Asianet Suvarna News Asianet Suvarna News

ವಿಧಾನಸಭೆಗೆ ಸೀರೆ, ಅಡುಗೆ ಪಾತ್ರೆ ತರಲು ಬಿಜೆಪಿ ಯತ್ನ!

ಕಾಂಗ್ರೆಸ್‌ ಮುಖಂಡರು ಮತದಾರರನ್ನು ಸೆಳೆಯಲು ಹಂಚುತ್ತಿರುವ ಸೀರೆ, ಅಡುಗೆ ಸಾಮಾನುಗಳನ್ನು ಪ್ರದರ್ಶಿಸಲು ವಿಧಾನಸಭೆಯೊಳಗೆ ತರಲು ಬಿಜೆಪಿ ಶಾಸಕರು ನಡೆಸಿದ ಯತ್ನವನ್ನು ಮಾರ್ಷಲ್‌ಗಳು ವಿಫಲಗೊಳಿಸಿದ ಪ್ರಸಂಗ ಶುಕ್ರವಾರ ನಡೆಯಿತು.

BJP Drama In VidhanSabha

ವಿಧಾನಸಭೆ : ಕಾಂಗ್ರೆಸ್‌ ಮುಖಂಡರು ಮತದಾರರನ್ನು ಸೆಳೆಯಲು ಹಂಚುತ್ತಿರುವ ಸೀರೆ, ಅಡುಗೆ ಸಾಮಾನುಗಳನ್ನು ಪ್ರದರ್ಶಿಸಲು ವಿಧಾನಸಭೆಯೊಳಗೆ ತರಲು ಬಿಜೆಪಿ ಶಾಸಕರು ನಡೆಸಿದ ಯತ್ನವನ್ನು ಮಾರ್ಷಲ್‌ಗಳು ವಿಫಲಗೊಳಿಸಿದ ಪ್ರಸಂಗ ಶುಕ್ರವಾರ ನಡೆಯಿತು.

ನೀರಾವರಿ ಸಚಿವ ಎಂ.ಬಿ. ಪಾಟೀಲ ಅವರು ತಮ್ಮ ಕ್ಷೇತ್ರದಲ್ಲಿ ಮತದಾರರನ್ನು ಸೆಳೆಯಲು ಸೀರೆ ಹಂಚಿದ್ದಾರೆಂದು ಆರೋಪಿಸಿ ಬಿಜೆಪಿ ಸದಸ್ಯರು ಸದನದೊಳಗೆ ಪ್ರದರ್ಶಿಸಲು ಸೀರೆ, ಅಡುಗೆ ಸಾಮಾನುಗಳನ್ನು ತರುವ ಪ್ರಯತ್ನವನ್ನು ಮಾರ್ಷಲ್‌ಗಳು ತಡೆದರು.

ಭೋಜನ ವಿರಾಮದ ನಂತರ ಸದನ ಆರಂಭವಾಗುತ್ತಿದ್ದಂತೆ ಬಿಜೆಪಿ ಶಾಸಕರಾದ ಸತೀಶ್‌ ರೆಡ್ಡಿ, ಅರವಿಂದ್‌ ಬೆಲ್ಲದ ಅವರು ಸೀರೆ ಹಾಗೂ ಅಡುಗೆ ಸಾಮಾನುಗಳನ್ನು ಸದನದೊಳಗೆ ಕೊಂಡೊಯ್ಯುವ ಪ್ರಯತ್ನ ನಡೆಸಿದರು. ಈ ಬಗ್ಗೆ ಮೊದಲೇ ಮಾಹಿತಿ ಪಡೆದಿದ್ದ ಮಾರ್ಷಲ್‌ಗಳು ಒಳಗೆ ಕೊಂಡೊಯ್ಯುವುದಕ್ಕೆ ಅವಕಾಶ ನೀಡಲಿಲ್ಲ. ಅಡುಗೆ ಸಾಮಾನಿನ ಚಿತ್ರವುಳ್ಳ ಬಾಕ್ಸನ್ನಾದರೂ ಬಿಡುವಂತೆ ಕೋರಿದರು. ಅದಕ್ಕೂ ಮಾರ್ಷಲ್‌ಗಳು ಅವಕಾಶ ನೀಡದಿದ್ದಾಗ ಶಾಸಕರು ತೀವ್ರ ಆಕ್ರೋಶ ವ್ಯಕ್ತಪಡಿಸಿ ಅವರ ವಿರುದ್ಧವೇ ತಿರುಗಿ ಬಿದ್ದರು. ಈ ವೇಳೆ ಸತೀಶ್‌ ರೆಡ್ಡಿ, ಅರವಿಂದ್‌ ಬೆಲ್ಲದ ಮತ್ತು ಮಾರ್ಷಲ್‌ಗಳ ನಡುವೆ ವಾಗ್ವಾದ ನಡೆಯಿತು. ಅಡುಗೆ ಸಾಮಾನುಗಳ ಮಾದರಿಯು ಬಾಕ್ಸ್‌ನ ಮೇಲೆ ಚಿತ್ರಗಳಿರುವ ಕಾರಣ ಅದನ್ನು ಬಿಡಲು ಸಾಧ್ಯವಿಲ್ಲ ಎಂದು ಹೇಳಿದರು.

ಶಾಸಕರ ತಪಾಸಣೆ:

ಸದನದೊಳಗೆ ಸಾಮಾನುಗಳನ್ನು ತರುವ ಮಾಹಿತಿ ಮೊದಲೇ ತಿಳಿದಿದ್ದ ಮಾರ್ಷಲ್‌ಗಳು, ಶಾಸಕರಾದ ಸುರೇಶ್‌ ಕುಮಾರ್‌, ವಿಶ್ವೇಶ್ವರ ಹೆಗಡೆ ಸೇರಿದಂತೆ ಕೆಲ ಬಿಜೆಪಿ ಶಾಸಕರನ್ನು ತಪಾಸಣೆ ನಡೆಸಿದರು. ಅವರ ಜೇಬಿನಲ್ಲಿದ್ದ ಕೆಲ ವಸ್ತುಗಳನ್ನು ಮಾರ್ಷಲ್‌ಗಳು ತಮ್ಮ ವಶಕ್ಕೆ ಪಡೆದುಕೊಂಡರು. ಹೀಗಿದ್ಯಾಗ್ಯೂ ಬಿಜೆಪಿ ಸದಸ್ಯ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಸಚಿವ ಎಂ.ಬಿ. ಪಾಟೀಲ್‌ ಸೀರೆ ಹಂಚಿಕೆ ಮಾಡಿದ ಚೀಲವನ್ನು ಸದನದೊಳಗೆ ತಂದು ಪ್ರದರ್ಶಿಸಿದರು. ಚುನಾವಣೆ ಘೋಷಣೆಗೂ ಮುನ್ನವೇ ಸಚಿವರು ಸೀರೆ ಹಂಚುವ ಮೂಲಕ ಅಮಿಷ ತೋರಿಸುತ್ತಿದ್ದಾರೆ ಎಂದು ಆರೋಪಿಸಿದರು. ಇದು ಆಡಳಿತ ಮತ್ತು ಪ್ರತಿಪಕ್ಷ ನಡುವೆ ಮಾತಿನ ಚಕಮಕಿಗೆ ಕಾರಣವಾಯಿತು.

ಲಂಚ ತೆಗೆದುಕೊಳ್ಳುವುದು ತಪ್ಪಲ್ಲ..!

ಚುನಾವಣಾ ಪೂರ್ವದಲ್ಲಿ ಪ್ರತಿಯೊಬ್ಬ ಜನಪ್ರತಿನಿಧಿ ಸೀರೆ, ಹೆಂಡ, ಹಣ ಹಂಚುವುದು ಸಾಮಾನ್ಯ. ತಮ್ಮ ಶಕ್ತಿಗನುಗುಣವಾಗಿ ಏನೇನು ಬೇಕೋ ಅದನ್ನು ಹಂಚುತ್ತಾರೆ. ಆದರೆ, ಸಿಕ್ಕಿ ಹಾಕಿಕೊಳ್ಳಬಾರದು. ಲಂಚ ತೆಗೆದುಕೊಳ್ಳುವುದು ತಪ್ಪಲ್ಲ. ತಗೊಂಡು ಸಿಕ್ಕಿ ಬೀಳಬಾರದು ಎಂದು ಆರೋಗ್ಯ ಸಚಿವ ರಮೇಶ್‌ ಕುಮಾರ್‌ ಎಂದರು.

ಈ ಹಿಂದೆಯು ಸದನದೊಳಗೆ ಕಳಪೆ ಅಕ್ಕಿ ತರುವ ಪ್ರಯತ್ನ ನಡೆಸಲಾಗಿತ್ತು. ಸದನದೊಳಗೆ ಏನೇನೋ ತಂದು ಪ್ರದರ್ಶನ ಮಾಡುವುದು ಸರಿಯಲ್ಲ. ಚುನಾವಣಾ ಸಮಯದಲ್ಲಿ ಪ್ರತಿಪಕ್ಷದವರು ಇಂತಹ ಕೆಲಸ ಯಾವ ಕಾರಣಕ್ಕಾಗಿ ಮಾಡುತ್ತಾರೆ ಎಂಬುದು ಪ್ರತಿಯೊಬ್ಬರಿಗೂ ಗೊತ್ತಾಗುತ್ತದೆ. ಸದನವು ಪ್ರದರ್ಶನ ಕೇಂದ್ರವಲ್ಲ. ಚುನಾವಣೆ ವೇಳೆ ಹಣ, ಹೆಂಡದ ಹೊಳೆ ಹರಿಯದಂತೆ ಮಾಡಬೇಕಾದರೆ, ಬಿಜೆಪಿಯವರು ಪ್ರಧಾನಿಗಳಿಗೆ ಮತ್ತೊಮ್ಮೆ ನೋಟು ಅಮಾನ್ಯೀಕರಣಗೊಳಿಸಲು ಮನವಿ ಮಾಡುವಂತೆ ಸಲಹೆ ನೀಡಿದರು.

Follow Us:
Download App:
  • android
  • ios