Asianet Suvarna News Asianet Suvarna News

ಕೈ ಮಹಾಮೈತ್ರಿಗೆ ಪ್ರತಿತಂತ್ರ: ಬಿಜೆಪಿ ಆರೆಸ್ಸೆಸ್'ಗೆ ಮೊರೆ

ಇತ್ತೀಚಿನ ಪಂಚರಾಜ್ಯ ವಿಧಾನಸಭಾ ಚುನಾವಣೆಗಳ ಪೈಕಿ 4ರಲ್ಲಿ ಸೋಲುಂಡ ವಿಪಕ್ಷಗಳು, 2019ರ ಲೋಕಸಭಾ ಚುನಾವಣೆಗೆ ಮಹಾಮೈತ್ರಿಗೆ ಸಜ್ಜಾದ ಬೆನ್ನಲ್ಲೇ, ಇದಕ್ಕೆ ಪ್ರತಿತಂತ್ರ ರೂಪಿಸಲು ಭಾರತೀಯ ಜನತಾ ಪಕ್ಷ ಕೂಡಾ ಮುಂದಾಗಿದೆ. 2019ರ ಲೋಕಸಭಾ ಚುನಾವಣೆಯಲ್ಲಿ ಮತ್ತೊಂದು ಭರ್ಜರಿ ಗೆಲುವು ಖಚಿತಪಡಿಸಲು ಅಗತ್ಯ ಕಾರ್ಯತಂತ್ರ ರೂಪಿಸಿಕೊಡಿ ಎಂದು ಪಕ್ಷದ ನಾಯಕರು, ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್‌)ವನ್ನು ಕೋರಿಕೊಂಡಿದ್ದಾರೆ.

BJP Expecting The Help From RSS

ನವದೆಹಲಿ(ಮಾ.23): ಇತ್ತೀಚಿನ ಪಂಚರಾಜ್ಯ ವಿಧಾನಸಭಾ ಚುನಾವಣೆಗಳ ಪೈಕಿ 4ರಲ್ಲಿ ಸೋಲುಂಡ ವಿಪಕ್ಷಗಳು, 2019ರ ಲೋಕಸಭಾ ಚುನಾವಣೆಗೆ ಮಹಾಮೈತ್ರಿಗೆ ಸಜ್ಜಾದ ಬೆನ್ನಲ್ಲೇ, ಇದಕ್ಕೆ ಪ್ರತಿತಂತ್ರ ರೂಪಿಸಲು ಭಾರತೀಯ ಜನತಾ ಪಕ್ಷ ಕೂಡಾ ಮುಂದಾಗಿದೆ. 2019ರ ಲೋಕಸಭಾ ಚುನಾವಣೆಯಲ್ಲಿ ಮತ್ತೊಂದು ಭರ್ಜರಿ ಗೆಲುವು ಖಚಿತಪಡಿಸಲು ಅಗತ್ಯ ಕಾರ್ಯತಂತ್ರ ರೂಪಿಸಿಕೊಡಿ ಎಂದು ಪಕ್ಷದ ನಾಯಕರು, ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್‌)ವನ್ನು ಕೋರಿಕೊಂಡಿದ್ದಾರೆ.

ಈ ಮೂಲಕ ಕೇಂದ್ರದಲ್ಲಿ ಮತ್ತೊಂದು ಅವಧಿಗೂ ಅಧಿಕಾರವನ್ನು ತನ್ನಲ್ಲೇ ಉಳಿಸಿಕೊಳ್ಳಲು ಪಕ್ಷ ಮುನ್ನುಡಿ ಇಟ್ಟಿದೆ. ಇತ್ತೀಚೆಗಷ್ಟೇ ತಮಿಳುನಾಡಿನ ಕೊಯಮತ್ತೂರಿನಲ್ಲಿ ನಡೆದ ಆರ್‌ಎಸ್‌ಎಸ್‌ ನಾಯಕರ ಸಭೆಯಲ್ಲಿ ಭಾಗವಹಿಸಿದ್ದ ಬಿಜೆಪಿಯ ಕೆಲ ಹಿರಿಯ ನಾಯಕರು ಇಂಥದ್ದೊಂದು ಕೋರಿಕೆ ಸಲ್ಲಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಪ್ರತಿತಂತ್ರ ರೂಪಿಸಿ:

ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ ನಡೆದ ಹಲವು ರಾಜ್ಯಗಳ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಭಾರೀ ಗೆಲುವು ಸಾಧಿಸಿತ್ತು. ಅದರಲ್ಲೂ ಇತ್ತೀಚೆಗೆ ಉತ್ತರಪ್ರದೇಶ, ಮಣಿಪುರ, ಉತ್ತರಾಖಂಡ ಮತ್ತು ಗೋವಾದಲ್ಲಿನ ಬಿಜೆಪಿ ಗೆಲುವು ವಿಪಕ್ಷಗಳು, ಅದರಲ್ಲೂ ಕಾಂಗ್ರೆಸ್‌ ಅನ್ನು ಕಂಗೆಡಿಸಿತ್ತು. ಹೀಗಾಗಿ ಸ್ವತಃ ಕಾಂಗ್ರೆಸ್‌ ಉಪಾಧ್ಯಕ್ಷ ರಾಹುಲ್‌ ಗಾಂಧಿ ಅವರೇ, ಎನ್‌ಸಿಪಿ ನಾಯಕ ಶರದ್‌ ಪವಾರ್‌ ಅವರನ್ನು ಭೇಟಿ ಮಾಡಿ 2019ರ ಲೋಕಸಭಾ ಚುನಾವಣೆಗೆ ಬಿಜೆಪಿ ವಿರುದ್ಧ ಮಹಾಮೈತ್ರಿ ರಚಿಸಬೇಕಾದ ಅಗತ್ಯವನ್ನು ಪ್ರತಿಪಾದಿಸಿದ್ದರು. ಈ ಮಾತುಕತೆ ವೇಳೆ 2015ರಲ್ಲಿ ಬಿಹಾರದಲ್ಲಿ ಮಾಡಿಕೊಳ್ಳಲಾದ ಮಹಾಮೈತ್ರಿಯ ಮಾದರಿಯ ಮೈತ್ರಿಗೆ ಒಲವು ವ್ಯಕ್ತವಾಗಿತ್ತು. ಈ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡಿರುವ ಬಿಜೆಪಿ ನಾಯಕರು, ಕಾಂಗ್ರೆಸ್‌ ನೇತೃತ್ವದ ವಿಪಕ್ಷಗಳ ತಂತ್ರಕ್ಕೆ ಪ್ರತಿತಂತ್ರ ರೂಪಿಸಲು ಮುಂದಾಗಿದ್ದಾರೆ. ಇದಕ್ಕಾಗಿ ಆರ್‌ಎಸ್‌ಎಸ್‌ನ ಬೆಂಬಲ ಕೋರಿದ್ದಾರೆ. ಕೊಯಮತ್ತೂರಿನಲ್ಲಿ ನಡೆದ ಆರ್‌ಎಸ್‌ಎಸ್‌ ಸಭೆಯಲ್ಲಿ ಬಿಜೆಪಿ ರಾಷ್ಟ್ರೀಯ ಪ್ರದಾನ ಕಾರ್ಯದರ್ಶಿ (ಸಂಘಟನಾ) ರಾಮ್‌ಲಾಲ್‌, ಜಂಟಿ ಪ್ರದಾನ ಕಾರ್ಯದರ್ಶಿಗಳಾದ ಶಿವಪ್ರಕಾಶ್‌ಸಿಂಗ್‌, ಸೌದಾನ್‌ ಸಿಂಗ್‌, ವಿ.ಸತೀಶ್‌ ಭಾಗಿಯಾಗಿದ್ದು, ಅವರು ಇಂಥದ್ದೊಂದು ಬೇಡಿಕೆ ಸಲ್ಲಿಸಿದ್ದಾರೆ ಎನ್ನಲಾಗಿದೆ.

ಮುಖ್ಯವಾಗಿ ತಮಿಳುನಾಡು, ತೆಲಂಗಾಣ, ಆಂಧ್ರಪ್ರದೇಶ, ಕೇರಳ, ಒಡಿಶಾ, ಪಶ್ಚಿಮ ಬಂಗಾಳ ಮತ್ತು ಈಶಾನ್ಯದ ಕೆಲ ರಾಜ್ಯಗಳಲ್ಲಿ ಪಕ್ಷ ದುರ್ಬಲವಾಗಿದ್ದು, ಅಲ್ಲಿ ಪಕ್ಷವನ್ನು ಬಲಪಡಿಸಬೇಕಾದ ಅಗತ್ಯವನ್ನು ಬಿಜೆಪಿ ನಾಯಕರು ಪ್ರತಿಪಾದಿಸಿದ್ದಾರೆ. ಈ ರಾಜ್ಯಗಳಲ್ಲಿನ ಪಕ್ಷದ ಬಲಾಬಲದ ಕುರಿತ ಅಂಕಿ ಅಂಶಗಳನ್ನು ಆರ್‌ಎಸ್‌ಎಸ್‌ಗೆ ನೀಡಲಾಗಿದ್ದು, ಇದನ್ನು ಆಧರಿಸಿ ರಣತಂತ್ರ ರೂಪಿಸಿಕೊಡಿ ಎಂದು ಬಿಜೆಪಿ ನಾಯಕರು ಕೋರಿದ್ದಾರೆ ಎಂದು ಮೂಲಗಳು ತಿಳಿಸಿವೆ. ಹಲವು ರಾಜ್ಯಗಳಲ್ಲಿ ದಲಿತರು ಮತ್ತು ಆದಿವಾಸಿಗಳು ಇನ್ನೂ ಬಿಜೆಪಿಯನ್ನು ಒಪ್ಪಿಲ್ಲ. ಈ ವಿಷಯದಲ್ಲಿ ಆರ್‌ಎಸ್‌ಎಸ್‌ನ ನೆರವು ಪಕ್ಷಕ್ಕೆ ತೀರಾ ಅಗತ್ಯವಿದೆ. ಅದರಲ್ಲೂ ಹಲವು ರಾಜ್ಯಗಳ ಗ್ರಾಮೀಣ ಭಾಗಗಳಲ್ಲಿ ಪಕ್ಷ ತೀರಾ ದುರ್ಬಲವಾಗಿದೆ ಎಂಬ ಅಂಶವನ್ನು ಆರ್‌ಎಸ್‌ಎಸ್‌ ಗಮನಕ್ಕೆ ತಂದಿದೆ.

ವರದಿ: ಕನ್ನಡ ಪ್ರಭ

Follow Us:
Download App:
  • android
  • ios