ವಿಧಾನಸಭೆಯಲ್ಲಿ ವಿಧೇಯಕ ಮಂಡನೆ ಮಾಡಿ ಒಪ್ಪಿಗೆ ಪಡೆಯುವ ಮೂಲಕ ಜಲ್ಲಿಕಟ್ಟು ಕ್ರೀಡೆಗೆ ಕಾನೂನಿನ ಮಾನ್ಯತೆ ಪಡೆಯಲಾಗಿದೆ.
ಚೆನ್ನೈ(ಜ. 23): ತಮಿಳುನಾಡಿನ ಸಾಂಪ್ರದಾಯಿಕ ಅಚರಣೆಯಾದ ಜಲ್ಲಿಕಟ್ಟು ಮೇಲಿನ ನಿಷೇಧಾಜ್ಞೆ ತೆರವುಗೊಳಿಸಲು ತಮಿಳರು ಪ್ರದರ್ಶಿಸುತ್ತಿರುವ ಒಗ್ಗಟ್ಟು ಫಲಕಾರಿಯಾಗಿದೆ. ನಿನ್ನೆ ತಮಿಳುನಾಡಿನ ಹಲವೆಡೆ ಜಲ್ಲಿಕಟ್ಟು ನಡೆದ ಬೆನ್ನಲ್ಲೇ ಇಂದು ತಮಿಳುನಾಡಿನ ವಿಧಾನಸಭೆಯಲ್ಲಿ ವಿಶೇಷ ಜಲ್ಲಿಕಟ್ಟು ವಿಧೇಯಕ ಮಂಡನೆಯಾಗಿ ಅನುಮೋದನೆ ಪಡೆದಿದೆ. ಇದರೊಂದಿಗೆ ಜಲ್ಲಿಕಟ್ಟುಗೆ ತಮಿಳುನಾಡಿನಲ್ಲಿ ಕಾನೂನು ಮಾನ್ಯತೆ ಸಿಕ್ಕಂತಾಗಿದೆ.
ಇಂದು ಸೋಮವಾರ ನಡೆದ ವಿಧಾನಸಭೆ ವಿಶೇಷ ಅಧಿವೇಶನದಲ್ಲಿ ಮುಖ್ಯಮಂತ್ರಿ ಪನ್ನೀರ್ ಓ ಸೆಲ್ವಂ ಅವರು ಈ ವಿಧೇಯಕವನ್ನು ಮಂಡನೆ ಮಾಡಿದರು. ಅದಾಗಿ ಕೆಲವೇ ನಿಮಿಷಗಳಲ್ಲಿ ಸಭೆಯು ವಿಧೇಯಕಕ್ಕೆ ಸರ್ವಸಮ್ಮತದ ಒಪ್ಪಿಗೆ ಸೂಚಿಸಿತು. ಪ್ರಾಣಿ ಹಿಂಸಾಚಾರ ತಡೆ ಕಾಯ್ದೆಗೆ ಶನಿವಾರದಂದು ತಿದ್ದುಪಡಿ ಮಾಡಿ ಸುಗ್ರೀವಾಜ್ಞೆ ಹೊರಡಿಸಲಾಗಿತ್ತು. ಈಗ ವಿಧಾನಸಭೆಯಲ್ಲಿ ವಿಧೇಯಕ ಮಂಡನೆ ಮಾಡಿ ಒಪ್ಪಿಗೆ ಪಡೆಯುವ ಮೂಲಕ ಜಲ್ಲಿಕಟ್ಟು ಕ್ರೀಡೆಗೆ ಕಾನೂನಿನ ಮಾನ್ಯತೆ ಪಡೆಯಲಾಗಿದೆ.
2014ರಲ್ಲಿ ಸುಪ್ರೀಂಕೋರ್ಟ್ ಜಲ್ಲಿಕಟ್ಟು, ಕಂಬಳ ಸೇರಿದಂತೆ ದೇಶದ ವಿವಿಧೆಡೆ ಹಲವು ಸಾಂಪ್ರದಾಯಿಕ ಕ್ರೀಡೆಗಳನ್ನು ನಿಷೇಧಿಸಿ ಆದೇಶ ಹೊರಡಿಸಿತ್ತು. ಈ ವರ್ಷ ತಮಿಳುನಾಡಿನಲ್ಲಿ ಜಲ್ಲಿಕಟ್ಟು ಪರವಾಗಿ ಜನಬೆಂಬಲ ಸಾಕಷ್ಟು ವ್ಯಕ್ತವಾಗಿದೆ. ಕೇಂದ್ರ ಸರಕಾರ ಕೂಡ ತಮಿಳುನಾಡಿನ ಕೂಗಿಗೆ ಪೂರಕವಾಗಿ ಸ್ಪಂದಿಸಿದೆ. ತಮಿಳುನಾಡಿನಲ್ಲಿ ವಿಧೇಯಕದ ಮೂಲಕ ಜಲ್ಲಿಕಟ್ಟು ಕ್ರೀಡೆಗೆ ಕಾನೂನು ಮಾನ್ಯತೆ ಕೊಡಬಹುದು ಎಂದು ಸೂಚಿಸಿದ್ದೇ ಕೇಂದ್ರ ಸರಕಾರ.
ಹಿಂಸಾಚಾರಕ್ಕೆ ತಿರುಗಿದ ಪ್ರತಿಭಟನೆ:
ಜಲ್ಲಿಕಟ್ಟು ಪರವಾಗಿ ಮರೀನಾ ಬೀಚ್ ಸುತ್ತಮುತ್ತ ನಡೆಯುತ್ತಿರುವ ವಿದ್ಯಾರ್ಥಿಗಳ ಬೃಹತ್ ಪ್ರತಿಭಟನೆ ಸೋಮವಾರ ಹಿಂಸಾಚಾರಕ್ಕೆ ತಿರುಗಿತು. ಶಾಂತಿಯುತವಾಗಿ ಪ್ರತಿಭಟನೆ ಮಾಡುತ್ತಿದ್ದವರ ಮೇಲೆ ಪೊಲೀಸರು ಲಾಠಿ ಚಾರ್ಜ್ ಮಾಡಿದ್ದು ವಿದ್ಯಾರ್ಥಿಗಳನ್ನು ಕೆರಳಿಸಿತೆನ್ನಲಾಗಿದೆ. ಪೊಲೀಸ್ ವಾಹನ ಮತ್ತು ಬಸ್ಸುಗಳನ್ನು ಪ್ರತಿಭಟನಾಕಾರರು ಜಖಂಗೊಳಿಸಿದ ಘಟನೆಗಳು ಅಲ್ಲಲ್ಲಿ ವರದಿಯಾಗಿವೆ.
