Asianet Suvarna News Asianet Suvarna News

ಸಿದ್ದರಾಮಯ್ಯ ವಿರುದ್ಧ ಬಿಜೆಪಿ ವಿದೇಶಿ ಅಸ್ತ್ರ

ಮುಖ್ಯಮಂತ್ರಿ ಸಿದ್ದರಾಮಯ್ಯನವರು ಬಿಜೆಪಿ ಅಧ್ಯಕ್ಷ ಅಮಿತ್ ಶಾ ವಿರುದ್ಧ ಆರಂಭಿಸಿರುವ ‘ಕನ್ನಡಿಗರು ವರ್ಸಸ್ ಪರಕೀಯ’ ವಾಗ್ದಾಳಿಯ ಅಸ್ತ್ರಕ್ಕೆ ಬಿಜೆಪಿ ಕೆಂಡಾಮಂಡಲವಾಗಿದೆ.

BJP Attack Congress

ಬೆಂಗಳೂರು (ಜ.28): ಮುಖ್ಯಮಂತ್ರಿ ಸಿದ್ದರಾಮಯ್ಯನವರು ಬಿಜೆಪಿ ಅಧ್ಯಕ್ಷ ಅಮಿತ್ ಶಾ ವಿರುದ್ಧ ಆರಂಭಿಸಿರುವ ‘ಕನ್ನಡಿಗರು ವರ್ಸಸ್ ಪರಕೀಯ’ ವಾಗ್ದಾಳಿಯ ಅಸ್ತ್ರಕ್ಕೆ ಬಿಜೆಪಿ ಕೆಂಡಾಮಂಡಲವಾಗಿದೆ. ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಹಾಗೂ ಸಂಸದೆ ಶೋಭಾ ಕರಂದ್ಲಾಜೆ ಅವರು ಈ ಸಂಬಂಧ ನೇರವಾಗಿ ಸಿದ್ದರಾಮಯ್ಯ ಅವರನ್ನು ತರಾಟೆಗೆ ತೆಗೆದುಕೊಂಡಿದ್ದು, ಪರೋಕ್ಷವಾಗಿ ಕಾಂಗ್ರೆಸ್ ಹಿಂದಿನ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ‘ವಿದೇಶೀ ಮೂಲ’ವನ್ನು ಕೆದಕಿ ತಿರುಗೇಟು ನೀಡಿದ್ದಾರೆ. 

ಇದರೊಂದಿಗೆ ಉಭಯ ಪಕ್ಷಗಳ ನಡುವಿನ ಚುನಾವಣಾ ಸಮರದ ಕಾವು ಮತ್ತಷ್ಟು ತೀವ್ರಗೊಂಡಿದೆ. ‘ಗುಜರಾತಿ ಶಾ ಕನ್ನಡಿಗನಾದ ನನ್ನನ್ನು ಬೈದರೆ ಇಲ್ಲಿನ ಜನರು ಸುಮ್ನಿರ್ತಾರಾ’ ಎಂದು ಸಿದ್ದರಾಮಯ್ಯ ಕನ್ನಡ ಅಸ್ತ್ರ ಪ್ರಯೋಗಿಸಿದ್ದರು.

ಈ ಹೇಳಿಕೆಯ ಸಂಬಂಧ ಶನಿವಾರ ಆನ್‌ಲೈನ್ ಸಾಮಾ ಜಿಕ ಮಾಧ್ಯಮವಾದ ಟ್ವೀಟರ್‌ನಲ್ಲಿ ಪ್ರತಿಕ್ರಿಯಿಸಿರುವ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ, ‘ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರನ್ನು ಗುಜರಾತಿನವರು ಎನ್ನುವ ಮೂಲಕ ಒಡೆದಾಳುವ ನೀತಿ ಹೇರಲು ಮುಂದಾಗಿದ್ದಾರೆ. ಬಿಜೆಪಿ ರಾಷ್ಟ್ರ ನಾಯಕರೆಲ್ಲರೂ ಭಾರತ ಮೂಲದವರೇ ಎಂಬ ಹೆಮ್ಮೆ ನಮ್ಮಲ್ಲಿದೆ ಎಂದು ಹೇಳಲು ಇಚ್ಛಿಸುತ್ತೇನೆ’ ಎಂದು ಪ್ರತಿಕ್ರಿಯಿಸಿದ್ದಾರೆ. ಈ ಮೂಲಕ ಸೋನಿಯಾ ಅವರ ಇಟಲಿ ಮೂಲದ ಬಗ್ಗೆ ಪರೋಕ್ಷವಾಗಿ ಟಾಂಗ್ ನೀಡಿದ್ದಾರೆ. ಇನ್ನು ಸಿದ್ದು ಹಾಗೂ ಸೋನಿಯಾ ಅವರ ಕನ್ನಡಾಭಿಮಾನ ಪ್ರಶ್ನಿಸಿರುವ ಯಡಿಯೂರಪ್ಪ, ‘ಸಿದ್ದರಾಮಯ್ಯನವರೇ, ವಿಶ್ವ ಕನ್ನಡ ಸಮ್ಮೇಳನ ನಡೆಸುವುದಾಗಿ ಸುಳ್ಳು ಹೇಳಿದ ನಿಮ್ಮ ಕನ್ನಡಾಭಿಮಾನದ ಬಗ್ಗೆ ಜನತೆಗೆ ತಿಳಿದಿದೆ. ನಿಮ್ಮ ಸೋನಿಯಾ ಮಹದಾಯಿ ಕುರಿತು ಕರ್ನಾಟಕದ ವಿರುದ್ಧ ಹೇಳಿಕೆ ನೀಡಿ ಕನ್ನಡಿಗ ರನ್ನು ಕೆರಳಿಸಿದ್ದರು. ಕನ್ನಡದ ವೀರಪ್ಪ ಮೊಯ್ಲಿಯವರನ್ನು ನಂಬಬೇಡಿ ಎಂದು ಇಂದಿರಾ ಹೇಳಿದ್ದರೆಂದು ಜನಾರ್ದನ ಪೂಜಾರಿಯವರೇ ಹೇಳಿದ್ದಾರೆ. ಪುಟ್ಟರಾಜುರವರಿಗೆ ಕನ್ನಡ ಬಿಟ್ಟರೆ ಬೇರೆ ಭಾಷೆ ಬರುವುದಿಲ್ಲ.

ಹಾಗಾಗಿ ಲೋಕಸಭೆಗೆ ಅವರಿಗೆ ಮತ ಹಾಕಬೇಡಿ ಎಂದು 2014ರಲ್ಲಿ ಭಾಷಣ ಬಿಗಿದ ಇದೇ ಮಣ್ಣಿನ ಮಗ ಸಿದ್ದರಾಮಯ್ಯ, ಇಂದು ಕನ್ನಡ, ಕನ್ನಡಿಗರ ಬಗ್ಗೆ ಅಪಾರ ಒಲವು ತೋರಿಸುತ್ತಿ ರುವುದು ಸಾರ್ವಕಾಲಿಕ ದುರಂತ. ಭ್ರಷ್ಟಾಚಾರವೇ ಸಿದ್ದರಾಮಯ್ಯನವರು ಕನ್ನಡಿಗರಿಗೆ ಕೊಟ್ಟ ಕೊಡುಗೆ’ ಎಂದು ಲೇವಡಿ ಮಾಡಿದ್ದಾರೆ. ‘ಕನ್ನಡ ಶಾಸ್ತ್ರೀಯ ಭಾಷೆಯ ಅಧ್ಯಯನ ಕೇಂದ್ರಕ್ಕೆ ಬಿಜೆಪಿ ಸರ್ಕಾರ ನೀಡಿದ್ದ 8.9 ಕೋಟಿ ರು.ಗಳಲ್ಲಿ ಸಿದ್ದರಾಮಯ್ಯನವರ ಸರ್ಕಾರ ಕಳೆದ ನಾಲ್ಕು ವರ್ಷಗಳಲ್ಲಿ ಬಳಸಿದ್ದು ಕೇವಲ 2.4 ಕೋಟಿ ಕೋಟಿ ರು. ಮಾತ್ರ. ಚುನಾವಣೆ ಹತ್ತಿರ ಬಂದಂತೆ ತಾನು ಮಣ್ಣಿನ ಮಗ ಎಂದರೆ ನಂಬಲು, ಕನ್ನಡಿಗರು ತಯಾರಿಲ್ಲ. ನಿಮ್ಮ ಎಲ್ಲ ನಡೆಗಳಿಗೂ ರಾಜ್ಯದ ಜನತೆ ಶೀಘ್ರವೇ ಉತ್ತರಿಸಲಿದೆ’ ಎಂದು ತೀಕ್ಷ್ಣವಾಗಿ ಹೇಳಿದ್ದಾರೆ.

ಸಂಸದರಾಗಿ ಶಾ ಪ್ರಶ್ನೆ ಕೇಳಿದ್ದಾರೆ’- ಶೋಭಾ: ಇದೇ ವೇಳೆ, ‘ನಮ್ಮ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ರಾಜ್ಯಸಭಾ ಸದಸ್ಯರಾಗಿ ನಿಮಗೆ ಪ್ರಶ್ನೆಗಳನ್ನು ಮಾಡಿದ್ದಾರೆ. ಇದಕ್ಕೆ ಉತ್ತರ ಕೊಡಿ. ಅದನ್ನು ಬಿಟ್ಟು ಅವರನ್ನು ಯಾಕೆ ಗುಜರಾತಿ ಅಂತ ಹೇಳುತ್ತೀರಿ ಸಿದ್ದರಾಮಯ್ಯ ಅವರೇ’ ಎಂದು ಬಿಜೆಪಿ ಸಂಸದೆ ಶೋಭಾ ಕರಂದ್ಲಾಜೆ ಖಾರವಾಗಿ ಹೇಳಿದ್ದಾರೆ. ಶನಿವಾರ ಪಕ್ಷದ ಕಚೇರಿಯಲ್ಲಿ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಯಡಿಯೂರಪ್ಪ ಅವರು ಕರ್ನಾಟಕದ ಮಣ್ಣಿನ ಮಗ ಅಲ್ವಾ? ಈ ರಾಜ್ಯದಲ್ಲಿ ಯಡಿಯೂರಪ್ಪ ಮುಖ್ಯಮಂತ್ರಿ ಆಗಬೇಕು ಅಂತ ಅಮಿತ್ ಶಾ ಬಂದಿದ್ದಾರೆ ಎಂದು ಪ್ರಶ್ನಿಸಿದರು. ಅಮಿತ್ ಶಾ ಅವರು ದೇಶದಲ್ಲಿಯೇ ಸಂಚಲನ ಸೃಷ್ಟಿಸಿದ್ದಾರೆ. ಅಂಥವರಿಗೆ ಮೆದುಳಿಲ್ಲ ಎಂದು ಹೇಳುವುದು ಹೇಡಿತನದ ಪರಮಾವಧಿಯಾಗದೆ. ಅವರ ಮೆದುಳು ಹಾಗೂ ನಾಲಿಗೆಗೆ ಸಂಪರ್ಕವಿಲ್ಲದ ಪರಿಣಾಮ ಈ ರೀತಿಯ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದರು.

Follow Us:
Download App:
  • android
  • ios