‘ಕಾಂಗ್ರೆಸ್ ಮುಕ್ತ ಭಾರತ’ ಘೋಷಣೆಯಡಿ ಕಾಂಗ್ರೆಸ್ ಪಕ್ಷವನ್ನು ದೇಶದಿಂದ ನಿರ್ಮೂಲನೆ ಮಾಡಲು ಪ್ರಯತ್ನಿಸುತ್ತಿರುವ ಬಿಜೆಪಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸಡ್ಡು ಹೊಡೆದಿದ್ದಾರೆ. ದೇಶದಲ್ಲಿ ‘ಬಿಜೆಪಿ ಮುಕ್ತ ಭಾರತ’ ನಿರ್ಮಾಣ ಮಾಡಲಿದ್ದು, ಆ ಕಾರ್ಯ ಕರ್ನಾಟಕದಿಂದಲೇ ಆರಂಭವಾಗಲಿದೆ ಎಂದು ಘೋಷಿಸಿದ್ದಾರೆ. ಇದಕ್ಕಾಗಿ ರಾಜ್ಯದಲ್ಲಿ ಯಾವುದೇ ಪಕ್ಷದೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುವ ಪ್ರಶ್ನೆಯೇ ಇಲ್ಲ ಎಂದು ತಿಳಿಸಿದ್ದಾರೆ. 

ಹುಬ್ಬಳ್ಳಿ (ಜು.27): ‘ಕಾಂಗ್ರೆಸ್ ಮುಕ್ತ ಭಾರತ’ ಘೋಷಣೆಯಡಿ ಕಾಂಗ್ರೆಸ್ ಪಕ್ಷವನ್ನು ದೇಶದಿಂದ ನಿರ್ಮೂಲನೆ ಮಾಡಲು ಪ್ರಯತ್ನಿಸುತ್ತಿರುವ ಬಿಜೆಪಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸಡ್ಡು ಹೊಡೆದಿದ್ದಾರೆ. ದೇಶದಲ್ಲಿ ‘ಬಿಜೆಪಿ ಮುಕ್ತ ಭಾರತ’ ನಿರ್ಮಾಣ ಮಾಡಲಿದ್ದು, ಆ ಕಾರ್ಯ ಕರ್ನಾಟಕದಿಂದಲೇ ಆರಂಭವಾಗಲಿದೆ ಎಂದು ಘೋಷಿಸಿದ್ದಾರೆ. ಇದಕ್ಕಾಗಿ ರಾಜ್ಯದಲ್ಲಿ ಯಾವುದೇ ಪಕ್ಷದೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುವ ಪ್ರಶ್ನೆಯೇ ಇಲ್ಲ ಎಂದು ತಿಳಿಸಿದ್ದಾರೆ. 
ನಗರದ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಮುಂದಿನ ವಿಧಾನಸಭೆ ಹಾಗೂ ಲೋಕಸಭೆ ಚುನಾವಣೆಯಿಂದಲೇ ಈ ಕಾರ್ಯ ಆರಂಭವಾಗಲಿದೆ. ಬಿಹಾರ ಹಾಗೂ ರಾಜ್ಯದ ಪರಿಸ್ಥಿತಿಯೇ ಬೇರೆ. ಇಲ್ಲಿ ಯಾವುದೇ ಪಕ್ಷದೊಂದಿಗೆ ಮೈತ್ರಿಯ ಅಗತ್ಯವಿಲ್ಲ. ಪ್ರಾಮಾಣಿಕ ಹಾಗೂ ಅಭಿವೃದ್ಧಿಪರ ಆಡಳಿತ ನೀಡುವ ಪಕ್ಷವನ್ನು ಕರ್ನಾಟಕದ ಜನ ಬೆಂಬಲಿಸುತ್ತಾರೆ. ಹೀಗಾಗಿ ಸ್ವಂತ ಶಕ್ತಿಯಿಂದ ನಾವು ಗೆದ್ದು ಬರುತ್ತೇವೆ ಎಂದು ಸಿಎಂ ವಿಶ್ವಾಸ ವ್ಯಕ್ತಪಡಿಸಿದರು. 
ನಿತೀಶ್ ಅವಕಾಶವಾದಿ: 
ಬಿಹಾರದ ರಾಜಕಾರಣ ಕುರಿತು ಪ್ರತಿಕ್ರಿಯೆ ನೀಡಿದ ಸಿದ್ದರಾಮಯ್ಯ, ನಿತೀಶ್‌ಕುಮಾರ್ ಅವಕಾಶವಾದಿ ರಾಜಕಾರಣ ಮಾಡಿದ್ದಾರೆ. ನಿತೀಶ್ ಹಾಗೂ ಲಾಲೂಪ್ರಸಾದ್ ಇಬ್ಬರೂ ಒಟ್ಟಾಗಿ ಚುನಾವಣೆಗೆ ಹೋದ ಕಾರಣಕ್ಕೆ ಅಲ್ಲಿನ ಜನ ಆಶೀರ್ವಾದ ಮಾಡಿದ್ದಾರೆ. ಒಂದು ವೇಳೆ ಪ್ರತ್ಯೇಕವಾಗಿ ಜನರ ಮುಂದೆ ಹೋಗಿದ್ದರೆ ಫಲಿತಾಂಶ ಬೇರೆಯೇ ಇರುತ್ತಿತ್ತು. ಇಂತಹ ಕೆಲಸ ನಿತೀಶ್ ಕುಮಾರ್ ಅವರಿಂದ ನಡೆಯಬಾರದಿತ್ತು. ಆದರೂ ಬಿಹಾರದ ಬೆಳವಣಿಗೆ ರಾಜ್ಯದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಸಿದ್ದರಾಮಯ್ಯ ಸ್ಪಷ್ಟಪಡಿಸಿದರು.