ಪಟನಾ(ಜೂ.30): ಮೆದುಳು ಉರಿಯೂತ ಕಾಯಿಲೆ(ಅಕ್ಯೂಟ್‌ ಎನ್ಸೆಫಲಿಟೀಸ್‌ ಸಿಂಡ್ರೋಮ್‌)ಯಿಂದ ಬಿಹಾರದ 160ಕ್ಕೂ ಹೆಚ್ಚು ಮಕ್ಕಳು ಬಲಿಯಾದ ದುರಂತ ಘಟನೆಗೆ ಕಲ್ನಾರು ಶೀಟಿನ ಮನೆಗಳೇ ಕಾರಣವಿರಬಹುದು ಎಂದು ಏಮ್ಸ್‌ ವೈದ್ಯರ ತಂಡ ಸುಳಿವು ನೀಡಿದೆ.

ಬಿಹಾರದಲ್ಲೇಕೆ ಮೆದುಳು ಜ್ವರ ಇನ್ನೂ ಇದೆ?

ದೆಹಲಿಯ ಪ್ರತಿಷ್ಠಿತ ಏಮ್ಸ್‌ ಆಸ್ಪತ್ರೆಯ ವೈದ್ಯರ ತಂಡವು ಮೆದುಳು ಉರಿಯೂತ ಕಾಯಿಲೆಯಿಂದ ಹೆಚ್ಚು ಮಕ್ಕಳು ಬಲಿಯಾದ ಬಿಹಾರದ ಮುಜಾಫರ್‌ಪುರದ ಶ್ರೀ ಕೃಷ್ಣ ವೈದ್ಯಕೀಯ ಕಾಲೇಜಿಗೆ ಆಗಮಿಸಿ ಹಲವು ಮಕ್ಕಳಿಗೆ ಚಿಕಿತ್ಸೆ ನೀಡಿದೆ. ಅಲ್ಲದೆ, ಈ ಭಾಗದಲ್ಲಿ ಸಾವಿಗೀಡಾದ ಹಲವು ಮಕ್ಕಳ ನಿವಾಸಗಳಿಗೆ ತೆರಳಿ ಅಧ್ಯಯನ ಕೈಗೊಂಡಿದೆ. ಈ ಪ್ರಕಾರ ಮಕ್ಕಳ ಸಾವಿಗೆ ಕಲ್ನಾರು ಶೀಟುಗಳ ಮನೆಗಳು ಸಹ ಕಾರಣ ಎಂದು ವೈದ್ಯರು ಪ್ರತಿಪಾದಿಸಿದ್ದಾರೆ.

ಪ್ರತಿ ಬಾರಿ ಬೇಸಿಗೆಯಲ್ಲೂ ನೂರಾರು ಕಂದಮ್ಮಗಳು ಏಕೆ ಸಾಯುತ್ತವೆ?

ಈ ಬಗ್ಗೆ ಪ್ರತಿಕ್ರಿಯಿಸಿದ ಏಮ್ಸ್‌ ವೈದ್ಯರ ತಂಡದ ವೈದ್ಯರಾದ ಡಾ.ಹರ್ಜಿತ್‌ ಸಿಂಗ್‌ ಭಟ್ಟಿಅವರು, ‘ಅಪೌಷ್ಟಿಕಾಂಶ ಸೇರಿದಂತೆ ಇನ್ನಿತರ ಅಂಶಗಳ ಜೊತೆಗೆ, ಕಲ್ನಾರು ಶೀಟುಗಳ ಮನೆಗಳು ಸಹ ಮಕ್ಕಳ ಸಾವಿಗೆ ಕಾರಣ ಎಂಬುದನ್ನು ಪತ್ತೆ ಹಚ್ಚಲಾಗಿದೆ. ಕಲ್ನಾರು ಶೀಟುಗಳ ಮನೆಗಳಲ್ಲಿ ರಾತ್ರಿ ಹೊತ್ತಿನಲ್ಲೂ ತಾಪಮಾನ ಕಡಿಮೆಯಾಗಲ್ಲ. ಅಲ್ಲದೆ, ಇಂಥ ನಿವಾಸಗಳಲ್ಲಿ ವಾಸವಾದ ಹಲವು ಪೋಷಕರು ಸಹ ಆಸ್ಪತ್ರೆಗಳಿಗೆ ದಾಖಲಾಗಿದ್ದಾರೆ’ ಎಂದು ತಿಳಿಸಿದ್ದಾರೆ.