ನವದೆಹಲಿ(ಜ.08): ಕೆಲವು ನಿರ್ದಿಷ್ಟ ವ್ಯಕ್ತಿಗಳ ಗುರುತು ಪತ್ತೆ ಹಚ್ಚಲು ಅವರ ಮೇಲೆ ಡಿಎನ್‌ಎ ತಂತ್ರಜ್ಞಾನದ ಪರೀಕ್ಷೆ ನಡೆಸುವ ಹೊಸ ಮಸೂದೆ ಇಂದು ಲೋಕಸಭೆಯಲ್ಲಿ ಮಂಡನೆಯಾಗಿದೆ.

ಡಿಎನ್ಎ ತಂತ್ರಜ್ಞಾನ(ಬಳಕೆ ಮತ್ತು ಅನ್ವಯಿಸುವಿಕೆ) ನಿಯಂತ್ರಣ ಮಸೂದೆ, 2018ನ್ನು ಲೋಕಸಭೆಯಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಹರ್ಷವರ್ಧನ್ ಮಂಡಿಸಿದರು. ಹೊಸ ಮಸೂದೆಯನ್ವಯ ಡಿಎನ್‌ಎ ದತ್ತಾಂಶ ಸಂಗ್ರಹ ಬ್ಯಾಂಕ್‌ನ್ನು ಸ್ಥಾಪಿಸಿ, ಅದರ ಮೂಲಕ ನಿರ್ದಿಷ್ಟ ವ್ಯಕ್ತಿಗಳ ಡಿಎನ್‌ಎ ಮಾದರಿಯನ್ನು ಸಂಗ್ರಹಿಸಲಾಗುವುದು.

ದೇಶದ ಭದ್ರತೆಗೆ ಅಪಾಯ ತಂದೊಡ್ಡಬಲ್ಲ ಅನುಮಾನಾಸ್ಪದ ವ್ಯಕ್ತಿಗಳು, ಅತ್ಯಂತ ಗಂಭೀರ ಅಪರಾಧ ಕೃತ್ಯಗಳಲ್ಲಿ ಭಾಗಿಯಾದವರ ಡಿಎನ್‌ಎ ಮಾದರಿ ಸಂಗ್ರಹಿಸಿ ಈ ಮೂಲಕ ಅಪರಾಧ ತಡೆಗಟ್ಟುವ ಉದ್ದೇಶವನ್ನು ಈ ಮಸೂದೆ ಹೊಂದಿದೆ.

ಈ ಮಧ್ಯೆ ಮಸೂದೆಯಲ್ಲಿನ ಕೆಲವು ಅಂಶಗಳಿಗೆ ಆಕ್ಷೇಪ ವ್ಯಕ್ತಪಡಿಸಿದ ಪ್ರತಿಪಕ್ಷ ಕಾಂಗ್ರೆಸ್, ಮಸೂದೆಯನ್ನು ಸಂಸತ್ತಿನ ಸ್ಥಾಯಿ ಸಮಿತಿಗೆ ಒಪ್ಪಿಸಿ ನಂತರ ಒಪ್ಪಿಗೆ ಪಡೆಯಬೇಕೆಂದು ಆಗ್ರಹಿಸಿತು. ಆದರೆ ಈ ಪ್ರಸ್ತಾವನೆಯನ್ನು ಸದ್ಯ ನಿರಾಕರಿಸಿರುವ ಕೇಂದ್ರ ಸರ್ಕಾರ, ಚರ್ಚೆಯ ಮೂಲಕ ಮಸೂದೆಗೆ ಅಂಗೀಕಾರ ಪಡೆಯಲು ಪ್ರಯತ್ನಿಸುತ್ತಿದೆ.