Asianet Suvarna News Asianet Suvarna News

ಬೈಕ್ ಸವಾರರೇ ಎಚ್ಚರ : ಒಂದು ವೇಳೆ ಹೀಗಾದ್ರೆ ಸಿಗಲ್ಲ ವಿಮೆ ಹಣ

ಬೈಕ್ ಸವಾರರೇ ಎಚ್ಚರ. ಒಂದು ವೇಳೆ ನೀವು ಹೀಗೆ ಮಾಡಿದ್ರೆ ನಿಮಗೆ ವಿಮೆ ಹಣವೂ ಕೂಡ ಸಿಗುವುದಿಲ್ಲ. 

Bike Riders Be Aware Of This High Court Order
Author
Bengaluru, First Published Oct 20, 2018, 8:56 AM IST

ಬೆಂಗಳೂರು :  ಚಾಲನಾ ಪರವಾನಗಿ ಹೊಂದಿದ್ದರೂ ಮತ್ತೊಬ್ಬರ ದ್ವಿಚಕ್ರ ವಾಹನ ಚಾಲನೆ ಮಾಡುವಾಗ ಚಾಲಕನ ಸ್ವಯಂ ತಪ್ಪಿನಿಂದ ಅಪಘಾತ ಏರ್ಪಟ್ಟಸಂದರ್ಭದಲ್ಲಿ ಚಾಲಕನಾಗಲಿ ಹಾಗೂ ಆತನ ಕುಟುಂಬದ ಸದಸ್ಯರಾಗಲಿ ಥರ್ಡ್‌ ಪಾರ್ಟಿ ವಿಮೆಯ ಪರಿಹಾರ ಕೋರಲು ಅವಕಾಶವಿಲ್ಲ ಎಂದು ಹೈಕೋರ್ಟ್‌ ಆದೇಶಿಸಿದೆ.

ಅನ್ಯರ ದ್ವಿಚಕ್ರ ವಾಹನ ತೆಗೆದುಕೊಂಡು ಹೋಗಿ ಸ್ವಯಂ ಅಪಘಾತಕ್ಕೀಡಾಗಿ ಸಾವನ್ನಪ್ಪಿದ ಅಥವಾ ಗಾಯಗೊಂಡ ಸಂದರ್ಭದಲ್ಲಿ ಚಾಲಕ ಹಾಗೂ ಆತನ ಕುಟುಂಬದ ಸದಸ್ಯರು, ವಾಹನ ಮಾಲೀಕ ಅಥವಾ ವಿಮಾ ಕಂಪನಿಯಿಂದ ಮೂರನೇ ವ್ಯಕ್ತಿಯ ವಿಮೆ ಪರಿಹಾರವನ್ನು ಕ್ಲೇಮು ಮಾಡಲಾಗದು ಎಂದು ಹೈಕೋರ್ಟ್‌ ಆದೇಶಿಸಿದೆ.

ಅನ್ಯರ ದ್ವಿಚಕ್ರ ವಾಹನ ತೆಗೆದುಕೊಂಡು ಹೋಗಿ ಅಪಘಾತಕ್ಕೀಡಾದ ಪ್ರಕರಣಕ್ಕೆ ಸಂಬಂಧಿಸಿದ ಮೂರು ಪ್ರತ್ಯೇಕ ಅರ್ಜಿಗಳ ವಿಚಾರಣೆ ನಡೆಸಿದ ಹೈಕೋರ್ಟ್‌ ಈ ಆದೇಶ ಹೊರಡಿಸಿದೆ.

ಸಾವಿಗೀಡಾದ 3 ಜನರ ಕುಟುಂಬದ ಅರ್ಜಿ:  ಪ್ರತ್ಯೇಕ ಮೂರು ಪ್ರಕರಣಗಳಲ್ಲಿ ಮೂರು ವ್ಯಕ್ತಿಗಳು ಬೇರೊಬ್ಬರ ದ್ವಿಚಕ್ರ ವಾಹನಗಳನ್ನು ಚಾಲನೆ ಮಾಡುತ್ತಿದ್ದ ಸಂದರ್ಭದಲ್ಲಿ ಸ್ವಯಂ ಅಪರಾಧಕ್ಕೆ ಒಳಗಾಗಿ ಸಾವನ್ನಪ್ಪಿದ್ದರು. ಇದಕ್ಕೆ ಪರಿಹಾರ ನೀಡಲು ವಾಹನ ಮಾಲೀಕ ಅಥವಾ ವಿಮಾ ಕಂಪನಿಗೆ ಆದೇಶಿಸಬೇಕು ಎಂದು ಕೋರಿ ಚಾಲಕರ ಕುಟುಂಬದ ಸದಸ್ಯರು ಮೋಟಾರು ವಾಹನ ಅಪಘಾತ ಕ್ಲೇಮು ನ್ಯಾಯಾಧಿಕರಣಕ್ಕೆ (ಎವಿಸಿಟಿ ಕೋರ್ಟ್‌) ಅರ್ಜಿ ಸಲ್ಲಿಸಿದ್ದರು.

ದ್ವಿಚಕ್ರ ವಾಹನ ಅಪಘಾತಕ್ಕೀಡಾದ ಸಮಯದಲ್ಲಿ ಚಾಲಕರು ಅಧಿಕೃತ ಚಾಲನಾ ಪರವಾನಗಿ ಹೊಂದಿದ್ದರು. ವಾಹನದ ವಿಮೆಯೂ ಚಾಲ್ತಿಯಲ್ಲಿತ್ತು. ಹೀಗಾಗಿ, ದ್ವಿಚಕ್ರ ವಾಹನ ಮಾಲೀಕ ಅಥವಾ ವಿಮಾ ಕಂಪನಿಯಿಂದ ಪರಿಹಾರ ಕೊಡಿಸಬೇಕು ಎಂಬುದು ಆ ಅರ್ಜಿಗಳ ಕೋರಿಕೆಯಾಗಿತ್ತು.

ಆದರೆ, ಈ ಪ್ರಕರಣದಲ್ಲಿ ದ್ವಿಚಕ್ರ ವಾಹನ ಚಾಲಕನು ಮೂರನೇ ಪಕ್ಷಗಾರರಲ್ಲ ಮತ್ತು ವಾಹನಕ್ಕೆ ಮಾಡಿಸಿರುವ ವಿಮಾ ಪಾಲಿಸಿಯು, ಮೂರನೇ ಪಕ್ಷಗಾರ ಅಥವಾ ಮಾಲೀಕ/ ಚಾಲಕ ರಿಸ್ಕ್‌ ಕವರ್‌ (ಅಘಘಾತಕ್ಕೊಳಗಾದ ಪರಿಹಾರ ಸೌಲಭ್ಯ) ಹೊಂದಿಲ್ಲ. ಹೀಗಾಗಿ ಅರ್ಜಿದಾರರ ಮನವಿ ಪರಿಗಣಿಸಿ ಅಪಘಾತ ಸಂತ್ರಸ್ತರು ಅಥವಾ ಸಂತ್ರಸ್ತರ ಕುಟುಂಬಕ್ಕೆ ಪರಿಹಾರ ನೀಡಲು ವಾಹನ ಮಾಲೀಕ ಹಾಗೂ ವಿಮಾ ಕಂಪನಿಗೆ ಆದೇಶಿಸಲು ಸಾಧ್ಯವಿಲ್ಲ ಎಂದು ತಿಳಿಸಿ ಅರ್ಜಿಗಳನ್ನು ವಜಾಗೊಳಿಸಿ ಆದೇಶಿಸಿತ್ತು.

ಈ ಆದೇಶಗಳನ್ನು ಪ್ರಶ್ನಿಸಿ ಅಪಘಾತಕ್ಕೀಡಾದವರ ಕುಟುಂಬದ ಸದಸ್ಯರು ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು. ಈ ಮೂರು ಪ್ರಕರಣಗಳನ್ನು ಒಟ್ಟಿಗೆ ವಿಚಾರಣೆ ನಡೆಸಿದ ಹೈಕೋರ್ಟ್‌, ಎಲ್ಲ ಮೇಲ್ಮನವಿಗಳನ್ನು ವಜಾಗೊಳಿಸಿ ಎಂವಿಸಿಟಿ ಆದೇಶ ಎತ್ತಿಹಿಡಿದಿದೆ.

ಸ್ವಯಂ ತಪ್ಪಿನಿಂದ ಆದ ಅಪಘಾತಗಳು:  ಈ ಮೂರು ಅಪಘಾತ ಪ್ರಕರಣಗಳಲ್ಲಿ ದ್ವಿಚಕ್ರ ವಾಹನವು ಉತ್ತಮ ನಿರ್ವಹಣೆಯಲ್ಲಿ ಇರಲಿಲ್ಲ ಮತ್ತು ಬೈಕ್‌ ಚಾಲಕರು ವಾಹನ ಮಾಲೀಕರ ಉದ್ಯೋಗಿಯೂ ಆಗಿರಲಿಲ್ಲ. ಮೇಲಾಗಿ ಈ ಮೂರು ಪ್ರಕರಣಗಳಲ್ಲಿಯೂ ಚಾಲಕನ ಸ್ವಯಂ ತಪ್ಪಿನಿಂದ ಅಪಘಾತ ಸಂಭವಿಸಿದೆ. ಬೇರೊಂದು ವಾಹನವು ಅಪಘಾತ ಮಾಡಿಲ್ಲ. ಆದ್ದರಿಂದ ಚಾಲಕ ಅಧಿಕೃತ ಪರವಾನಗಿ ಹೊಂದಿದ್ದರೂ, ಮಾಲೀಕರು ವಾಹನ ವಿಮೆ ಹೊಂದಿದ್ದರೂ, ದ್ವಿಚಕ್ರ ವಾಹನವು ಸ್ವಯಂ ಆಗಿ ಅಪಘಾತಗೊಂಡಾಗ ಚಾಲಕ ಸಾವನ್ನಪ್ಪಿದರೆ ಅಥವಾ ಗಾಯಗೊಂಡು ಗಂಭೀರ ಪರಿಣಾಮ ಉಂಟಾಗಿದ್ದ ಸಂದರ್ಭದಲ್ಲಿ ಚಾಲಕ ಆ ವಾಹನದ ಮಾಲೀಕನಾಗಿರದಿದ್ದರೆ ಮೂರನೇ ಪಕ್ಷ ವರ್ಗದಡಿ ವಾಹನ ಮಾಲೀಕ ಅಥವಾ ವಿಮಾ ಕಂಪನಿಯಿಂದ ಪರಿಹಾರ ಕ್ಲೇಮು ಮಾಡಲಾಗುವುದಿಲ್ಲ ಎಂದು ಹೈಕೋರ್ಟ್‌ ಆದೇಶದಲ್ಲಿ ತಿಳಿಸಿದೆ.

ಅಲ್ಲದೆ, ಒಂದೊಮ್ಮೆ ವಿಮಾ ಪಾಲಿಸಿಯಲ್ಲಿ ವಾಹನ ಮಾಲೀಕರು ಸ್ವಯಂ ಹಾನಿ ಮತ್ತು ಮಾಲೀಕ/ ಚಾಲಕನ ಕವರ್‌ ಪ್ರೀಮಿಯಂ ಪಾವತಿಸಿದ್ದರೆ ಮೂರನೇ ಪಕ್ಷಗಾರ ವರ್ಗದಡಿ ಪರಿಹಾರ ಕ್ಲೇಮು ಮಾಡಬಹುದಿತ್ತು. ಮೇಲಾಗಿ ಮೂರು ಪ್ರಕರಣಗಳಲ್ಲಿಯೂ ದ್ವಿಚಕ್ರ ವಾಹನ ನಿರ್ವಹಣೆ ಉತ್ತಮವಾಗಿರಲಿಲ್ಲ ಮತ್ತು ಚಾಲಕನು ವಾಹನ ಮಾಲೀಕನ ಉದ್ಯೋಗಿಯಾಗಿದ್ದ ಎಂದು ಅಂಶವನ್ನು ಅರ್ಜಿದಾರನೂ ಎತ್ತಿಲ್ಲ. ದ್ವಿಚಕ್ರ ವಾಹನದ ಅಸಮರ್ಪಕ ನಿರ್ವಹಣೆ ಇದ್ದಾಗ ಚಾಲಕನ ಸ್ವಯಂ ತಪ್ಪಿನಿಂದ ಅಪಘಾತ ಸಂಭವಿಸಿದ್ದರೆ ಅಥವಾ ಚಾಲಕ ವಾಹನ ಮಾಲೀಕನ ಉದ್ಯೋಗಿಯಾಗಿದ್ದರೆ ಆಗ ಪರಿಹಾರ ನೀಡುವುದು ಮಾಲಿಕನ ಹೊಣೆಯಾಗಿರುತ್ತಿತ್ತು ಎಂದು ಹೈಕೋರ್ಟ್‌ ಆದೇಶದಲ್ಲಿ ಹೇಳಿದೆ.

ವೆಂಕಟೇಶ್‌ ಕಲಿಪಿ

Follow Us:
Download App:
  • android
  • ios