ರಾಜ್ಯ ಸರ್ಕಾರಿ ನೌಕರರ ಮಕ್ಕಳು ಕಡ್ಡಾಯವಾಗಿ ಸರ್ಕಾರಿ ಶಾಲೆಗೆ ತಮ್ಮ ಮಕ್ಕಳನ್ನು ಕಳುಹಿಸಬೇಕೆಂಬ ಪ್ರಸ್ತಾಪವಿರುವ ಖಾಸಗಿ ವಿಧೇಯಕವನ್ನು ವಿಧಾನ ಪರಿಷತ್ ಸದಸ್ಯ ರಘು ಆಚಾರ್ ಸೋಮವಾರ ಅಥವಾ ಮಂಗಳವಾರ ಮಂಡಿಸುತ್ತಿದ್ದಾರೆ ಎಂದು ಪ್ರಾಥಮಿಕ ಶಿಕ್ಷಣ ಸಚಿವ ತನ್ವೀರ್ ಸೇಠ್ ಹೇಳಿದರು.G
ಮುದ್ದೇಬಿಹಾಳ: ರಾಜ್ಯ ಸರ್ಕಾರಿ ನೌಕರರ ಮಕ್ಕಳು ಕಡ್ಡಾಯವಾಗಿ ಸರ್ಕಾರಿ ಶಾಲೆಗೆ ತಮ್ಮ ಮಕ್ಕಳನ್ನು ಕಳುಹಿಸಬೇಕೆಂಬ ಪ್ರಸ್ತಾಪವಿರುವ ಖಾಸಗಿ ವಿಧೇಯಕವನ್ನು ವಿಧಾನ ಪರಿಷತ್ ಸದಸ್ಯ ರಘು ಆಚಾರ್ ಸೋಮವಾರ ಅಥವಾ ಮಂಗಳವಾರ ಮಂಡಿಸುತ್ತಿದ್ದಾರೆ ಎಂದು ಪ್ರಾಥಮಿಕ ಶಿಕ್ಷಣ ಸಚಿವ ತನ್ವೀರ್ ಸೇಠ್ ಹೇಳಿದರು.
ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಒಂದು ವೇಳೆ ಈ ವಿಧೇಯಕಕ್ಕೆ ವಿಧಾನಸಭೆ ಹಾಗೂ ವಿಧಾನಪರಿಷತ್‌ನಲ್ಲಿ ಅನುಮೋದನೆ ಸಿಕ್ಕರೆ, ಈ ನಿಯಮ ಜಾರಿಗೆ ಕಾನೂನು ರೂಪಿಸಲಾಗುತ್ತದೆ. ವಿಧೇಯಕ ಮಂಡನೆಯಾದ ಮೇಲೆ ಕಾನೂನು ಜಾರಿ ಮಾಡುವುದು ಕಷ್ಟಸಾಧ್ಯವಲ್ಲ. ಕಾನೂನು ತಂದ ಮೇಲೆ ಅದು ಜಾರಿಗೆ ಬರಬೇಕು. ಘೋಷಣೆಗೂ ನೈಜ ವ್ಯವಸ್ಥೆಗೂ ಬದಲಾವಣೆ ಆಗಬಾರದು. ಈ ವಿಧೇಯಕ ಮಂಡನೆಯಾದರೆ ಏನಾಗುತ್ತದೆ ಎಂಬುದನ್ನು ಕಾದು ನೋಡೋಣ ಎಂದು ಹೇಳಿದರು.
ಈ ಕಾಯ್ದೆ ಜಾರಿಯಾದಲ್ಲಿ ಮುಖ್ಯ ಮಂತ್ರಿಗಳು, ಕ್ಯಾಬಿನೇಟ್ ದರ್ಜೆ ಸಚಿವರು, ಶಾಸಕರು, ವಿಧಾನಪರಿಷತ್ ಸದಸ್ಯರು, ಐಎಎಸ್, ಐಪಿಎಸ್ ಅಧಿಕಾರಿಗಳು ಸೇರಿದಂತೆ ರಾಜ್ಯದ ಎಲ್ಲ ಸರ್ಕಾರಿ ನೌಕರರು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆ ಯಲ್ಲೇ ಓದಿಸಬೇಕಾಗುತ್ತದೆ ಎಂದು ಹೇಳಿದರು.
ಪರೀಕ್ಷೆ ಕರಡು ಪಟ್ಟಿ ಕೊಟ್ಟಿದ್ದೇವೆ: ಇದು ಚುನಾವಣೆ ವರ್ಷ. ಶಿಕ್ಷಕರನ್ನು ಚುನಾವಣೆ ಸಹಿತ ಇನ್ನಿತರ ಕೆಲಸಕ್ಕೆ ಬಳಸಿಕೊಳ್ಳಲಾಗುತ್ತದೆ. ಅಲ್ಲದೆ, ಪ್ರಚಾರ ಶುರುವಾದ ಮೇಲೆ ಮಕ್ಕಳಿಗೆ ತೊಂದರೆ
ಆಗಬಾರದು ಎಂದು ನಿರ್ಧರಿಸಿ ಮಾ.1ರಿಂದ 6 ಪಿಯುಸಿ, ಮಾ.23ರಿಂದ ಏ.4 ಎಸ್ಸೆಸ್ಸೆಲ್ಸಿ ಪರೀಕ್ಷೆ ನಡೆಸಲು ಕರಡು ಪಟ್ಟಿ ಕೊಟ್ಟಿದ್ದೇವೆ. ಏಪ್ರಿಲ್ ಕೊನೆಗೆ ಫಲಿತಾಂಶ ಪ್ರಕಟಿಸಲು ಸಿದ್ಧರಾಗಿದ್ದೇವೆ. ನ.24ರವರೆಗೆ ಕಾಲಾವಕಾಶ ಇದ್ದು, ಅಲ್ಲಿಯವರೆಗೂ ಬರುವ ಆಕ್ಷೇಪಣೆ ಪರಿಗಣಿಸಿ ಬಳಿಕ ಅಂತಿಮ ನೋಟಿಫಿಕೇಶನ್ ಹೊರಡಿಸಲಾಗುತ್ತದೆ ಎಂದು ಇದೇ ವೇಳೆ ತನ್ವೀರ್ ಸೇಠ್ ಹೇಳಿದರು.
ಶಿಕ್ಷಕರಿಗಷ್ಟೇ ಕ್ಯುಎಸ್‌ಕೆ: ಮಕ್ಕಳ ಕಲಿಕಾ ಸಾಮರ್ಥ್ಯ ಮಾಪನ (ಕ್ಯುಎಸ್‌ಕೆ) ಮಾಡಲು ಈ ವರ್ಷ 4-9 ತರಗತಿಯ 28 ಲಕ್ಷ ಮಕ್ಕಳಿಗೆ ಓಎಂಆರ್ ಸೀಟ್‌ನಲ್ಲಿ ಪರೀಕ್ಷೆ ಬರೆಯುವ ವ್ಯವಸ್ಥೆ ಜಾರಿಗೊಳಿಸಿದ್ದು, ಇದು ರಾಷ್ಟ್ರದಲ್ಲೇ ಮೊದಲು. ಶಿಕ್ಷಕರು ಮಕ್ಕಳಿಗೆ ಏನು ಕಲಿಸಿದ್ದಾರೆ ಎನ್ನುವುದನ್ನು ಗೊತ್ತುಪಡಿಸುವ ಇರಾದೆ ಅದರಲ್ಲಿದೆ. ಅದು ಶಿಕ್ಷಕರ ಪರೀಕ್ಷೆಯೇ ಹೊರತು ಮಕ್ಕಳ ಪರೀಕ್ಷೆ ಅಲ್ಲ ಎಂದು ಸಮರ್ಥಿಸಿಕೊಂಡರು.
