ನವದೆಹಲಿ (ಅ. 30): ಅಯೋಧ್ಯೆ ವಿವಾದದ ಪ್ರಕರಣ ಜನವರಿಗೆ ಮುಂದೂಡಿಕೆ ಆಗುತ್ತಿದ್ದಂತೆ ಬಿಜೆಪಿ ವಲಯದಲ್ಲಿ ನಿರಾಸೆ, ಸಂಘ ಪರಿವಾರದಲ್ಲಿ ಆಕ್ರೋಶ ಮತ್ತು ವಿಪಕ್ಷಗಳಲ್ಲಿ ಸಮಾಧಾನದ ನಿಟ್ಟುಸಿರು ಮೂಡಿದೆ.

2019 ರಲ್ಲಿ ಮಾಯಾವತಿ ಮತ್ತು ಸಮಾಜವಾದಿಗಳ ಮಹಾಗಠ ಬಂಧನ್‌ಗೆ ಪರ‌್ಯಯವಾಗಿ, ರಾಮ ಮಂದಿರದ ವಿಷಯ ಪ್ರಸ್ತಾಪಿಸಿ ಹೆಚ್ಚು ಲಾಭ ಗಿಟ್ಟಿಸಿಕೊಳ್ಳಬಹುದು ಎಂದು ಕೊಂಡಿದ್ದ ಬಿಜೆಪಿಗೆ ವಿಚಾರಣೆ ಮುಂದೂಡಿಕೆ ದೊಡ್ಡ ತಲೆ ನೋವು. ಮುಖ್ಯವಾಗಿ ಉತ್ತರ ಭಾರತದಲ್ಲಿ ಬಿಜೆಪಿ ವೋಟ್‌ಬ್ಯಾಂಕ್ ಇರುವ ಬ್ರಾಹ್ಮಣ, ಬನಿಯಾ, ಠಾಕೂರ್‌ಗಳಲ್ಲಿ ಎಸ್ ಸಿ/ಎಸ್‌ಟಿ ಕಾನೂನಿನ ಕಾರಣದಿಂದ ಅಸಮಾಧಾನವಿದೆ.

ಈಗ ಮಂದಿರದ ವಿಷಯದಲ್ಲೂ ಸುಗ್ರೀವಾಜ್ಞೆ ತನ್ನಿ ಎಂಬ ಕೂಗು ಎದ್ದರೆ, ಬಿಜೆಪಿಗೆ ಲಾಭಕ್ಕಿಂತ ನಷ್ಟವೇ ಹೆಚ್ಚು. ಸಂಘ ಪರಿವಾರದ ಮಾತು ಕೇಳಿ, ಪ್ರಕರಣ ಸುಪ್ರೀಂಕೋರ್ಟ್ ನಲ್ಲಿರುವಾಗ ಸುಗ್ರೀವಾಜ್ಞೆಯ ಸಾಹಸಕ್ಕೆ ಇಳಿದರೆ ನ್ಯಾಯಾಂಗ ಅದನ್ನು ರದ್ದುಗೊಳಿಸುವ ಆತಂಕ ಒಂದೆಡೆಯಾದರೆ, ಎಸ್‌ಸಿ/ಎಸ್‌ಟಿ ವಿಷಯದಲ್ಲಿ ಸುಗ್ರೀವಾಜ್ಞೆ ತರುತ್ತೀರಿ, ಇದರಲ್ಲಿ ಏಕೆ ಮೀನ ಮೇಷ ಎಂದು ಕೇಳುವ ತಮ್ಮದ ಮತದಾರರು ಇನ್ನೊಂದು ಕಡೆ. ರಾಮ ಮಂದಿರದ ವಿಷಯ ಒಂದೇ ದಿನದಲ್ಲಿ ಬಿಜೆಪಿಗೆ ಬಿಸಿ ತುಪ್ಪದಂತೆ ಕಾಣುತ್ತಿದೆ.

2014 ರಲ್ಲಿ ಬಿಜೆಪಿ ಬಿಹಾರ, ಯುಪಿ, ಹರಿಯಾಣ, ಮಧ್ಯಪ್ರದೇಶ, ರಾಜಸ್ಥಾನ, ಗುಜರಾತ್, ಮಹಾರಾಷ್ಟ್ರ, ಛತ್ತೀಸ್‌ಗಡ ಮತ್ತು ಜಾರ್ಖಂಡ್‌ಗಳಿಂದಲೇ 216 ಸಂಸದರನ್ನು ಗೆಲ್ಲಿಸಿಕೊಂಡಿತ್ತು. ಆದರೆ ಈಗ ಎಲ್ಲ ರಾಜ್ಯಗಳಲ್ಲಿ
ಬಿಜೆಪಿಯದ್ದೇ ಸರ್ಕಾರಗಳ ವಿರೋಧಿ ಅಲೆ ಕೂಡ ಇರುವಾಗ, ಬಿಜೆಪಿ ಗೆ ರಾಮ ಮಂದಿರದಂಥ ಒಂದು ವಿಷಯ ಸಹಜವಾಗಿ ಬೇಕಿತ್ತು.

ಕಪಿಲ್ ಸಿಬಾಲ್ ಖುಷಿ

ಸುಪ್ರೀಂನಲ್ಲಿ ರಾಮ ಮಂದಿರ ವಿಷಯ ಜನವರಿಗೆ ಮುಂದೆ ಹೋಗುತ್ತಿದ್ದಂತೇ ಸುಪ್ರೀಂಕೋರ್ಟ್ ವಕೀಲ ಕಪಿಲ್ ಸಿಬಾಲ್ ಯುದ್ಧ ಗೆದ್ದಷ್ಟು ಖುಷಿಯಲ್ಲಿದ್ದರು. ವಿಚಾರಣೆ ನಡೆಯುತ್ತಿದ್ದಾಗ ಬೇರೆ ಕೋರ್ಟ್ ನಲ್ಲಿದ್ದ ಕಪಿಲ್ ಸಿಬಾಲ್, ಜಸ್ಟಿಸ್ ರಂಜನ್ ಗೊಗೋಯ್, ‘ನಮಗೆ ಬೇರೆ ಪ್ರಾತಿನಿಧ್ಯಗಳಿವೆ. ಶೀಘ್ರ ವಿಚಾರಣೆ ಸಾಧ್ಯವಿಲ್ಲ’ ಎಂದು ಹೇಳುತ್ತಿದ್ದಂತೇ, ಜೋರಾಗಿ ಕೈ ಮೇಲೆ ತೋರಿಸುತ್ತಾ ಕೋರ್ಟ್ ಹಾಲ್ ನಂ.1 ಎದುರು ಬಂದು ತಮ್ಮ ಹಿಂಬಾಲಕ ವಕೀಲರ ಜೊತೆ ಅಲ್ಲೇ ಸಂಭ್ರಮಿಸಿದರು. 

-ಪ್ರಶಾಂತ್ ನಾತು, ಸುವರ್ಣ ನ್ಯೂಸ್ ದೆಹಲಿ ಪ್ರತಿನಿಧಿ 

ರಾಜಕಾರಣದ ಸುದ್ದಿಗಾಗಿ ಇಂಡಿಯಾ ಗೇಟ್  ಕ್ಲಿಕ್ ಮಾಡಿ