ನವದೆಹಲಿ[ಡಿ.19]: ಬಿಜೆಪಿ 2017-18ನೇ ಸಾಲಿನಲ್ಲಿ 1,027 ಕೋಟಿ ರುಪಾಯಿ ಆದಾಯ ಘೋಷಿಸಿದೆ. ಇದೇ ವೇಳೆ ಪಕ್ಷವು ಈ ನಿಧಿಯ 74 ಪ್ರತಿಶದತಷ್ಟು, ಅಂದರೆ 758.47 ಕೋಟಿ ರು. ಖರ್ಚು ಮಾಡಿದೆ.

ಭಾರತೀಯ ಚುನಾವಣಾ ವ್ಯವಸ್ಥೆ ಹಾಗೂ ರಾಜಕೀಯ ಪಕ್ಷಗಳ ಕಾರ್ಯಚಟುವಟಿಕೆ ಮೇಲೆ ಮೇಲೆ ಕಣ್ಣಿಡುವ ಸಂಸ್ಥೆಯಾದ ‘ಅಸೋಸಿಯೇಶನ್‌ ಫಾರ್‌ ಡೆಮಾಕ್ರೆಟಿಕ್‌ ರೀಸಚ್‌ರ್‍’ (ಎಡಿಆರ್‌) ಈ ಅಂಕಿ ಅಂಶಗಳನ್ನು ಬಿಡುಗಡೆ ಮಾಡಿದೆ. ಆದರೆ ಕಾಂಗ್ರೆಸ್‌ ಪಕ್ಷ ಇನ್ನೂ ತನ್ನ ಲೆಕ್ಕ ಪರಿಶೋಧನಾ ವರದಿಯನ್ನು ಸಲ್ಲಿಸಿಲ್ಲ ಎಂದು ಎಡಿಆರ್‌ ಹೇಳಿದೆ.

ಇದೇ ವೇಳೆ, ಬಿಎಸ್‌ಪಿ 2017-18ರಲ್ಲಿ 51.7 ಕೋಟಿ ರು. ಆದಾಯ ಸಂಪಾದಿಸಿದೆ. 14.78 ಕೋಟಿ ರು. ಖರ್ಚು ಮಾಡಿದೆ. ಎನ್‌ಸಿಪಿ ಆದಾಯ 8.15 ಕೋಟಿ ರು. ಇದ್ದರೆ ಅದಕ್ಕಿಂತ ಹೆಚ್ಚು ಅಂದರೆ 8.84 ಕೋಟಿ ರು. ಖರ್ಚು ಮಾಡಿದೆ ಎಂಬ ಕುತೂಹಲಕರ ಮಾಹಿತಿಯೂ ಇದರಲ್ಲಿದೆ.

2016-17ನೇ ಸಾಲಿನಲ್ಲಿ ಬಿಜೆಪಿಗೆ 1034 ಕೋಟಿ ರು. ಆದಾಯ ಹರಿದುಬಂದಿತ್ತು. ಆದರೆ ಇದು 17-18ನೇ ಸಾಲಿನಲ್ಲಿ 7 ಕೋಟಿ ರು.ನಷ್ಟುಇಳಿಕೆ ಕಂಡಿದೆ ಎಂಬುದು ಇಲ್ಲಿ ಗಮನಾರ್ಹ. ಚುನಾವಣಾ ಬಾಂಡ್‌ ಮೂಲಕ ಬಿಜೆಪಿಗೆ ಬಂದಿರುವ ಆದಾಯ 210 ಕೋಟಿ ರುಪಾಯಿ.