ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರು ತಮ್ಮ ಪಕ್ಕದಲ್ಲೇ ಭ್ರಷ್ಟರನ್ನು ಕೂರಿಸಿಕೊಂಡು ಕಾಂಗ್ರೆಸ್ ಪಕ್ಷದ ವಿರುದ್ಧ ಮಾತನಾಡುವ ನೈತಿಕ ಹಕ್ಕಿಲ್ಲ. ಕಳೆದ ನಾಲ್ಕು ವರ್ಷದಲ್ಲಿ ಕಾಂಗ್ರೆಸ್ ಪಕ್ಷ ಭ್ರಷ್ಟಾಚಾರ ಮುಕ್ತ ಹಾಗೂ ಹಗರಣ ಮುಕ್ತ ಆಡಳಿತ ನೀಡಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿರುಗೇಟು ನೀಡಿದರು.

ಬೆಂಗಳೂರು (ಆ.14): ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರು ತಮ್ಮ ಪಕ್ಕದಲ್ಲೇ ಭ್ರಷ್ಟರನ್ನು ಕೂರಿಸಿಕೊಂಡು ಕಾಂಗ್ರೆಸ್ ಪಕ್ಷದ ವಿರುದ್ಧ ಮಾತನಾಡುವ ನೈತಿಕ ಹಕ್ಕಿಲ್ಲ. ಕಳೆದ ನಾಲ್ಕು ವರ್ಷದಲ್ಲಿ ಕಾಂಗ್ರೆಸ್ ಪಕ್ಷ ಭ್ರಷ್ಟಾಚಾರ ಮುಕ್ತ ಹಾಗೂ ಹಗರಣ ಮುಕ್ತ ಆಡಳಿತ ನೀಡಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿರುಗೇಟು ನೀಡಿದರು.

ಭ್ರಷ್ಟ ಕಾಂಗ್ರೆಸ್ ಸರ್ಕಾರ ಕಿತ್ತೊಗೆಯಿರಿ ಎಂಬ ಅಮಿತ್ ಶಾ ಹೇಳಿಕೆಗೆ ಖಾರವಾಗಿ ಪ್ರತಿಕ್ರಿಯಿಸಿದ ಸಿಎಂ ಸಿದ್ದರಾಂಯ್ಯ, ನಮ್ಮ ಪಕ್ಷದಲ್ಲಿ ಜೈಲಿಗೆ ಹೋಗಿ ಬಂದವರು ಯಾರೂ ಇಲ್ಲ. ಭ್ರಷ್ಟರು ಇರುವುದು ಬಿಜೆಪಿಯಲ್ಲಿ ಎಂದು ವಾಗ್ದಾಳಿ ನಡೆಸಿದರು.
ಮನಮೋಹನ್ ಸಿಂಗ್ ಅವರು ರೈತರು ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಮಾಡಿದ್ದ 72 ಸಾವಿರ ಕೋಟಿ ರು. ಹಾಗೂ ವಿ.ಪಿ.ಸಿಂಗ್ ಅವರು 10 ಸಾವಿರ ಕೋಟಿ ರು.ಗಳ ರಾಷ್ಟ್ರೀಕೃತ ಬ್ಯಾಂಕ್‌ಗಳ ಸಾಲ ಮನ್ನಾ ಮಾಡಿದ್ದರು. ನಾವು ರಾಜ್ಯ ಸರ್ಕಾರದಿಂದ ಸಹಕಾರ ಸಂಘಗಳ ಮೂಲಕ ಕೊಟ್ಟಿದ್ದ ರೈತರ ಸಾಲವನ್ನು ಮನ್ನಾ ಮಾಡಿದ್ದೇವೆ. ಹೀಗಾಗಿ ಅಮಿತ್ ಶಾ ರಾಜ್ಯ ಸರ್ಕಾರದ ವಿರುದ್ಧ ಮಾತನಾಡುವುದನ್ನು ನಿಲ್ಲಿಸಲಿ. ಒಂದು ವೇಳೆ ಕೇಂದ್ರ ಸರ್ಕಾರ ರೈತರ ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿನ ಸಾಲವನ್ನು ಮನ್ನಾ ಮಾಡದಿದ್ದರೆ ರೈತ ವಿರೋಧಿ ಎಂಬುದು ಸಾಬೀತಾಗುತ್ತದೆ ಎಂದು ಟೀಕಿಸಿದರು.
ಆದಿ ಚುಂಚನಗಿರಿ ಮಠಕ್ಕೆ ಭೇಟಿ ನೀಡಿದ ವೇಳೆ ಸ್ವಾಮೀಜಿ ಎದುರು ಅಮಿತ್ ಶಾ ಕುಳಿತುಕೊಂಡ ಭಂಗಿ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಸಿಎಂ ಸಿದ್ದರಾಮಯ್ಯ, ಮಠಾಧೀಶರ ಬಗೆಗೆ ನಮಗೊಂದು ಗೌರವ ಇದೆ. ಆದಿ ಚುಂಚನಗಿರಿ ಮಠಕ್ಕೆ ಹೋದ ಮೇಲೆ ಹೇಗೆ ನಡೆದುಕೊಳ್ಳಬೇಕು ಎಂಬುದು ಅಮಿತ್ ಶಾ ಅವರಿಗೆ ಬಿಟ್ಟದ್ದು. ಆ ಬಗ್ಗೆ ನಾನೇನೂ ಹೇಳುವುದಿಲ್ಲ ಎಂದು ಹೇಳಿದರು.