ಮುಂಬೈ, [ಫೆ.18]: ಮಹಾರಾಷ್ಟ್ರದಲ್ಲಿ ಬಹುಕಾಲದಿಂದಲೂ ಮಿತ್ರಪಕ್ಷಗಳಾಗಿದ್ದ ಶಿವಸೇನೆ ಹಾಗೂ ಬಿಜೆಪಿ ಜೋಡಿ ಮತ್ತೆ ಮುಂದುವರೆಯಲಿದೆ. 

ಇತ್ತೀಚೆಗೆ ಮುನಿಸಿಕೊಂಡು ಮೈತ್ರಿ ಮುರಿದುಕೊಳ್ಳುವ ಹಂತಕ್ಕೆ ತಲುಪಿತ್ತಾದರೂ, ಸದ್ಯ ಕೋಪ ಶಮನವಾಗಿದೆ.  ಲೋಕಸಭೆ ಚುನಾವಣೆಗೆ ಒಟ್ಟಾಗಿ ಹೋಗುವ ನಿರ್ಧಾರ ಮಾಡಿವೆ. 

ಮೋದಿ ಮೇಲೆ ಅಸಮಾಧಾನ? : ಬಿಜೆಪಿ ಮೈತ್ರಿಯಿಂದ ಮತ್ತೊಂದು ಪಕ್ಷ ಹಿಂದಕ್ಕೆ?

ಕಳೆದ ಮೂರು ವರ್ಷಗಳಿಂದಲೂ ಬಿಜೆಪಿ ಮತ್ತು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಶಿವಸೇನೆಯ ನಾಯಕರು ತೀವ್ರ ವಾಗ್ದಾಳಿ ನಡೆಸಿದ್ದರು. ರಾಮ ಮಂದಿರ ನಿರ್ಮಾಣದ ವಿಚಾರದಲ್ಲಂತಲೂ ಸುಗ್ರೀವಾಜ್ಞೆ ಜಾರಿಗೆ ಆಗ್ರಹಿಸಿ ಮಿತ್ರ ಪಕ್ಷ ಬಿಜೆಪಿಯನ್ನು ಇಕ್ಕಟ್ಟಿಗೆ ಸಿಲುಕಿಸಿದ್ದರು.

ಇದೀಗ ಎರಡೂ ಪಕ್ಷದ ನಾಯಕರು ತಮ್ಮ ವೈಮನಸ್ಸು ಮರೆತು ಒಗ್ಗಟ್ಟಾಗಿದ್ದಾರೆ. ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಹಾಗೂ ಶಿವಸೇನೆಯ ಮುಖ್ಯಸ್ಥ ಉದ್ಧವ್ ಠಾಕ್ರೆ ಇಂದು [ಸೋಮವಾರ] ಸುದೀರ್ಘ ಚರ್ಚೆ ನಡೆಸಿದ್ದು, ಬಿಜೆಪಿಗೆ 25 ಮತ್ತು 23 ಸೀಟುಗಳು ಶಿವಸೇನಾಗೆ ನೀಡುವ ಬಗ್ಗೆ ನಿರ್ಧಾರವಾಗಿದೆ. 

ಸುದ್ದಿಗೋಷ್ಠಿ ನಡೆಸಿದ ಉಭಯ ನಾಯಕರು, 48 ಸೀಟುಗಳ ಪೈಕಿ ಬಿಜೆಪಿ ಮತ್ತು ಶಿವಸೇನಾ ಸೇರಿ 45 ಸ್ಥಾನಗಳಲ್ಲಿ ಗೆಲ್ಲಲಿವೆ ಎಂದು ಅಮಿತ್ ಶಾ ವಿಶ್ವಾಸ ವ್ಯಕ್ತಪಡಿಸಿದರು.

ಮಹಾರಾಷ್ಟ್ರ ದೇಶದಲ್ಲಿಯೇ ಅತಿ ಹೆಚ್ಚು ಲೋಕಸಭೆ ಕ್ಷೇತ್ರಗಳನ್ನು ಹೊಂದಿರುವ ರಾಜ್ಯಗಳ ಪೈಕಿ ಎರಡನೇ ಸ್ಥಾನದಲ್ಲಿದೆ. 80 ಸ್ಥಾನಗಳನ್ನು ಹೊಂದಿರುವ ಉತ್ತರ ಪ್ರದೇಶ ಮೊದಲ ಸ್ಥಾನದಲ್ಲಿದೆ.