ಪಡಿತರ ಚೀಟಿದಾರರು ಆಹಾರ ಪದಾರ್ಥ ಕೊಳ್ಳಲು ಸುಲಭವಾಗುವಂತೆ ಬಯೋಮೆಟ್ರಿಕ್​ ವ್ಯವಸ್ಥೆಯನ್ನ ಜಾರಿಗೆ ತರುವುದಾಗಿ ಆಹಾರ ಸಚಿವ ಯು.ಟಿ. ಖಾದರ್ ಘೋಷಿಸಿದ್ದಾರೆ.

 ಬೆಂಗಳೂರು (ಮಾ.04): ಪಡಿತರ ಚೀಟಿದಾರರು ಆಹಾರ ಪದಾರ್ಥ ಕೊಳ್ಳಲು ಸುಲಭವಾಗುವಂತೆ ಬಯೋಮೆಟ್ರಿಕ್​ ವ್ಯವಸ್ಥೆಯನ್ನ ಜಾರಿಗೆ ತರುವುದಾಗಿ ಆಹಾರ ಸಚಿವ ಯು.ಟಿ. ಖಾದರ್ ಘೋಷಿಸಿದ್ದಾರೆ.

ಬೆಂಗಳೂರಿನಲ್ಲಿಂದು ಸುದ್ದಿಗೋಷ್ಟಿ ನಡೆಸಿದ ಅವರು, ರಾಜ್ಯದ ಎಲ್ಲ ನ್ಯಾಯಬೆಲೆ ಅಂಗಡಿಗಳ ಮಾಲೀಕರು ಕೂಡಲೇ ಬಯೋಮೆಟ್ರಿಕ್ ಸ್ಕ್ಯಾನರ್ ಅಳವಡಿಸಿಕೊಂಡು ಪಡಿತರ ನೀಡಲು ಆರಂಭಿಸಬೇಕು ಅಂತ ಹೇಳಿದರು. ಈ ವ್ಯವಸ್ಥೆ ಅಳವಡಿಕೆಗೆ ಗರಿಷ್ಟ 2 ತಿಂಗಳು ಕಾಲಾವಕಾಶ ನೀಡಲಾಗಿದ್ದು, ಬಯೋಮೆಟ್ರಿಕ್​ ಸ್ಕ್ಯಾನರ್ ಹಾಗೂ ಲ್ಯಾಪ್​ಟಾಪ್​ ಕೊಳ್ಳಲು ಇಲಾಖೆಯಿಂದಲೇ ಸಾಲ ನೀಡುವುದಾಗಿಯೂ ಘೋಷಿಸಿದರು. ಈ ವ್ಯವಸ್ಥೆ ಯಶಸ್ವಿಯಾಗಿ ಅಳವಡಿಸಿಕೊಂಡ ನ್ಯಾಯಬೆಲೆ ಅಂಗಡಿ ಮಾಲೀಕರಿಗೆ ಹೆಚ್ಚಿನ ಲಾಭಾಂಶ ನೀಡೋದಾಗಿಯೂ ಸಚಿವರು ಇದೇ ವೇಳೆ ಘೋಷಿಸಿದರು.

ಒಂದು ವೇಳೆ ಮೊಬೈಲ್ ಮೂಲಕ ಕೂಪನ್​ ಕೋಡ್​ ಪಡೆದು ಅದನ್ನು ನೀಡಿಯೂ ಪಡಿತರ ಪಡೆಯಲು ಅವಕಾಶ ಇದೆ ಎಂದ ಸಚಿವರು, ಸದ್ಯ ತಾತ್ಕಾಲಿಕವಾಗಿ ಪಡಿತರ ಕೂಪನ್​ ವ್ಯವಸ್ಥೆ ಜಾರಿಯಲ್ಲಿರಲಿದೆ. ಬಯೋಮೆಟ್ರಿಕ್ ಸಂಪೂರ್ಣ ಜಾರಿಯಾದ ನಂತರ ಕೂಪನ್ ವ್ಯವಸ್ಥೆಯನ್ನ ಸಂಪೂರ್ಣ ರದ್ದುಗೊಳಿಸುವುದಾಗಿ ತಿಳಿಸಿದರು.

ಒಂದು ವೇಳೆ ಯಾವುದೇ ನ್ಯಾಯಬೆಲೆ ಅಂಗಡಿಗಳಲ್ಲಿ ಯಾವುದೇ ಕಾರಣಕ್ಕೆ ಪಡಿತರ ನೀಡಲು ನಿರಾಕರಿಸಿದರೆ ಮೊಬೈಲ್ ಮೂಲಕವೇ ದೂರು ಸಲ್ಲಿಸುವಂತೆ ಜನರಿಗೆ ಮನವಿ ಮಾಡಿದ ಸಚಿವರು, ಆಗ ಆಹಾರ ಧಾನ್ಯಗಳ ಪ್ರಮಾಣದ ಬೆಲೆಗೆ ಸಮನಾಗಿ ಹಣ ನೀಡಲು ಆಹಾರ ಭದ್ರತಾ ಕಾಯ್ದೆಯಲ್ಲಿ ಅವಕಾಶ ಇದೆ ಎಂದರು.