ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾಗಿರುವ ‘ಇಂದಿರಾ ಕ್ಯಾಂಟೀನ್’ ಜನಪ್ರಿಯತೆ ಸಹಿಸಲಾಗದೆ ಬಿಜೆಪಿಯವರು ಆಹಾರದಲ್ಲಿ ಏನಾದರೂ ಮಿಶ್ರಣ ಮಾಡಿ ಸರ್ಕಾರಕ್ಕೆ ಕೆಟ್ಟ ಹೆಸರು ತರುವ ಪ್ರಯತ್ನ ಮಾಡಿದರೂ ಆಶ್ಚರ್ಯವಿಲ್ಲ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ಹೇಳಿದ್ದಾರೆ. ಈ ಬಗ್ಗೆ ಕಾಂಗ್ರೆಸ್ ಕಾರ್ಯಕರ್ತರು ಎಚ್ಚರ ವಹಿಸಬೇಕು ಎಂದೂ ಅವರು ಕರೆ ನೀಡಿದ್ದಾರೆ.

ಬೆಂಗಳೂರು (ಆ.20): ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾಗಿರುವ ‘ಇಂದಿರಾ ಕ್ಯಾಂಟೀನ್’ ಜನಪ್ರಿಯತೆ ಸಹಿಸಲಾಗದೆ ಬಿಜೆಪಿಯವರು ಆಹಾರದಲ್ಲಿ ಏನಾದರೂ ಮಿಶ್ರಣ ಮಾಡಿ ಸರ್ಕಾರಕ್ಕೆ ಕೆಟ್ಟ ಹೆಸರು ತರುವ ಪ್ರಯತ್ನ ಮಾಡಿದರೂ ಆಶ್ಚರ್ಯವಿಲ್ಲ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ಹೇಳಿದ್ದಾರೆ. ಈ ಬಗ್ಗೆ ಕಾಂಗ್ರೆಸ್ ಕಾರ್ಯಕರ್ತರು ಎಚ್ಚರ ವಹಿಸಬೇಕು ಎಂದೂ ಅವರು ಕರೆ ನೀಡಿದ್ದಾರೆ.
ಕೆಪಿಸಿಸಿ ಹಿಂದುಳಿದ ವರ್ಗಗಳ ವಿಭಾಗ ಭಾನುವಾರ ನಗರದ ಪುರಭವನದಲ್ಲಿ ಆಯೋಜಿಸಿದ್ದ ಮಾಜಿ ಪ್ರಧಾನಿ ದಿ. ರಾಜೀವ್‌ಗಾಂಧಿ ಮತ್ತು ಮಾಜಿ ಮುಖ್ಯಮಂತ್ರಿ ದಿ. ದೇವರಾಜ ಅರಸು ಅವರ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಉದ್ಯಾನ ನಗರಿಯ ಬಡ ಜನರಿಗಾಗಿ ರಾಜ್ಯ ಸರ್ಕಾರ ಅತ್ಯಂತ ಕಡಿಮೆ ದರದಲ್ಲಿ ತಿಂಡಿ, ಊಟ ನೀಡುವ ‘ಇಂದಿರಾ ಕ್ಯಾಂಟೀನ್’ ಯೋಜನೆ ಜಾರಿಗೆ ತಂದಿದೆ. ಎಲ್ಲೆಡೆ ಈ ಯೋಜನೆಗೆ ಉತ್ತಮ ಜನಪ್ರಿಯತೆ ವ್ಯಕ್ತವಾಗುತ್ತಿದೆ. ಆದರೆ, ಬಿಜೆಪಿಯವರು ತಾವಂತೂ ಇಂತಹ ಒಂದೂ ಯೋಜನೆ ಜಾರಿಗೆ ತರಲಾಗದಿದ್ದರೂ ಬಿಜೆಪಿಯವರು ಕಾಂಗ್ರೆಸ್ ಸರ್ಕಾರದ ಯೋಜನೆಗೆ ವಿವಾದಗಳ ಮೂಲಕ ಅಡ್ಡಿಪಡಿಸುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಅವರಿಗೆ ಯೋಜನೆಯ ಜನಪ್ರಿಯತೆ ಸಹಿಸಲಾಗುತ್ತಿಲ್ಲ. ಹಾಗಾಗಿ, ಸರ್ಕಾರಕ್ಕೆ ಕೆಟ್ಟ ಹೆಸರು ತರಲು ಬಿಜೆಪಿಯವರು ಎಂಥ ನೀಚತನಕ್ಕೂ ಇಳಿಯಬಹುದು. ಆಹಾರದಲ್ಲಿ ಏನನ್ನಾದರೂ ಮಿಶ್ರಣ ಮಾಡಿ ಸರ್ಕಾರಕ್ಕೆ ಕೆಟ್ಟ ಹೆಸರು ತರುವ ಯೋಚನೆ ನಡೆಸಿದ್ದಾರೆ ಎಂದು ನಮಗೆ ಮಾಹಿತಿ ಬಂದಿದೆ. ಹಾಗಾಗಿ, ಕಾಂಗ್ರೆಸ್ ಕಾರ್ಯಕರ್ತರು ಎಚ್ಚರದಿಂದ ಇದ್ದು, ಇದಕ್ಕೆ ಎಲ್ಲಿಯೂ ಅವಕಾಶವಾಗದಂತೆ ನೋಡಿಕೊಳ್ಳಬೇಕು ಎಂದು ಕರೆ ನೀಡಿದರು.