ಮೋದಿ ನೇತೃತ್ವದ ಕೇಂದ್ರ ಸರಕಾರದ ವಿರುದ್ಧ ಇದುವರೆಗೂ ಒಂದೇ ಒಂದು ಭ್ರಷ್ಟಚಾರ ಪ್ರಕರಣಗಳು ಸಾಬೀತಾಗಿಲ್ಲ. ಆದರೆ, ರಫೇಲ್ ಎಂಬೊಂದು ಅಸ್ತ್ರವನ್ನಿಟ್ಟುಕೊಂಡು ಕಾಂಗ್ರೆಸ್ ಹೋರಾಡಲು ಮುಂದಾಗಿತ್ತು. ಇದೀಗ ಅದಕ್ಕೂ ಸಿಗಲಿಲ್ಲ ಮಾನ್ಯ. ಹಾಗಾದರೆ ಲೋಕಸಭಾ ಚುನಾವಣೆಗೆ ಹೇಗಿರಬಹುದು ಹೋರಾಟ?
ನವದೆಹಲಿ: ಸಂಸತ್ತಿನ ಚಳಿಗಾಲದ ಅಧಿವೇಶನ ಆರಂಭವಾದಾಗಿನಿಂದಲೂ ರಫೇಲ್ ಖರೀದಿ ವಿಷಯ ಮುಂದಿಟ್ಟುಕೊಂಡು ಸರ್ಕಾರದ ವಿರುದ್ಧ ಸಮರ ಸಾರಿದ್ದ ಕಾಂಗ್ರೆಸ್‌ಗೆ, ಶುಕ್ರವಾರ ರಫೇಲ್ ವಿಷಯವೇ ತಿರುಗುಬಾಣವಾಗಿದೆ. ರಫೇಲ್ ವಿಷಯದಲ್ಲಿ ತನಿಖೆಗೆ ಅಗತ್ಯವಿಲ್ಲ ಎಂಬ ಸುಪ್ರೀಂಕೋರ್ಟ್ ತೀರ್ಪಿನ ಬೆನ್ನಲ್ಲೇ, ಆಡಳಿತಾರೂಢ ಬಿಜೆಪಿ ಸದಸ್ಯರು, ಶುಕ್ರವಾರ ಸಂಸತ್ತಿನ ಉಭಯ ಸದನಗಳಲ್ಲೂ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರನ್ನು ತರಾಟೆಗೆ ತೆಗೆದುಕೊಂಡರು.
ಮೋದಿ ಚೋರ್ ಎಂದಿದ್ದ ರಾಹುಲ್, ರೆಫೇಲ್ ದಾಳ ಫೇಲ್
ರಫೇಲ್ ಖರೀದಿಯಲ್ಲಿ ಹಗರಣ ನಡೆದಿದೆ ಎಂಬ ರಾಹುಲ್ ಆರೋಪ ಸುಳ್ಳು ಎಂದು ಸುಪ್ರೀಂ ತೀರ್ಪಿನಿಂದ ಸಾಬೀತಾಗಿದೆ. ಹೀಗಾಗಿ ಸರ್ಕಾರದ ವಿರುದ್ಧ ಸುಳ್ಳು ಆರೋಪ ಮಾಡಿದ ರಾಹುಲ್, ಕ್ಷಮೆಯಾಚಿಸಬೇಕು ಎಂದು ಬಿಜೆಪಿ ಸದಸ್ಯರು ಆಗ್ರಹಿಸಿದರು. ಮತ್ತೊಂದೆಡೆ ಸರ್ಕಾರದ ವಾದವನ್ನು ತಳ್ಳಿಹಾಕಿದ ಕಾಂಗ್ರೆಸ್ ಸದಸ್ಯರು, ಕೋರ್ಟ್ ಸರ್ಕಾರಕ್ಕೆ ಕ್ಲೀನ್‌ಚಿಟ್ ನೀಡಿಲ್ಲ. ಸುಳ್ಳು ಮಾಹಿತಿ ಮೂಲಕ ಬಿಜೆಪಿ ಜನರ ದಿಕ್ಕು ತಪ್ಪಿಸುತ್ತಿದೆ. ಅವ್ಯವಹಾರ ನಡೆದಿಲ್ಲ ಎಂದಾದಲ್ಲಿ ಸರ್ಕಾರ ರಫೇಲ್ ವಿಷಯದಲ್ಲಿ ಜಂಟಿ ಸಂಸದೀಯ ತನಿಖೆಗೆ ಮುಂದಾಗಲಿ ಎಂದು ಸವಾಲು ಹಾಕಿದರು. ಹೀಗೆ ಉಭಯ ಬಣಗಳ ತೀವ್ರ ಗದ್ದಲದ ಕಾರಣ ಶುಕ್ರವಾರ ಯಾವುದೇ ಕಲಾಪ ಸಾಧ್ಯವಾಗಲಿಲ್ಲ.
