು 40ರಿಂದ 50 ಅಭ್ಯರ್ಥಿಗಳ ಸಂಪೂರ್ಣ ಚುನಾವಣೆ ಖರ್ಚು ವೆಚ್ಚ ನೋಡಿಕೊಳ್ಳುವ ನಿರ್ಧಾರಕ್ಕೆ ಬಂದಿದೆ.

ಅಂದರೆ, ಪಕ್ಷದಲ್ಲಿನ ನಿಷ್ಠಾವಂತ ಕಾರ್ಯಕರ್ತರು, ಸ್ವಾಮೀಜಿಗಳು, ಸಮಾಜ ಸೇವಕರು, ಪತ್ರಕರ್ತರು ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿರುವವರನ್ನು ಆಯ್ದು ಟಿಕೆಟ್‌ ನೀಡುವುದರ ಜೊತೆಗೆ ಅಂಥವರ ವೆಚ್ಚವನ್ನೂ ಭರಿಸಲಾಗುವುದು ಎಂಬ ಸಂದೇಶವನ್ನು ಪಕ್ಷ ವರಿಷ್ಠರು ರವಾನಿಸಿದ್ದಾರೆ ಎಂದು ಉನ್ನತ ಮೂಲಗಳಿಂದ ತಿಳಿದು ಬಂದಿದೆ.

‘ಮಿಷನ್‌-150’ ಎಂಬ ಗುರಿ ಹೊಂದಿರುವ ಬಿಜೆಪಿ ನಾಯಕರಿಗೆ ಭವಿಷ್ಯದ ದೃಷ್ಟಿಯಿಂದ ಹಿಂದೂ ಸಿದ್ಧಾಂತಕ್ಕೆ ಬದ್ಧರಾಗಿರುವವರನ್ನು ಹೆಚ್ಚಿನ ಸಂಖ್ಯೆಯಲ್ಲಿ ಕಣಕ್ಕಿಳಿಸಬೇಕು ಎಂಬ ಉದ್ದೇಶ ವರಿಷ್ಠರಿಗಿದೆ. ಈಗಿರುವ ಹಳೆಯ ತಲೆಗಳಿಗೇ ಮತ್ತೆ ಮಣೆ ಹಾಕುವ ಬದಲು ಹೊಸಬರಿಗೆ ಅವಕಾಶ ನೀಡಬೇಕು. ಆ ಮೂಲಕ ರಾಜಕೀಯದಲ್ಲಿ ಹೊಸ ನೀರು ಹರಿಯಲು ಅನುವು ಮಾಡಿಕೊಡಬೇಕು ಎಂಬ ಆಶಯ ವರಿಷ್ಠರದ್ದು. ಇದಕ್ಕೆ ಸಂಘ ಪರಿವಾರದ ಮುಖಂಡರ ಒತ್ತಾಸೆಯೂ ಪ್ರಮುಖ ಕಾರಣ.

ಸದ್ಯದ ಪರಿಸ್ಥಿತಿಯಲ್ಲಿ ಚುನಾವಣೆ ಎದುರಿಸುವುದು ಸುಲಭದ ಮಾತಲ್ಲ. ಹಣವನ್ನು ಹೊಳೆಯಂತೆ ಚಲ್ಲದೆ ಚುನಾವಣೆ ಎದುರಿಸುವುದು ಅಸಾಧ್ಯ ಎಂಬ ಪರಿಸ್ಥಿತಿ ನಿರ್ಮಾಣವಾಗಿದೆ. ಅಭ್ಯರ್ಥಿಯ ಹಿನ್ನೆಲೆ, ಸಚ್ಚಾರಿತ್ರ್ಯ, ಸನ್ನಡತೆಗಳಷ್ಟೇ ಗೆಲುವನ್ನು ನಿರ್ಧರಿಸುವುದಿಲ್ಲ ಎಂಬ ವಾಸ್ತವಾಂಶವನ್ನು ಅರಿತುಕೊಂಡಿರುವ ಬಿಜೆಪಿ ವರಿಷ್ಠರು ಅಂಥ ವ್ಯಕ್ತಿಗಳನ್ನು ಚುನಾವಣಾ ಅಖಾಡಕ್ಕೆ ಇಳಿಸಿ ಆರ್ಥಿಕ ನೆರವು ನೀಡುವ ಪ್ರಯೋಗಕ್ಕೆ ಮುಂದಾಗಿದ್ದಾರೆ.

ಕಡಿಮೆ ಅಂತರದಲ್ಲಿ ಸೋತವರಿಗೆ ಚಾನ್ಸ್‌:

ಕಳೆದ ಚುನಾವಣೆಯಲ್ಲಿ ಕಡಮೆ ಮತಗಳ ಅಂತರದಿಂದ ಸೋತವರಿಗೆ ಈ ಬಾರಿ ಟಿಕೆಟ್‌ ಸಿಗುವ ಸಾಧ್ಯತೆ ಹೆಚ್ಚಿದೆ. ಆದರೆ, ಹೆಚ್ಚಿನ ಮತಗಳ ಅಂತರದಿಂದ ಸೋತ ಕ್ಷೇತ್ರಗಳು, ಎರಡಕ್ಕಿಂತ ಹೆಚ್ಚು ಬಾರಿ ಗೆಲ್ಲಲು ಸಾಧ್ಯವಾಗದ ಕ್ಷೇತ್ರಗಳಲ್ಲಿ ಹೊಸ ಮುಖಗಳಿಗೆ ಅವಕಾಶ ನೀಡುವ ಚಿಂತನೆ ಇದೆ. ಇಂಥ ಕ್ಷೇತ್ರಗಳ ಪಟ್ಟಿಯೂ ವರಿಷ್ಠರ ಕೈಸೇರಿದೆ. ಆ ಕ್ಷೇತ್ರಗಳಿಗೆ ಸಮರ್ಥ ಅಭ್ಯರ್ಥಿಯ ಹುಡುಕಾಟ, ಮನವೊಲಿಕೆ ಮತ್ತಿತರ ಪ್ರಯತ್ನಗಳು ನಡೆಯುತ್ತಿವೆ ಎನ್ನಲಾಗಿದೆ.

ಆದರೆ, ವರಿಷ್ಠರು ಯೋಚಿಸಿ ಆಯ್ಕೆ ಮಾಡುವಂಥ ವ್ಯಕ್ತಿಗಳ ಪೈಕಿ ಎಷ್ಟುಮಂದಿ ಚುನಾವಣಾ ಅಖಾಡಕ್ಕೆ ಇಳಿಯಲು ಒಪ್ಪುತ್ತಾರೆÜ ಎನ್ನುವುದು ಸ್ಪಷ್ಟವಾಗಿ ತಿಳಿಯಲು ಇನ್ನೂ ಕೆಲವು ದಿನಗಳು ಬೇಕಾಗುತ್ತದೆ. ವರಿಷ್ಠರು ಸೂಚಿಸಿರುವ ಪ್ರಕಾರ ಸುಮಾರು 40ರಿಂದ 50 ಮಂದಿಯ ಚುನಾವಣಾ ಖರ್ಚು ವೆಚ್ಚ ನೋಡಿಕೊಳ್ಳಬಹುದಾದರೂ ಅಷ್ಟುಮಂದಿ ಸಮರ್ಥರು ಲಭ್ಯವಾಗುತ್ತಾರೆಯೇ ಎಂಬುದು ಕುತೂಹಲಕರವಾಗಿದೆ.

ಸಮೀಕ್ಷೆ ಫಲಿತಾಂಶ ವರಿಷ್ಠರಿಗೆ:

ಈಗಾಗಲೇ ರಾಷ್ಟ್ರೀಯ ಬಿಜೆಪಿಯಿಂದ ಅಭ್ಯರ್ಥಿಗಳ ಆಯ್ಕೆಗಾಗಿ ಖಾಸಗಿ ಸಮೀಕ್ಷೆ ನಡೆಯುತ್ತಿದೆ. ಪಕ್ಷದ ವಿವಿಧ ಹಂತದ ರಾಷ್ಟ್ರೀಯ ಮುಖಂಡರು ರಾಜ್ಯ ಪ್ರವಾಸದ ವೇಳೆ ಯಾರನ್ನು ಕಣಕ್ಕಿಳಿಸಿದರೆ ಗೆಲ್ಲಬಹುದು ಎಂಬುದರ ಬಗ್ಗೆ ಮಾಹಿತಿ ಸಂಗ್ರಹಿಸುತ್ತಿದ್ದಾರೆ. ಪಕ್ಷದ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಅವರು ಕಳೆದ ವಾರ ದೆಹಲಿಗೆ ತೆರಳಿದ ವೇಳೆ ತಮ್ಮ ದೃಷ್ಟಿಯಲ್ಲಿ ಯಾವ ಕ್ಷೇತ್ರದಿಂದ ಯಾರು ಕಣಕ್ಕಿಳಿದರೆ ಉತ್ತಮ ಎಂಬಿತ್ಯಾದಿ ವಿವರಗಳನ್ನು ಒಳಗೊಂಡ ಅಭ್ಯರ್ಥಿಗಳ ಪಟ್ಟಿಯೊಂದನ್ನು ವರಿಷ್ಠರ ಕೈಗೆ ಕೊಟ್ಟು ಬಂದಿದ್ದಾರೆ.

ಈ ತಿಂಗಳಾಂತ್ಯದ ವೇಳೆ ಬಹುತೇಕ ಹಾಲಿ ಶಾಸಕರು ಪ್ರತಿನಿಧಿಸುವ ಕ್ಷೇತ್ರಗಳೂ ಸೇರಿದಂತೆ ಸುಮಾರು 100 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಮೊದಲ ಹಂತದ ಪಟ್ಟಿಬಿಡುಗಡೆ ಮಾಡುವ ಉದ್ದೇಶವನ್ನು ವರಿಷ್ಠರು ಹೊಂದಿದ್ದಾರೆ. ಅಂದಾಜು ಮೂರರಿಂದ ನಾಲ್ಕು ಹಂತಗಳಲ್ಲಿ ಅಭ್ಯರ್ಥಿಗಳ ಪಟ್ಟಿಬಿಡುಗಡೆಗೊಳಿಸುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ.

loader