ಮಹದಾಯಿ ನದಿ ನೀರಿನ ಹಂಚಿಕೆ ವಿವಾದ ಇತ್ಯರ್ಥಕ್ಕೆ ಗೋವಾ ಸರ್ಕಾರ ಮನವೊಲಿಸುವ ಜವಾಬ್ದಾರಿಯನ್ನು ರಾಜ್ಯ ಬಿಜೆಪಿ ವಹಿಸಿಕೊಂಡಿದೆ. ಆಗಸ್ಟ್ 28 ರಂದು ಗೋವಾದಲ್ಲಿ ನಡೆಯುವ ಎರಡು ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆ ಬಳಿಕ ಬಿಜೆಪಿ ಮುಖಂಡರ ನಿಯೋಗ ತೆರಳಿ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ಅವರನ್ನು ಭೇಟಿ ಮಾಡಲಿದೆ. ಆ ಬಳಿಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅನೌಪಚಾರಿಕವಾಗಿ ಗೋವಾ ಕಾಂಗ್ರೆಸ್ ಮುಖಂಡರ ಜತೆ ಚರ್ಚಿಸಲಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಸರ್ವಪಕ್ಷಗಳ ಮುಖಂಡರ ಸಭೆಯಲ್ಲಿ ಇದೇ ಮೊದಲ ಬಾರಿಗೆ ಇಂತಹದ್ದೊಂದು ನಿರ್ಧಾರಕ್ಕೆ ಬರಲಾಗಿದೆ.
ಬೆಂಗಳೂರು (ಆ.14): ಮಹದಾಯಿ ನದಿ ನೀರಿನ ಹಂಚಿಕೆ ವಿವಾದ ಇತ್ಯರ್ಥಕ್ಕೆ ಗೋವಾ ಸರ್ಕಾರ ಮನವೊಲಿಸುವ ಜವಾಬ್ದಾರಿಯನ್ನು ರಾಜ್ಯ ಬಿಜೆಪಿ ವಹಿಸಿಕೊಂಡಿದೆ. ಆಗಸ್ಟ್ 28 ರಂದು ಗೋವಾದಲ್ಲಿ ನಡೆಯುವ ಎರಡು ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆ ಬಳಿಕ ಬಿಜೆಪಿ ಮುಖಂಡರ ನಿಯೋಗ ತೆರಳಿ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ಅವರನ್ನು ಭೇಟಿ ಮಾಡಲಿದೆ. ಆ ಬಳಿಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅನೌಪಚಾರಿಕವಾಗಿ ಗೋವಾ ಕಾಂಗ್ರೆಸ್ ಮುಖಂಡರ ಜತೆ ಚರ್ಚಿಸಲಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಸರ್ವಪಕ್ಷಗಳ ಮುಖಂಡರ ಸಭೆಯಲ್ಲಿ ಇದೇ ಮೊದಲ ಬಾರಿಗೆ ಇಂತಹದ್ದೊಂದು ನಿರ್ಧಾರಕ್ಕೆ ಬರಲಾಗಿದೆ.
ಗೋವಾ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ಜತೆ ಮಾತುಕತೆ ನಡೆಸಿ ಮಹದಾಯಿ ವಿವಾದ ಇತ್ಯರ್ಥಪಡಿಸಲು ತಾವು ಉತ್ಸುಕರಾಗಿದ್ದರೂ, ಗೋವಾ ಸರ್ಕಾರದಿಂದ ಸೂಕ್ತ ಪ್ರತಿಕ್ರಿಯೆ ಬಂದಿಲ್ಲ. ಹೀಗಾಗಿ ರಾಜ್ಯದ ಬಿಜೆಪಿ ಜನಪ್ರತಿನಿಧಿಗಳ ನಿಯೋಗ ಗೋವಾ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ಅವರನ್ನು ಮಾತುಕತೆಗೆ ಒಪ್ಪಿಸುವ ಸಂಬಂಧ ಆ.28 ರ ಬಳಿಕ ಭೇಟಿ ಮಾಡಿ ಚರ್ಚಿಸುವುದಾಗಿ ತಿಳಿಸಿದ್ದಾರೆ. ಗೋವಾ ಸಿಎಂ ಜತೆ ಬಿಜೆಪಿ ನಿಯೋಗ ಚರ್ಚಿಸಿದ ಬಳಿಕ ಮತ್ತೊಂದು ಸುತ್ತಿನ ಸರ್ವಪಕ್ಷಗಳ ಸಭೆ ಕರೆಯಲಾಗುವುದು ಎಂದು ಹೇಳಿದರು. ನ್ಯಾಯಾಧಿಕರಣದ ಸಲಹೆಯಂತೆ ಪರಸ್ಪರ ಮಾತುಕತೆ ಮೂಲಕವೇ ವಿವಾದ ಇತ್ಯರ್ಥಕ್ಕೆ ಕರ್ನಾಟಕ, ಗೋವಾ ಮತ್ತು ಮಹಾರಾಷ್ಟ್ರ ರಾಜ್ಯಗಳ ನ್ಯಾಯವಾದಿಗಳು ಒಪ್ಪಿಗೆ ನೀಡಿದ್ದರು. ಆ ಬಳಿಕ ಮಾತುಕತೆಗೆ ಹಲವಾರು ಬಾರಿ ತಾವು ಪತ್ರ ಬರೆದರೂ ಗೋವಾ ಸ್ಪಂದಿಸಿರಲಿಲ್ಲ. ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವೀಸ್ ಕೂಡ ಮಾತುಕತೆಗೆ ಒಪ್ಪಿದ್ದರು. ಈ ಮಧ್ಯೆ ಗೋವಾ ಮುಖ್ಯ ಕಾರ್ಯದರ್ಶಿಗಳು ಆ.೩ರಂದು ಕರ್ನಾಟಕದ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದು, ಆ.೨೮ರಂದು ಗೋವಾದಲ್ಲಿ ನಡೆಯುವ ಉಪ ಚುನಾವಣೆ ಹಿನ್ನೆಲೆ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಅಲ್ಲಿಯವರೆಗೆ ಮಾತುಕತೆ ನಡೆಸಲು ಆಗುವುದಿಲ್ಲ ಎಂದಿದ್ದರು. ಹೀಗಾಗಿ ಉಪ ಚುನಾವಣೆ ಬಳಿಕ ರಾಜ್ಯದ ಬಿಜೆಪಿ ಮುಖಂಡರು ಗೋವಾಕ್ಕೆ ತೆರಳಿ ಮಾತುಕತೆ ನಡೆಸುವುದಾಗಿ ಹೇಳಿದ್ದಾರೆ ಎಂದು ತಿಳಿಸಿದರು.
ಸಭೆಯಲ್ಲಿ ವಾಗ್ವಾದ
ಇದಕ್ಕೂ ಮೊದಲು ನಡೆದ ಸಭೆಯಲ್ಲಿ ಸಿಎಂ ಸಿದ್ದರಾಮಯ್ಯ ಹಾಗೂ ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಕೆ.ಎಸ್.ಈಶ್ವರಪ್ಪ ನಡುವೆ ವಾಗ್ದಾದ ನಡೆಯಿತು. ಪರಿಷತ್ ಸದಸ್ಯ ಎಸ್.ಆರ್.ಪಾಟೀಲ್ ಅವರು ಒಕ್ಕೂಟ ವ್ಯವಸ್ಥೆಯ ದೇಶದಲ್ಲಿ ಕೇಂದ್ರ ಸರ್ಕಾರ ಎಲ್ಲ ರಾಜ್ಯಗಳ ನಡುವೆ ಸಮನ್ವಯ ಸಾಧಿಸಬೇಕೆಂದು ಸಲಹೆ ಮಾಡಿದಾಗ, ಈಶ್ವರಪ್ಪ ಅವರು ಆಕ್ಷೇಪ ವ್ಯಕ್ತಪಡಿಸಿ, ಹಿಂದಿನ ಕೇಂದ್ರ ಸರ್ಕಾರಗಳು ಆ ಕೆಲಸ ಮಾಡದ ಕಾರಣ ಇವತ್ತಿನ ಪರಿಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ ರಾಜಕಾರಣದ ಮಾತು ಬೇಡ. ಸಮಸ್ಯೆ ಇತ್ಯರ್ಥಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡೋಣ ಎಂದಾಗ ಸಂಸದರಾದ ಪ್ರಹ್ಲಾದ್ ಜೋಶಿ ಹಾಗೂ ಪಿ.ಸಿ.ಗದ್ದಿಗೌಡರ್ ಇದಕ್ಕೆ ದನಿಗೂಡಿಸಿದರು. ಜೆಡಿಎಸ್ ಮುಖಂಡ ಎಚ್.ಡಿ.ರೇವಣ್ಣ ಮಾತನಾಡಿ, ರಾಜ್ಯದ ಹಿತಕ್ಕೆ ಧಕ್ಕೆ ಆಗದ ಹಾಗೆ ಮೂರು ರಾಜ್ಯಗಳ ಮುಖ್ಯಮಂತ್ರಿಗಳು ಚರ್ಚಿಸಿ ಮಹದಾಯಿ ಸಮಸ್ಯೆಯನ್ನು ಬಗೆಹರಿಸಬೇಕು ಎಂದು ಹೇಳಿದರು.
(ಸಾಂದರ್ಭಿಕ ಚಿತ್ರ)
