ನವದೆಹಲಿ(ಡಿ.18): ಚಳಿಗಾಲದ ಸಂಸತ್ ಕಲಾಪದ ಸಮಯ ವ್ಯರ್ಥವಾದ ಪ್ರಮಾಣದಷ್ಟು ವೇತನ ಹಿಂದಿರುಗಿಸುವುದಾಗಿ ಬಿಜು ಜನತಾದಳ(ಬಿಜೆಡಿ) ಪಕ್ಷದ ಸಂಸದ ಜಯಂತ್ ಜಯ್ ಪಾಂಡಾ ಹೇಳಿದ್ದಾರೆ.

ನೋಟು ಅಮಾನ್ಯದ ಕ್ರಮದಿಂದ ಚಳಿಗಾಲದ ಅವೇಶನವೂ ಯಾವುದೇ ಚರ್ಚೆಯಿಲ್ಲದೆ ಮುಕ್ತಾಯವಾಗಿದೆ. ಈ ಹಿನ್ನೆಲೆಯಲ್ಲಿ ವೇತನ ಹಿಂದಿರುಗಿಸುವುದಾಗಿ ಸಂಸದ ಜಯಂತ್ ಜಯ್ ಪಾಂಡಾ ಹೇಳಿದ್ದಾರೆ.

ಈ ಬಗ್ಗೆ ಮಾತನಾಡಿದ ಒಡಿಶಾ ಮೂಲದ ಸಂಸದ ಪಾಂಡಾ, ‘‘ಸಂಸತ್ತಿನ ಕಲಾಪಗಳು ವ್ಯರ್ಥವಾಗುತ್ತಿರುವುದರಿಂದ ದೇಶಕ್ಕೆ ಕೋಟ್ಯಂತರ ರುಪಾಯಿ ನಷ್ಟವಾಗುತ್ತಿದೆ. ಎಲ್ಲ ಸವಾಲತ್ತುಗಳನ್ನು ಪಡೆಯುತ್ತಿರುವ ಹೊರತಾಗಿಯೂ ನಾವು ನಮ್ಮ ಕಾರ್ಯವನ್ನು ಸರಿಯಾಗಿ ನಿರ್ವಹಿಸುತ್ತಿಲ್ಲ,’’ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಕಳೆದ 5-6 ವರ್ಷಗಳಿಂದ ಕಲಾಪ ವ್ಯರ್ಥವಾದ ಭಾಗದಷ್ಟು ವೇತನ ಮತ್ತು ಭತ್ಯೆಯನ್ನು ವಾಪಸ್ ನೀಡುತ್ತಿದ್ದೆ. ಈಗಲೂ ಅದನ್ನೇ ಅನುಸರಿಸುತ್ತೇನೆ. ಅವೇಶನಕ್ಕೆ ಅಡ್ಡಿಯಾಗಿದ್ದರಿಂದ ಅತಿಹೆಚ್ಚು ಹಣ ಪೋಲಾಗಿದ್ದು, ನನ್ನದು ಏನೇನು ಅಲ್ಲ,’’ ಎಂದಿದ್ದಾರೆ.