ಮುಂಬೈ: 2019ರ ಲೋಕಸಭಾ ಚುನಾವಣೆಯ ಫಲಿತಾಂಶದ ವೇಳೆ ಸರ್ಕಾರ ರಚನೆಗೆ ಅಗತ್ಯವಿರುವ ಸಂಖ್ಯಾಬಲ ಯಾವೊಂದು ಪಕ್ಷಕ್ಕೂ ಲಭ್ಯವಾಗುವುದಿಲ್ಲ ಎಂದು ಶಿವಸೇನೆ ಮುಖಂಡ ಸಂಜಯ್‌ ರಾವುತ್‌ ಅವರು ಅಂದಾಜಿಸಿದ್ದಾರೆ. 

ಅಲ್ಲದೆ, ಇಂಥ ಸಂದರ್ಭದಲ್ಲಿ ಬಿಜೆಪಿ ಹಿರಿಯ ನಾಯಕ ನಿತಿನ್‌ ಗಡ್ಕರಿ ಅವರಿಗೆ ಪ್ರಧಾನಿ ಸ್ಥಾನ ನೀಡುವುದಾದರೆ, ಶಿವಸೇನೆಯು ಬಿಜೆಪಿಗೆ ಬೆಂಬಲ ನೀಡಲಿದೆ ಎಂದು ಅವರು ಇದೇ ಸಂದರ್ಭದಲ್ಲಿ ಹೇಳಿದ್ದಾರೆ. 

ಮತ್ತೊಂದೆಡೆ, ಮುಂಬರುವ ಲೋಕಸಭಾ ಚುನಾವಣೆಗೆ ಕೆಲವೇ ತಿಂಗಳು ಬಾಕಿಯಿರುವ ಹೊತ್ತಿನಲ್ಲಿ ಏಕಾಂಗಿಯಾಗಿ ಚುನಾವಣೆಗೆ ಹೋಗುವುದು ಸರಿಯಲ್ಲ. ಬಿಜೆಪಿ ಜೊತೆ ಮೈತ್ರಿ ಮಾಡಿಕೊಳ್ಳಬೇಕು ಎಂದು ಪಕ್ಷದ ಕೆಲವು ಸಂಸದರು ಶಿವಸೇನೆ ಅಧ್ಯಕ್ಷ ಉದ್ಧವ್‌ ಠಾಕ್ರೆ ಅವರ ಬಳಿ ಮನವಿ ಮಾಡಿದ್ದಾರೆ.