ಬೆಳಗಾವಿಯಲ್ಲಿ ಬಿಜೆಪಿ-ಕಾಂಗ್ರೆಸ್ ನಡುವೆ ನೇರ ಹಣಾಹಣಿ; ಜೆಡಿಎಸ್ ಆಟಕ್ಕುಂಟು ಲೆಕ್ಕಕ್ಕಿಲ್ಲ

BJP Congress Neck to Neck Fight in Belagavi
Highlights

ಒಂದೆಡೆ ಮಲೆನಾಡು, ಇನ್ನೊಂದೆಡೆ ಬಯಲುಸೀಮೆ ಇರುವ ಗಡಿ ಜಿಲ್ಲೆ  ಬೆಳಗಾವಿ ಮೂರು ಲೋಕಸಭಾ ಕ್ಷೇತ್ರಗಳ ವ್ಯಾಪ್ತಿ ಹೊಂದಿದೆ. ಬೆಂಗಳೂರು ನಗರ (ಒಟ್ಟು 28 ಕ್ಷೇತ್ರ) ಹೊರತುಪಡಿಸಿ ರಾಜ್ಯದಲ್ಲೇ ಅತೀ ಹೆಚ್ಚು ಅಂದರೆ, 18  ಕ್ಷೇತ್ರಗಳು ಈ ಜಿಲ್ಲೆಯಲ್ಲಿವೆ.

ಬೆಂಗಳೂರು (ಫೆ.15): ಒಂದೆಡೆ ಮಲೆನಾಡು, ಇನ್ನೊಂದೆಡೆ ಬಯಲುಸೀಮೆ ಇರುವ ಗಡಿ ಜಿಲ್ಲೆ  ಬೆಳಗಾವಿ ಮೂರು ಲೋಕಸಭಾ ಕ್ಷೇತ್ರಗಳ ವ್ಯಾಪ್ತಿ ಹೊಂದಿದೆ. ಬೆಂಗಳೂರು ನಗರ (ಒಟ್ಟು 28 ಕ್ಷೇತ್ರ) ಹೊರತುಪಡಿಸಿ ರಾಜ್ಯದಲ್ಲೇ ಅತೀ ಹೆಚ್ಚು ಅಂದರೆ, 18  ಕ್ಷೇತ್ರಗಳು ಈ ಜಿಲ್ಲೆಯಲ್ಲಿವೆ.

ಬಹುತೇಕ ಕಡೆ ಕಾಂಗ್ರೆಸ್- ಬಿಜೆಪಿ ನಡುವೆಯೇ ನೇರ ಹಣಾಹಣಿ. ಜೆಡಿಎಸ್ ಆಟಕ್ಕುಂಟು ಲೆಕ್ಕಕ್ಕಿಲ್ಲ. ಗಡಿ ಭಾಗದಲ್ಲಿ  ಮಹಾರಾಷ್ಟ್ರ ಏಕೀಕರಣ ಸಮಿತಿ ಪ್ರಬಲ ಪೈಪೋಟಿ ನೀಡುತ್ತಿದೆ.  ಕಾಂಗ್ರೆಸ್ ಹೈಕಮಾಂಡ್ ಜೊತೆಗೆ ಗುರುತಿಸಿಕೊಂಡಿದ್ದ ಕೇಂದ್ರದ  ಮಾಜಿ ಸಚಿವ ಬಿ.ಶಂಕರಾನಂದ ಜಿಲ್ಲೆಯ ರಾಜಕೀಯದ ಮೇಲೆ ಹಿಡಿತ ಹೊಂದಿದ್ದರು. ಸದ್ಯ ಜಿಲ್ಲೆಯಲ್ಲಿ ಕತ್ತಿ ಹಾಗೂ ಜಾರಕಿಹೊಳಿ ಸಹೋದರರು  ಪ್ರಭಾವಿಗಳಾಗಿದ್ದಾರೆ. ಜಿಲ್ಲೆಯ ಬಹುತೇಕ ರಾಜಕಾರಣಿಗಳು ಸಕ್ಕರೆ ಕಾರ್ಖಾನೆಗಳನ್ನು ಹೊಂದಿದ್ದು, ಚುನಾವಣೆಯಲ್ಲಿ ಸಕ್ಕರೆ ಲಾಬಿ ಕೂಡ ಪರಿಣಾಮ ಬೀರುತ್ತದೆ.

‘ಫೈರ್ ಬ್ರ್ಯಾಂಡ್’ ಖ್ಯಾತಿಯ ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಅವರಿಗೆ ಬೆಳಗಾವಿ ಲೋಕಸಭಾ ಕ್ಷೇತ್ರದ  ಉಸ್ತುವಾರಿ ವಹಿಸಲಾಗಿದೆ. ಬಿಜೆಪಿ ಗೆಲುವಿಗೆ ಅವರನ್ನೇ ಅಸ್ತ್ರವನ್ನಾಗಿ ಬಳಸಲಾಗುತ್ತಿದೆ. 18 ವಿಧಾನಸಭೆ ಕ್ಷೇತ್ರಗಳ ಪೈಕಿ ಕಳೆದ ಬಾರಿ ಕಾಂಗ್ರೆಸ್ 6, ಬಿಜೆಪಿ 9 ಕ್ಷೇತ್ರಗಳಲ್ಲಿ ಪ್ರಾಬಲ್ಯ ಸಾಧಿಸಿದ್ದರೆ, ಎರಡು ಕ್ಷೇತ್ರಗಳಲ್ಲಿ ಮಹಾರಾಷ್ಟ್ರ  ಏಕೀಕರಣ ಸಮಿತಿ ಮತ್ತು ಒಂದು ಕ್ಷೇತ್ರದಲ್ಲಿ ಬಿಎಸ್‌ಆರ್ ಕಾಂಗ್ರೆಸ್ ಹಿಡಿತ ಸಾಧಿಸಿತ್ತು. ಮುಂಬರುವ ವಿಧಾನಸಭೆ ಚುನಾವಣೆ ಯನ್ನು ಆಡಳಿತಾರೂಢ ಕಾಂಗ್ರೆಸ್ ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದು, ಹೇಗಾದರೂ ಮಾಡಿ ಕನಿಷ್ಠ 12 ಕ್ಷೇತ್ರಗಳಲ್ಲಿ ಗೆಲವು ಸಾಧಿಸಬೇಕೆನ್ನುವ ಪಣತೊಟ್ಟಿದೆ. ಸ್ವತಃ ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಚುನಾವಣೆ ಹೊಣೆ ಹೊತ್ತುಕೊಂಡು ರಾಜಕೀಯ ತಂತ್ರ, ಪ್ರತಿತಂತ್ರವನ್ನು ರೂಪಿಸುತ್ತಿದ್ದಾರೆ. ಬಿಜೆಪಿ ಕೂಡ ತನ್ನ ಸ್ಥಾನಗಳನ್ನು ಭದ್ರಪಡಿಸಿಕೊಳ್ಳುವ ಮೂಲಕ ಬೇರೆ ಕ್ಷೇತ್ರಗಳ ಮೇಲೆ ಹಿಡಿತ ಸಾಧಿಸಲು ಮೋದಿ ಮಂತ್ರ ಜಪಿಸುತ್ತಿದೆ. ಇನ್ನೊಂದೆಡೆ ಹೊಂದಾಣಿಕೆ ರಾಜಕೀಯದಿಂದ ಅವಕಾಶ ಗಿಟ್ಟಿಸಿಕೊಳ್ಳುತ್ತಿದ್ದ ಎಂಇಎಸ್ ಒಡೆದ ಮನೆಯಾಗಿದೆ.

loader