ಕಳೆದ ಮೂರು ದಶಕಗಳಲ್ಲಿ ಇದೇ ಮೊದಲಿಗೆ ಮುಖ್ಯಮಂತ್ರಿ ಅಭ್ಯರ್ಥಿಯ ಹೆಸರು ಘೋಷಿಸದೆಯೇ ಹಿಮಾಚಲ ಪ್ರದೇಶದಲ್ಲಿ ಬಿಜೆಪಿ ಚುನಾವಣೆ ಎದುರಿಸುತ್ತಿದೆ. ಪಕ್ಷದ ಈ ನಿರ್ಧಾರ ಅಲ್ಲಿನ ಮಾಜಿ ಮುಖ್ಯಮಂತ್ರಿ ಪ್ರೇಮ ಕುಮಾರ್‌ ಧುಮಾಲ್‌ ಅವರಿಗೆ ಪಥ್ಯವಾಗಿಲ್ಲ. 73 ವರ್ಷ ವಯಸ್ಸಿನ ಹಿರಿಯ ನಾಯಕ ಧುಮಾಲ್‌ ಅವರು ಬಹಳ ಕಾಲದಿಂದ ಹಿಮಾಚಲ ಪ್ರದೇಶದಲ್ಲಿ ಬಿಜೆಪಿಯ ಮುಖವಾಗಿ ಇದ್ದವರು. ಹಿಂದಿನ ಕೆಲವು ಚುನಾವಣೆಗಳ ಸಂದರ್ಭದಲ್ಲಿ ಧುಮಾಲ್‌ ಅವರ ಹೆಸರನ್ನು ಭಾರಿ ಸಂಭ್ರಮದಿಂದಲೇ ಘೋಷಿಸಲಾಗಿತ್ತು. ಈ ಬಾರಿ, ಕನಿಷ್ಠ ಪಕ್ಷ ಈವರೆಗೆ ಯಾರ ಹೆಸರನ್ನೂ ಬಿಜೆಪಿ ಪ್ರಕಟಿಸಿಲ್ಲ.

ಹಿಮಾಚಲ ಪ್ರದೇಶ (ಅ.29): ಕಳೆದ ಮೂರು ದಶಕಗಳಲ್ಲಿ ಇದೇ ಮೊದಲಿಗೆ ಮುಖ್ಯಮಂತ್ರಿ ಅಭ್ಯರ್ಥಿಯ ಹೆಸರು ಘೋಷಿಸದೆಯೇ ಹಿಮಾಚಲ ಪ್ರದೇಶದಲ್ಲಿ ಬಿಜೆಪಿ ಚುನಾವಣೆ ಎದುರಿಸುತ್ತಿದೆ. ಪಕ್ಷದ ಈ ನಿರ್ಧಾರ ಅಲ್ಲಿನ ಮಾಜಿ ಮುಖ್ಯಮಂತ್ರಿ ಪ್ರೇಮ ಕುಮಾರ್‌ ಧುಮಾಲ್‌ ಅವರಿಗೆ ಪಥ್ಯವಾಗಿಲ್ಲ. 73 ವರ್ಷ ವಯಸ್ಸಿನ ಹಿರಿಯ ನಾಯಕ ಧುಮಾಲ್‌ ಅವರು ಬಹಳ ಕಾಲದಿಂದ ಹಿಮಾಚಲ ಪ್ರದೇಶದಲ್ಲಿ ಬಿಜೆಪಿಯ ಮುಖವಾಗಿ ಇದ್ದವರು. ಹಿಂದಿನ ಕೆಲವು ಚುನಾವಣೆಗಳ ಸಂದರ್ಭದಲ್ಲಿ ಧುಮಾಲ್‌ ಅವರ ಹೆಸರನ್ನು ಭಾರಿ ಸಂಭ್ರಮದಿಂದಲೇ ಘೋಷಿಸಲಾಗಿತ್ತು. ಈ ಬಾರಿ, ಕನಿಷ್ಠ ಪಕ್ಷ ಈವರೆಗೆ ಯಾರ ಹೆಸರನ್ನೂ ಬಿಜೆಪಿ ಪ್ರಕಟಿಸಿಲ್ಲ.

ಚುನಾವಣೆಯ ಬಳಿಕ ನಾಯಕತ್ವವನ್ನು ಯಾರಿಗೆ ಕೊಡಬೇಕು ಎಂಬ ಆಯ್ಕೆ ಮುಕ್ತವಾಗಿರಲಿ ಎಂಬ ಕಾರಣಕ್ಕೆ ಪಕ್ಷದ ಹೈಕಮಾಂಡ್‌ ಈ ನಿರ್ಧಾರಕ್ಕೆ ಬಂದಿದೆ ಎಂದು ಬಿಜೆಪಿ ಮೂಲಗಳು ಹೇಳುತ್ತಿವೆ. ಪಕ್ಷ ಗೆದ್ದರೆ ಕೇಂದ್ರ ಆರೋಗ್ಯ ಸಚಿವ ಜೆ.ಪಿ. ನಡ್ಡಾ ಅವರನ್ನು ಮುಖ್ಯಮಂತ್ರಿ ಮಾಡುವುದಕ್ಕಾಗಿ ಈ ಕಾರ್ಯತಂತ್ರ ಅನುಸರಿಸಲಾಗಿದೆ ಎಂದೂ ಕೆಲವು ಮೂಲಗಳು ಹೇಳಿವೆ. ನಡ್ಡಾ ಅವರು ಇದನ್ನು ಅಲ್ಲಗಳೆದಿದ್ದಾರೆ. ಮುಖ್ಯಮಂತ್ರಿ ಅಭ್ಯರ್ಥಿ ಘೋಷಣೆ ಮಾಡದೇ ಇರುವುದು ಮತ್ತು ಅದರ ಹಿಂದೆ ಧುಮಾಲ್‌ ಅವರನ್ನು ರಾಜಕೀಯವಾಗಿ ಮೂಲೆಗೆ ತಳ್ಳುವ ಕಾರ್ಯತಂತ್ರ ಇದೆ ಎಂಬ ವದಂತಿ ಪಕ್ಷದ ಕಾರ್ಯಕರ್ತರಲ್ಲಿ ಅತೃಪ್ತಿ ಮೂಡಿಸಿದೆ. ಮುಖ್ಯಮಂತ್ರಿಯನ್ನು ಘೋಷಿಸದಿರುವ ನಿರ್ಧಾರವನ್ನು ಪಕ್ಷವು ಮರುಪರಿಶೀಲಿಸಬೇಕು ಎಂಬುದು ಕಾರ್ಯಕರ್ತರ ಬೇಡಿಕೆ. ನವೆಂಬರ್‌ ಮೊದಲ ವಾರದಲ್ಲಿ ಹಿಮಾಚಲ ಪ್ರದೇಶಕ್ಕೆ ಪ್ರಧಾನಿ ನರೇಂದ್ರ ಮೋದಿ ಭೇಟಿ ನೀಡಲಿದ್ದಾರೆ. ಆ ಸಂದರ್ಭದಲ್ಲಿ ನಾಯಕ ಯಾರು ಎಂಬುದನ್ನು ಘೋಷಿಸಬೇಕು ಎಂದು ಅವರು ಆಗ್ರಹಿಸುತ್ತಿದ್ದಾರೆ.

ಧುಮಾಲ್‌ ಅವರಿಗೆ ಅಸಮಾಧಾನ ಇದ್ದರೂ ಅದನ್ನು ಅವರು ಬಹಿರಂಗವಾಗಿ ತೋರಿಸುತ್ತಿಲ್ಲ. ಆದರೆ ಅವರ ಮಾತುಗಳಲ್ಲಿ ಅದು ಸೂಚ್ಯವಾಗಿ ಕಾಣಿಸುತ್ತದೆ. ಮುಖ್ಯಮಂತ್ರಿ ಅಭ್ಯರ್ಥಿ ಘೋಷಿಸುವಾಗ ರಾಜ್ಯದ ಜನರ ಮನಸಿನಲ್ಲಿ ವ್ಯಾಪಕವಾಗಿರುವ ಭಾವನೆಗಳನ್ನು ಗಣನೆಗೆ ತೆಗೆದುಕೊಳ್ಳಲೇಬೇಕು ಎಂದು ಅವರು ಹೇಳಿದ್ದಾರೆ. ನಡ್ಡಾ ಅವರು ರಾಜ್ಯ ರಾಜಕಾರಣ ಪ್ರವೇಶಿಸಿದರೆ ಇಲ್ಲಿನ ಸಮೀಕರಣಗಳೆಲ್ಲವೂ ಬದಲಾಗುತ್ತವೆ. ನಡ್ಡಾ ಅವರ ರಾಜ್ಯ ರಾಜಕಾರಣ ಪ್ರವೇಶದ ಬಗ್ಗೆ ಬಿಜೆಪಿಯ ಕೇಂದ್ರ ನಾಯಕತ್ವ ಏನನ್ನೂ ಹೇಳಿಲ್ಲ. ಹಾಗಿದ್ದರೂ ಧುಮಾಲ್‌ ಅವರ ಬೆಂಬಲಿಗರಲ್ಲಿ ಅತೃಪ್ತಿಯ ಅಲೆಗಳು ಮೂಡುತ್ತಿವೆ. ಧುಮಾಲ್‌ ಅವರಿಗೆ ಜನನಾಯಕ ಎಂಬ ವರ್ಚಸ್ಸು ಇದೆ. ಆದರೆ ತಳಮಟ್ಟದ ಜನರೊಂದಿಗೆ ನಡ್ಡಾ ಅಂತಹ ಸಂಪರ್ಕ ಇರಿಸಿಕೊಂಡವರಲ್ಲ. ಗುಡ್ಡಗಾಡು ರಾಜ್ಯ ಹಿಮಾಚಲ ಪ್ರದೇಶ ಧುಮಾಲ್‌ಗೆ ತಮ್ಮ ಅಂಗೈಯಂತೆ ಪರಿಚಿತ ಎಂದು ಅವರನ್ನು ಹತ್ತಿರದಿಂದ ಬಲ್ಲವರು ಹೇಳುತ್ತಾರೆ.