ಬಿಎಸ್ವೈ ಮತ್ತು ಅನಂತಕುಮಾರ್ ನಡುವಿನ ಕಪ್ಪ ಸಿಡಿ ಪ್ರಕರಣವನ್ನು ಎಸಿಬಿಗೆ ವರ್ಗಾಯಿಸಲು ಸರ್ಕಾರ ಪಣತೊಟ್ಟಿದೆ. ಆದ್ರೆ, ಸರ್ಕಾರದ ಈ ಪ್ರಯತ್ನ ವಿಫಲವಾಗುವ ಲಕ್ಷಣ ಗೋಚರಿಸುತ್ತಿದೆ. ಸಿದ್ದರಾಮಯ್ಯನವರ ಎಸಿಬಿ ಪ್ಲಾನ್'ಗೆ ಕಾನೂನು ಅಡ್ಡಿಯಾಗುವ ಸಾಧ್ಯತೆಯಿದೆ.
ಬೆಂಗಳೂರು(ಅ. 10): ಬಿಜೆಪಿ ನಾಯಕರ ಕಪ್ಪದ ಪಿಸು ಮಾತಿನ ಆಡಿಯೋ ಸಾಬೀತಾದ ಬೆನ್ನಲ್ಲೇ ಈ ಪ್ರಕರಣವನ್ನು ಎಸಿಬಿಗೆ ಹಸ್ತಾಂತರಿಸಲು ಕಾಂಗ್ರೆಸ್ ಸಿದ್ಧತೆ ನಡೆಸಿದೆ. ಸೈಬರ್ ಕ್ರೈಂನಿಂದ ಎಸಿಬಿಗೆ ಪ್ರಕರಣ ವರ್ಗಾಯಿಸಲು ಸರ್ಕಾರ ಶತಾಯಗತಾಯ ಪ್ರಯತ್ನ ಮಾಡುತ್ತಿದೆ. ಆದ್ರೆ ಪ್ರಕರಣವನ್ನು ಎಸಿಬಿಗೆ ವರ್ಗಾಯಿಸಲು ಬಿಲ್'ಕುಲ್ ಸಾಧ್ಯವಿಲ್ಲ ಅಂತಿದ್ದಾರೆ ಕಾನೂನು ತಜ್ಞರು. ಆದರೂ ಪ್ರಕರಣ ಎಸಿಬಿಗೆ ವರ್ಗಾಯಿಸಲೇಬೇಕೆಂದು ಸಿಎಂ ಸಿದ್ದರಾಮಯ್ಯ ಹಾಗೂ ಸರ್ಕಾರದ ಸಮಾನ ಮನಸ್ಕರೆಲ್ಲ ಮೀಟಿಂಗ್ ಮಾಡಿ ಕಾನೂನು ತಜ್ಞರ ಜೊತೆ ಚರ್ಚೆ ಮುಂದುವರಿಸಿದ್ದಾರೆ.
ಕೇಸ್ ಎಸಿಬಿಗೆ ವರ್ಗಾಯಿಸಲು ಯಾಕೆ ಸಾಧ್ಯವಿಲ್ಲ..?
ಇಂಥ ಪ್ರಶ್ನೆಗಳು ಏಳೋದು ಸಹಜ.. ಅದಕ್ಕೆ ಕಾನೂನು ತಜ್ಞರು ಉತ್ತರವನ್ನೂ ಕೊಟ್ಟಿದ್ದಾರೆ. ಭ್ರಷ್ಟಚಾರ ನಿಗ್ರಹ ಕಾಯ್ದೆಯಡಿ ಕೇಸ್ ದಾಖಲಾಗಬೇಕು ಅಂದ್ರೆ, ಲಂಚ ಪಡೆದು ಸಹಾಯ ಪಡೆದುಕೊಂಡಿರಬೇಕು. ಅಥವಾ ಲಂಚ ಪಡೆದವರು ಬೇಡಿಕೆಯನ್ನ ಈಡೇರಿಸಿಕೊಂಡಿರಬೇಕು. ಆದ್ರೆ, ಈ ಕೇಸ್'ನಲ್ಲಿ ಇದ್ಯಾವುದೂ ಕಂಡುಬಂದಿಲ್ಲ. ಹೀಗಾಗಿ ಕಪ್ಪದ ಕೇಸ್ ಎಸಿಬಿ ಕಾಯ್ದೆಯಡಿ ದಾಖಲಿಸಿಕೊಳ್ಳೋಕೆ ಸಾಧ್ಯವಿಲ್ಲ ಎನ್ನುತ್ತಿವೆ ಎಸಿಬಿ ಉನ್ನತ ಮೂಲಗಳು.
ಹೀಗಿದ್ದರೂ ಸಿದ್ದರಾಮಯ್ಯನವರು ಈ ಕೇಸ್'ನ್ನು ಎಸಿಬಿಗೆ ಹಸ್ತಾತರಿಸುವ ಪ್ರಯತ್ನ ಕೈಬಿಟ್ಟಿಲ್ಲ. ಈ ವಿಚಾರದಲ್ಲಿ ತಜ್ಞರ ಜೊತೆ ಮಾತುಕತೆ ನಡೆಸುತ್ತಲೇ ಇದ್ದಾರೆ. ಒಟ್ಟಾರೆ, ಚುನಾವಣೆ ಹೊಸ್ತಿಲಲ್ಲಿ ಬಿಜೆಪಿ ವಿರುದ್ಧ ಎಸಿಬಿಯಲ್ಲಿ ಮತ್ತೊಂದು ಕೇಸ್ ದಾಖಲಿಸಲು ಪಣ ತೊಟ್ಟಿರುವ ಸಿಎಂ ಇದರಲ್ಲಿ ಯಶಸ್ವಿಯಾಗ್ತಾರಾ.. ಕಾದು ನೋಡಬೇಕಿದೆ.
ಏನಿದು ಕಪ್ಪ ಪ್ರಕರಣ?
ಕಾಂಗ್ರೆಸ್ ಎಂಎಲ್'ಸಿ ಗೋವಿಂದರಾಜು ಅವರು ಕಾಂಗ್ರೆಸ್'ನ ಹೈಕಮಾಂಡ್ ಸೇರಿದಂತೆ ವಿವಿಧ ಮಂದಿಗೆ ಹಣ ಕೊಟ್ಟಿರುವ ಮತ್ತು ಪಡೆದಿರುವ ವಿವರವನ್ನು ಬರೆದಿದ್ದಾರೆನ್ನಲಾದ ಡೈರಿಯು ಬಹಳ ದೊಡ್ಡ ಸುದ್ದಿಯಲ್ಲಿತ್ತು. ಬಿಜೆಪಿಗೆ ಇದೊಂದು ರಾಜಕೀಯ ದಾಳವಾಗಿ ಪರಿಣಮಿಸಿತ್ತು. ಈ ಸಂದರ್ಭದಲ್ಲಿ ಡೈರಿ ವಿಚಾರವಾಗಿ ಬಿಜೆಪಿ ಮುಖಂಡರಾದ ಬಿಎಸ್'ವೈ ಮತ್ತು ಅನಂತಕುಮಾರ್ ಅವರು ಮಾತನಾಡುತ್ತಾ, ಬಿಜೆಪಿಯಲ್ಲೂ ತಮ್ಮ ಹೈಕಮಾಂಡ್ ನಾಯಕರಿಗೆ ಹಣ ಕೊಟ್ಟಿರುವ ಕುರಿತು ಪಿಸುಗುಟ್ಟಿದ್ದರು. ಇವರು ಆ ಮಾತುಗಳನ್ನಾಡಿರುವ ಆಡಿಯೋ ಮಾಧ್ಯಮಗಳಲ್ಲಿ ಬಹಿರಂಗಗೊಂಡಿತ್ತು.
- ರಮೇಶ್ ಕೆ.ಎಚ್., ಕ್ರೈಂ ಬ್ಯುರೋ, ಸುವರ್ಣ ನ್ಯೂಸ್
