ಬೆಂಗಳೂರು[ಆ.03]: ಶಾಸಕ ಸ್ಥಾನದಿಂದ ಅನರ್ಹಗೊಂಡಿರುವ ಮಾಜಿ ಸಚಿವ ರಮೇಶ್‌ ಜಾರಕಿಹೊಳಿ ಅವರನ್ನು ಬಿಜೆಪಿಯ ಮಾಜಿ ಸಚಿವ ಸಿ.ಪಿ.ಯೋಗೇಶ್ವರ್‌ ಅವರು ಭೇಟಿ ಮಾಡಿ ಮಾತುಕತೆ ನಡೆಸಿದರು.

ಶುಕ್ರವಾರ ಸಂಜೆ ನಗರದಲ್ಲಿನ ಜಾರಕಿಹೊಳಿ ನಿವಾಸಕ್ಕೆ ತೆರಳಿದ ಯೋಗೇಶ್ವರ್‌ ಅವರು ಸುಮಾರು ಹೊತ್ತು ಅವರೊಂದಿಗೆ ಸಮಾಲೋಚನೆ ನಡೆಸಿದರು. ಅನರ್ಹತೆ ಪ್ರಶ್ನಿಸಿ ಸುಪ್ರೀಂಕೋರ್ಟ್‌ ಮೊರೆ ಹೋಗಿರುವ ಹಿನ್ನೆಲೆಯಲ್ಲಿ ಮುಂದಿನ ಪ್ರಕ್ರಿಯೆಗಳ ಬಗ್ಗೆ ಚರ್ಚೆ ನಡೆದಿದೆ ಎಂದು ತಿಳಿದು ಬಂದಿದೆ.

ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಯೋಗೇಶ್ವರ್‌, ಭೇಟಿಗೆ ವಿಶೇಷ ಮಹತ್ವವೇನೂ ಇಲ್ಲ. ಅವರೂ ಬಿಡುವಾಗಿದ್ದರು. ನಾನೂ ಬಿಡುವಾಗಿದ್ದೆ. ಹೀಗಾಗಿ, ಭೇಟಿಯಾಗಲು ಬಂದಿದ್ದೆ. ನ್ಯಾಯಾಲಯದಲ್ಲಿ ಅನರ್ಹತೆಯ ಪ್ರಕರಣ ಇತ್ಯರ್ಥವಾದ ನಂತರ ಮುಂದಿನ ಬೆಳವಣಿಗೆಗಳು ನಡೆಯಲಿವೆ ಎಂದು ಸೂಚ್ಯವಾಗಿ ಹೇಳಿದರು.