ಬೆಂಗಳೂರು [ಜು.09] : ಸಮ್ಮಿಶ್ರ ಸರ್ಕಾರ ಉಳಿಸಲು ಎಲ್ಲಾ ಸಚಿವರು ಸ್ವಯಂ ಪ್ರೇರಿತವಾಗಿ ರಾಜೀನಾಮೆ ನೀಡಿದ್ದಾರೆ. ಮುಂಬೈನಲ್ಲಿರುವ ಶಾಸಕರೂ ವಾಪಸಾಗುವ ವಿಶ್ವಾಸವಿದೆ. ಸರ್ಕಾರವನ್ನು ಅಸ್ಥಿರಗೊಳಿಸಲು ಸಾಂವಿಧಾನಿಕ ಸಂಸ್ಥೆಗಳನ್ನು ದುರುಪಯೋಗಪಡಿಸಿಕೊಂಡು ಬಿಜೆಪಿ ನಡೆಸುತ್ತಿರುವ ಪ್ರಯತ್ನ ಆರನೇ ಬಾರಿಯೂ ವಿಫಲವಾಗಲಿದೆ ಎಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ. ವೇಣುಗೋಪಾಲ್ ಹೇಳಿದ್ದಾರೆ.

ಸದಾಶಿವನಗರದ ಡಾ.ಜಿ. ಪರಮೇಶ್ವರ್ ಅವರ ಸರ್ಕಾರಿ ಅತಿಥಿಗೃಹದಲ್ಲಿ ನಡೆದ ಸಭೆ ಬಳಿಕ ಮಾತನಾಡಿದ ಅವರು, ಬಿಜೆಪಿಯವರು ಪ್ರತಿ ರಾಜ್ಯದಲ್ಲೂ ಜನಾದೇಶವಿಲ್ಲದಿದ್ದರೂ ಐಟಿ, ಇ.ಡಿ.ಯಂತಹ ಸಾಂವಿಧಾನಿಕ ಸಂಸ್ಥೆಗಳ ದುರುಪಯೋಗದ ಮೂಲಕ ಶಾಸಕರು, ಸಂಸದ ರನ್ನು ಹೆದರಿಸಿ ಬಿಜೆಪಿಗೆ ಸೇರುವಂತೆ ಮಾಡುತ್ತಿದ್ದಾರೆ.

ಈ ಮೂಲಕ ಸುಭದ್ರ ಸರ್ಕಾರಗಳನ್ನು ಅಭದ್ರಗೊಳಿಸಲು ಯತ್ನಿಸುತ್ತಿದ್ದಾರೆ. ಪಶ್ಚಿಮ ಬಂಗಾಳ, ಆಂಧ್ರಪ್ರದೇಶ, ತೆಲಂಗಾಣ ಸೇರಿದಂತೆ ಹಲವು ಕಡೆಗಳಲ್ಲಿ ಇದನ್ನೇ ಮಾಡಿದ್ದಾರೆ. ಪ್ರಸ್ತುತ ರಾಜ್ಯದಲ್ಲಿ ಅಸ್ತಿತ್ವದಲ್ಲಿರುವ ಸಮ್ಮಿಶ್ರ ಸರ್ಕಾರವನ್ನು ಅಸ್ಥಿರಗೊಳಿಸಲು ಕಳೆದ ಒಂದು ವರ್ಷದಲ್ಲಿ ಐದು ಬಾರಿ ಯತ್ನಿಸಿದ್ದಾರೆ. ಇದೀಗ ಹಲವು ಶಾಸಕರನ್ನು ಹೆದರಿಸಿ ಬೆದರಿಸಿ ರಾಜೀನಾಮೆ ಕೊಡುವಂತೆ ಮಾಡಿದ್ದಾರೆ. ನಮಗೆ ಈಗಲೂ ನಮಗೆ ಸರ್ಕಾರ ಉಳಿಸಿಕೊಳ್ಳುವ ವಿಶ್ವಾಸವಿದೆ.

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಎಲ್ಲರಿಗೂ ಸಚಿವ ಸ್ಥಾನ ನೀಡಲು ಆಗುವುದಿಲ್ಲ. ಹೀಗಾಗಿ ಕೆಲವರಿಗೆ ತೊಂದರೆಗಳು ಆಗಿರುವುದನ್ನು ನಾವು ಒಪ್ಪಿಕೊಳ್ಳುತ್ತೇವೆ. ಅವರಿಗೆ ಅವಕಾಶ ಕಲ್ಪಿಸಲು ಸಚಿವರು ಸ್ವಯಂ ಪ್ರೇರಿತವಾಗಿ ರಾಜೀನಾಮೆ ನೀಡಿದ್ದಾರೆ. ಸಚಿವ ಸಂಪುಟ ಪುನರ್‌ರಚನೆಗೆ ಅಗತ್ಯ ತೀರ್ಮಾನ ಮಾಡಿದ್ದೇವೆ. ಮುಂಬೈನಲ್ಲಿರುವ ಶಾಸಕರೂ ವಾಪಸಾಗಲಿದ್ದು, ಬಿಜೆಪಿಯ ಯತ್ನ ವಿಫಲವಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.