ಪಾಟ್ನಾ(ಆ.24): ಸರ್ಕಾರಿ ಉದ್ಯೋಗಕ್ಕಾಗಿ ಆಸೆಪಡುವ ಜೀವಗಳು ಅದೆಷ್ಟಿವೆಯೋ ನಮ್ಮ ದೇಶದಲ್ಲಿ? ಸರ್ಕಾರಿ ಉದ್ಯೋಗಕ್ಕಾಗಿ ಪರಿಶ್ರಮಪಡುವ ಅಸಂಖ್ಯಾತ ಯುವಕ/ಯುವತಿಯರು ಹಗಲಿರುಳು ಕಷ್ಟಪಡುತ್ತಿದ್ದಾರೆ.

ಆದರೆ ಇಲ್ಲೋರ್ವ ಸರ್ಕಾರಿ ಇಂಜಿನಿಯರ ಕಳೆದ 30 ವರ್ಷಗಳಿಂದ ಒಂದಲ್ಲ, ಬರೋಬ್ಬರಿ ಮೂರು ಹುದ್ದೆಗಳ ವೇತನ ಪಡೆಯುತ್ತಾ ಬೊಕ್ಕಸಕ್ಕೆ ಮೋಸ ಮಾಡಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಹೌದು, ಬಿಹಾರದ ಸರ್ಕಾರಿ ಇಂಜಿನಿಯರ್ ಸುರೇಶ್ ರಾಮ್ ಎಂಬಾತ ವಿವಿಧ ಇಲಾಖೆಗಳಲ್ಲಿ ಕಳೆದ 30 ವರ್ಷಗಳಿಂದ ಕೆಲಸ ಮಾಡುತ್ತಿದ್ದು, ಒಟ್ಟು ಮೂರು ಹುದ್ದೆಗಳ ಸಂಬಳ ಪಡೆಯುತ್ತಿದ್ದಾನೆ.

ಮೊದಲು ರಸ್ತೆ ನಿರ್ಮಾಣ ಇಲಾಖೆಯಲ್ಲಿ ಸಹಾಯಕ ಇಂಜಿನಿಯರ್ ಆಗಿದ್ದ ಸುರೇಶ್ ರಾಮ್, ಬಳಿಕ ನೀರು ಸರಬರಾಜು ಇಲಾಖೆಗೆ ವರ್ಗಗೊಂಡಿದ್ದ. ಅದಾದ ಬಳಿಕ ಮತ್ತೆ ರಸ್ತೆ ನಿರ್ಮಾಣ ಇಲಾಖೆಗೆ ಸುರೇಶ್‌ನನ್ನು ವರ್ಗ ಮಾಡಲಾಗಿತ್ತು.

ಆಶ್ಚರ್ಯ ಎಂದರೆ ಈ ಮೂರು ಹುದ್ದೆಗಳ ವೇತನ ಪಡೆಯುತ್ತಿದ್ದ ಸುರೇಶ್ ಕಾಲಕಾಲಕ್ಕೆ ಪ್ರಮೋಷನ್ ಕೂಡ ಪಡೆದಿದ್ದಾನೆ. ಆದರೆ ರಾಜ್ಯ ಸರ್ಕಾರ ಸರ್ಕಾರಿ ಅಧಿಕಾರಿಗಳ ಮಾಹಿತಿ ಸಂಗ್ರಹಣೆಗಾಗಿ ಇತ್ತೀಚಿಗೆ ಪರಿಚಯಿಸಿರುವ ಸಮಗ್ರ ಹಣಕಾಸು ನಿರ್ವಹಣಾ ವ್ಯವಸ್ಥೆ(CFMS)ಯಿಂದಾಗಿ ಸುರೇಶ್ ಸಿಕ್ಕಿ ಬಿದ್ದಿದ್ದಾನೆ.

CFMSನಲ್ಲಿ ಸರ್ಕಾರಿ ಅಧಿಕಾರಿಗಳು ತಮ್ಮ ಆಧಾರ್, ಪ್ಯಾನ್ ಕಾರ್ಡ್ ಸೇರಿದಂತೆ ಇತರ ದಾಖಲೆಗಳನ್ನು ಒದಗಿಸಬೇಕು. ಆಗ ಸುರೇಶ್ ರಾಮ್ ಮಾಡುತ್ತಿದ್ದ ಮೋಸ ಬೆಳಕಿಗೆ ಬಂದಿದೆ.

ಸದ್ಯ ಮಧುಸೂಧನ್ ಕುಮಾರ್ ಕರಣ್ ಎಂಬುವವರು ನೀಡಿರುವ ದೂರಿನ ಅನ್ವಯ ಕಿಶನ್‌ಗಂಜ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತಲೆಮರೆಸಿಕೊಂಡಿರುವ ಸುರೇಶ್ ರಾಮ್'ಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ.