ಲಕ್ನೋ (ಜೂ. 26):  ಉತ್ತರದ ಕೆಲ ರಾಜ್ಯಗಳನ್ನು ಪ್ರತಿ ವರ್ಷ ಬೇಸಿಗೆಯಲ್ಲಿ ಕಾಡುವ ಎಕ್ಯೂಟ್‌ ಎನ್ಸೆಫಲಿಟೀಸ್‌ ಸಿಂಡ್ರೋಮ್‌ (ಎಇಎಸ್‌) ಅಥವಾ ಸ್ಥಳೀಯರ ಬಾಯಿಯಲ್ಲಿ ಮೆದುಳು ಜ್ವರ ಎಂದು ಕರೆಸಿಕೊಳ್ಳುವ ರೋಗಕ್ಕೆ ಈ ಬಾರಿ ಬಿಹಾರವೊಂದರಲ್ಲೇ 150 ಕ್ಕೂ ಹೆಚ್ಚು ಮಕ್ಕಳು ಬಲಿಯಾಗಿದ್ದಾರೆ.

ನೆರೆಯ ಉತ್ತರ ಪ್ರದೇಶ, ಛತ್ತೀಸ್‌ಗಢದಲ್ಲೂ ಈ ರೋಗ ಕಾಣಿಸಿಕೊಳ್ಳುತ್ತಿದೆ. ಈ ಪ್ರಕರಣದ ಭೀಕರತೆಯನ್ನು ಅರಿತ ಸುಪ್ರೀಂಕೋರ್ಟ್‌ ಈ ಬಗ್ಗೆ ವರದಿ ನೀಡುವಂತೆ ಬಿಹಾರ ಮತ್ತು ಕೇಂದ್ರ ಸರ್ಕಾರಕ್ಕೆ ನೋಟಿಸ್‌ ಜಾರಿ ಮಾಡಿದೆ.

ಹಸಿವು ಕೂಡ ಈ ರೋಗಕ್ಕೆ ಕಾರಣ ಎಂಬುದು ಇದರ ಇನ್ನೊಂದು ಭೀಕರ ಮುಖ. ಹೊಟ್ಟೆಗಿಲ್ಲದ ಮಕ್ಕಳು ಲಿಚಿ ಹಣ್ಣು ತಿನ್ನುವುದರಿಂದ ಈ ರೋಗ ಬರುತ್ತಿದೆ ಎಂದೂ ಹೇಳಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಜಪಾನೀಸ್‌ ಎನ್ಸೆಫಲಿಟೀಸ್‌ ಕುರಿತ ಸಮಗ್ರ ವಿವರ ಇಲ್ಲಿದೆ.

ಏನಿದು ಎಕ್ಯೂಟ್‌ ಎನ್ಸೆಫಲಿಟೀಸ್‌ ಸಿಂಡ್ರೋಮ್‌?

ಹಲವು ದಶಕಗಳಿಂದ ಉತ್ತರ ಭಾರತವನ್ನು ಬೇಸಿಗೆಯ ಕೊನೆಯಲ್ಲಿ ಕಾಡುತ್ತಿರುವ ರೋಗವಿದು. ಎನ್ಸೆಫಲಿಟೀಸ್‌ ಎಂದರೆ ಮೆದುಳಿನ ಊತ. ಇದೊಂದು ನರ ರೋಗ. ಅತಿ ಚಿಕ್ಕ ವಯಸ್ಸಿನವರಲ್ಲಿ ಮತ್ತು ವಯೋವೃದ್ಧರಲ್ಲಿ ಹೆಚ್ಚಾಗಿ ಕಂಡುಬರುತ್ತದೆ.

ದೇಹದ ಉಷ್ಣಾಂತ ತೀವ್ರಗತಿಯಲ್ಲಿ ಏರಿಕೆಯಾಗುವುದು ಮತ್ತು ತೀವ್ರ ತಲೆನೋವು ಇದರ ಪ್ರಮುಖ ಲಕ್ಷಣ. ಜೊತೆಗೆ ಗೊಂದಲ, ನಿಶ್ಶಕ್ತಿ, ದಿಕ್ಕು ತೋಚದಂತಾಗುವುದು, ಜ್ವರ, ತಲೆತಿರುಗುವಿಕೆ, ವಾಕರಿಕೆ, ಆಯಾಸ, ಕಿವಿ ಕೇಳದಿರುವುದು, ಪ್ರಜ್ಞೆ ತಪ್ಪುವುದು, ದೃಷ್ಟಿದುರ್ಬಲತೆ, ಪಾಶ್ರ್ವವಾಯು ಕೂಡ ಕಾಣಿಸಿಕೊಳ್ಳುತ್ತದೆ. 15 ವರ್ಷಕ್ಕಿಂತ ಕಡಿಮೆ ವಯಸ್ಸಿನವರಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ಸರಿಯಾದ ಚಿಕಿತ್ಸೆ ಸಿಗದಿದ್ದರೆ ಸಾವು ಸಂಭವಿಸುತ್ತದೆ.

ಜಪಾನ್‌ಗೂ ಇದಕ್ಕೂ ಏನು ಸಂಬಂಧ?

ಜಪಾನ್‌ ಎನ್ಸೆಫಲಿಟೀಸ್‌ (ಜೆಇ) ಎಂಬ ವೈರಸ್‌ ಭಾರತದಲ್ಲಿ ಈ ರೋಗ ಕಾಣಿಸಿಕೊಳ್ಳಲು ಮೂಲ ಕಾರಣ. 5ರಿಂದ 35% ರೋಗಕ್ಕೆ ಜಪಾನಿನ ವೈರಸ್‌ ಕಾರಣ ಎಂದು ಆರೋಗ್ಯ ಸಚಿವಾಲಯ ಅಂದಾಜಿಸಿದೆ.

ಬ್ಯಾಕ್ಟೀರಿಯಾ, ಫಂಗಸ್‌, ಪರಾವಲಂಬಿ ಜೀವಿಗಳು, ರಾಸಾಯನಿಕಗಳು ಮತ್ತು ಜೀವಾಣುಗಳಿಂದಲೂ ಈ ರೋಗ ಹರಡುತ್ತದೆ. ಟೈಫಸ್‌, ದಡಾರ, ಸಿಡುಬು, ನಿಫಾ ಮತ್ತು ಝಿಕಾ ವೈರಸ್‌ ಕೂಡ ಮೆದುಳು ಜ್ವರಕ್ಕೆ ಕಾರಣ. ಆದರೆ ನಿರ್ದಿಷ್ಟಕಾರಣ ಏನು ಎಂಬುದು ಇದುವರೆಗೂ ತಿಳಿದಿಲ್ಲ.

ಮೇ ಮತ್ತು ಜೂನ್‌ ತಿಂಗಳಲ್ಲಿ ಹೆಚ್ಚು

ಈ ರೋಗವು ಮಾನ್ಸೂನ್‌ ಪ್ರಾರಂಭಕ್ಕೂ ಮೊದಲು ಅಂದರೆ ಅತಿ ಹೆಚ್ಚು ಬಿಸಿಲು ಇರುವಾಗ ಪ್ರಾರಂಭವಾಗುತ್ತದೆ. ಅಂದರೆ ಮೇ ಮತ್ತು ಜೂನ್‌ ತಿಂಗಳಲ್ಲಿ ಆರಂಭವಾಗಿ ಮಳೆ ಆರಂಭವಾದಂತೆ ಕಡಿಮೆಯಾಗುತ್ತದೆ. ಅದರಲ್ಲೂ ಗ್ರಾಮೀಣ ಭಾಗದ ಬಡ ಕುಟುಂಬಗಳ ಮಕ್ಕಳಲ್ಲಿ ಈ ರೋಗವು ಹೆಚ್ಚಾಗಿ ಕಂಡುಬರುತ್ತಿದೆ.

ನ್ಯಾಷನಲ್‌ ವಿಕ್ಟೋರ್‌ ಬೋರ್ನ್‌ ಡಿಸೀಸ್‌ ಕಂಟ್ರೋಲ್‌ ಪ್ರೋಗ್ರಾಮ್‌ (ಎನ್‌ವಿಬಿಡಿಸಿಪಿ) ಪ್ರಕಾರ 2018ರಲ್ಲಿ 10,485 ಜನರಲ್ಲಿ ಈ ರೋಗ ಕಾಣಿಸಿಕೊಂಡು, 17 ರಾಜ್ಯಗಳಲ್ಲಿ 632 ಜನರು ಮೃತಪಟ್ಟಿದ್ದರು. ಬಿಹಾರ ಅಸ್ಸಾಂ, ಜಾರ್ಖಂಡ್‌, ಉತ್ತರ ಪ್ರದೇಶ, ಮಣಿಪುರ, ಮೇಘಾಲಯ, ತಮಿಳುನಾಡು, ಕರ್ನಾಟಕ ಮತ್ತು ತ್ರಿಪುರ ಅತಿ ಹೆಚ್ಚು ಈ ಕಾಯಿಲೆಗೆ ತುತ್ತಾಗುವ ರಾಜ್ಯಗಳು.

ಲಿಚಿ ಹಣ್ಣು ತಿಂದರೆ ಈ ರೋಗ ಬರುತ್ತದೆಯೇ?

ಮೇ ಮತ್ತು ಜೂನ್‌ ತಿಂಗಳಲ್ಲಿ ಉತ್ತರ ಭಾರತದಲ್ಲಿ ಲಿಚಿ ಹಣ್ಣುಗಳ ಕೊಯ್ಲು ಆರಂಭವಾಗುತ್ತದೆ. ಈ ಹಣ್ಣುಗಳನ್ನು ಬೆಳೆಯುವ ಪ್ರದೇಶಗಳಲ್ಲೇ ಹೆಚ್ಚಾಗಿ ಜನರು ಈ ರೋಗಕ್ಕೆ ತುತ್ತಾಗಿದ್ದಾರೆ. ಅಂದರೆ ಬಿಹಾರದ 5 ಜಿಲ್ಲೆಗಳಲ್ಲಿ ಹೆಚ್ಚಾಗಿ ಲಿಚಿ ಹಣ್ಣುಗಳನ್ನು ಬೆಳೆಯಲಾಗುತ್ತದೆ.

ಮುಜಾಫರ್‌ಪುರ ದೇಶದಲ್ಲೇ ಅತಿ ಹೆಚ್ಚು ಅಂದರೆ ದೇಶದ ಒಟ್ಟು ಉತ್ಪಾದನೆಯ 62% ಲಿಚಿ ಹಣ್ಣುಗಳನ್ನು ಬೆಳೆಯುತ್ತದೆ. ಇಲ್ಲಿಯೇ ಮೆದುಳು ಜ್ವರಕ್ಕೆ ಬಲಿಯಾದ ಮಕ್ಕಳ ಸಂಖ್ಯೆ ಹೆಚ್ಚಿದೆ. ತಜ್ಞರ ಪ್ರಕಾರ ಲಿಚಿ ಹಣ್ಣುಗಳಲ್ಲಿ ಹೈಪೋಗ್ಲೈಸಿನ್‌ ಹೆಚ್ಚಿರುತ್ತದೆ. ಅಂದರೆ ಆಮಿನೋ ಆಸಿಡ್‌.

ಇದು ಜೀರ್ಣಕ್ರಿಯೆಯನ್ನು ಕುಗ್ಗಿಸುತ್ತದೆ, ರಕ್ತದಲ್ಲಿ ಸಕ್ಕರೆ ಪ್ರಮಾಣವನ್ನು ಕಡಿಮೆ ಮಾಡುತ್ತದೆ. ಅದು ಹೈಪೋಗ್ಲೈಕ್ಯಾಮಿಯಾವನ್ನು ಟ್ರಿಗರ್‌ ಮಾಡುತ್ತದೆ. ತೀವ್ರತರದ ಪ್ರಕರಣಗಳಲ್ಲಿ ಸಾವಿಗೂ ಕಾರಣವಾಗುತ್ತದೆ. ಆದರೆ ನಿಜಕ್ಕೂ ಲಿಚಿಗೂ ಈ ಕಾಯಿಲೆಗೂ ಸಂಬಂಧವಿದೆಯೇ ಎಂಬುದು ಇನ್ನೂ ದೃಢಪಟ್ಟಿಲ್ಲ.

ತಗ್ಗಿದ ಲಿಚಿ ಹಣ್ಣುಗಳ ಮಾರಾಟ

ಮೆದುಳು ಜ್ವರಕ್ಕೆ ಲಿಚಿ ಹಣ್ಣುಗಳೇ ಕಾರಣ ಎಂಬ ಶಂಕೆ ವ್ಯಕ್ತವಾದ ಹಿನ್ನೆಲೆಯಲ್ಲಿ ಬಿಹಾರದಲ್ಲಿ ಶೇ.15-20ರಷ್ಟುಲಿಚಿ ಹಣ್ಣುಗಳ ಮಾರಾಟ ತಗ್ಗಿದೆ. ಹೋಟೆಲ್‌ಗಳಲ್ಲಿನ ಜನಪ್ರಿಯ ಖಾದ್ಯ ‘ಶಾಹಿ ಲಿಚಿ’ ಕಾಣೆಯಾಗಿದೆ.

ಅಲ್ಲದೆ ಬಿಹಾರ ಸರ್ಕಾರವೂ ಖಾಲಿ ಹೊಟ್ಟೆಯಲ್ಲಿ ಮಕ್ಕಳು ಲಿಚಿ ಹಣ್ಣುಗಳನ್ನು ತಿನ್ನದಂತೆ ಎಚ್ಚರ ವಹಿಸಿ ಎಂದು ಪೋಷಕರಿಗೆ ಸೂಚಿಸಿದೆ. ಬಿಹಾರದ ಮುಜಾಫರ್‌ಪುರ ದೇಶದ ಶೇ.62ರಷ್ಟುಲಿಚಿ ಹಣ್ಣುಗಳನ್ನು ಬೆಳೆಯುವ ಪ್ರದೇಶ.

2 ದಶಕದಿಂದ ಬಿಹಾರವನ್ನೂ ಕಾಡುತ್ತಿದೆ

ಬಿಹಾರವನ್ನು ಮೆದುಳು ಜ್ವರ ಕಾಡುತ್ತಿರುವುದು ಇಂದು ನಿನ್ನೆಯಿಂದಲ್ಲ. 1995ರಿಂದಲೂ ಬಿಹಾರ ಈ ರೋಗಕ್ಕೆ ಸಿಲುಕಿ ನಲುಗಾಡುತ್ತಿದೆ. 2000 ಮತ್ತು 2010ರ ನಡುವೆ ಮುಜಾಫರ್‌ಪುರ ಜಿಲ್ಲೆಯಲ್ಲಿ 1000ಕ್ಕೂ ಹೆಚ್ಚು ಮಕ್ಕಳು ಇದರಿಂದ ಸಾವಿಗೀಡಾಗಿದ್ದಾರೆ. 

2010 ರ ನಂತರ ಇಲ್ಲಿಯವರೆಗೆ ಸಾವಿಗೀಡಾದ ಮಕ್ಕಳ ಸಂಖ್ಯೆ ಕೂಡ 1000 ದಾಟಿದೆ. 2014ರಲ್ಲಿ ಇದೊಂದೇ ಜಿಲ್ಲೆಯಲ್ಲಿ 360 ಮಕ್ಕಳು ಸಾವಿಗೀಡಾಗಿದ್ದರು. ಮುಜಾಫರ್‌ಪುರ ಜಿಲ್ಲೆಯಲ್ಲಿ ಮಾತ್ರವೇ ಈ ಬಾರಿ 130 ಕ್ಕೂ ಹೆಚ್ಚು ಮಕ್ಕಳು ಮೃತಪಟ್ಟಿವೆ.

ಬಡತನ, ಹಸಿವು ಕೂಡ ಮೆದುಳು ಜ್ವರಕ್ಕೆ ಕಾರಣ?

ಮೆದುಳು ಜ್ವರದಿಂದ ಬಳಲುತ್ತಿರುವ 3/4 ಜನರು ಬಡತನ ರೇಖೆಗಿಂತ ಕೆಳಗಿನವರು ಎಂದು ಬಿಹಾರ ಸರ್ಕಾರ ಕೈಗೊಂಡ ಸಮೀಕ್ಷೆಯಲ್ಲಿ ತಿಳಿದುಬಂದಿದೆ. ಎಇಎಸ್‌ ಕಂಡುಬಂದಿರುವ 287 ಕುಟುಂಬಗಳಲ್ಲಿ ಈ ಸಮೀಕ್ಷೆ ನಡೆಸಲಾಗಿದೆ. ಈ ರೋಗಕ್ಕೆ ತುತ್ತಾದ ಕುಟುಂಬಗಳಲ್ಲಿ ಕನಿಷ್ಠ 6-9 ಜನರು ವಾಸಿಸುತ್ತಿದ್ದಾರೆ. ಹಲವರ ವಾರ್ಷಿಕ ಆದಾಯ 10,000ಕ್ಕಿಂತಲೂ ಕಡಿಮೆ.

ಇವರಲ್ಲಿ ಬಹುತೇಕರ ಬಳಿ ರೇಶನ್‌ ಕಾರ್ಡ್‌ ಕೂಡ ಇಲ್ಲ. 287 ಪ್ರಕರಣಗಳಲ್ಲಿ 61 ಮಕ್ಕಳು ರಾತ್ರಿ ಊಟ ಮಾಡದೇ ಮಲಗುತ್ತಿದ್ದರು ಎಂದು ಅಧ್ಯಯನದಿಂದ ತಿಳಿದುಬಂದಿದೆ. ಅಲ್ಲದೆ ಇವರಲ್ಲಿಯೂ 191 ಕುಟುಂಬಗಳು ಗುಡಿಸಿಲಿನಲ್ಲಿ ವಾಸಿಸುತ್ತಿವೆ. 102 ಕುಟುಂಬಗಳು ಮಾತ್ರ ಪ್ರಧಾನಮಂತ್ರಿ ಆವಾಸ್‌ ಯೋಜನೆಯ ಲಾಭ ಪಡೆದಿವೆ.

ಇನ್ನು 87% ಜನರು ಕುಡಿಯುವ ನೀರಿನ ಸೌಲಭ್ಯ ಪಡೆದಿದ್ದಾರೆ. 60% ಕುಟುಂಬಗಳಲ್ಲಿ ಶೌಚಾಲಯಗಳೇ ಇಲ್ಲ. ಅಲ್ಲಿನ ಸರ್ಕಾರ ಆ್ಯಂಬುಲೆನ್ಸ್‌ ಸೇವೆಯನ್ನೇನೋ ಒದಗಿಸುತ್ತಿದೆ. ಆದರೆ 84% ಜನರು ಅದನ್ನು ಬಳಕೆಯೇ ಮಾಡಿಕೊಳ್ಳುತ್ತಿಲ್ಲ. ಅವರಿಗೆ ಈ ಬಗ್ಗೆ ತಿಳಿವಳಿಕೆಯೂ ಇಲ್ಲ.

ಬಿಹಾರ, ಉ.ಪ್ರ.ದಲ್ಲಿ ಆಸ್ಪತ್ರೆಗಳೇ ನರಕ

ಬಿಹಾರ ಹಾಗೂ ಉತ್ತರ ಪ್ರದೇಶದ ಆಸ್ಪತ್ರೆಗಳನ್ನು ವೈದ್ಯರ ಕೊರತೆ, ವೈದ್ಯಕೀಯ ಸೌಲಭ್ಯಗಳ ಕೊರತೆ, ನರ್ಸಿಂಗ್‌ ಸಿಬ್ಬಂದಿ ಮತ್ತು ಹಾಸಿಗೆಯ ಕೊರತೆ ಕೂಡ ಕಾಡುತ್ತಿದೆ. ಮೆದುಳು ಜ್ವರಕ್ಕೆ ಚಿಕಿತ್ಸೆ ಪಡೆಯಲು ಬರುತ್ತಿರುವ ಸಾವಿರಾರು ಮಕ್ಕಳಿಗೆ ಮಕ್ಕಳ ಆಸ್ಪತ್ರೆಗಳಲ್ಲಿ ಜಾಗ ಸಾಲುತ್ತಿಲ್ಲ.

ಸಾಮಾನ್ಯ ಆಸ್ಪತ್ರೆಗಳಲ್ಲಿ ಸೌಕರ್ಯಗಳು ಸಾಕಷ್ಟಿಲ್ಲ. ಇತ್ತೀಚೆಗೆ ಬಿಹಾರ ಮುಖ್ಯಮಂತ್ರಿ ಮುಜಾಫರ್‌ಪುರದ ಶ್ರೀಕೃಷ್ಣ ಮೆಡಿಕಲ್‌ ಕಾಲೇಜು ಮತ್ತು ಆಸ್ಪತ್ರೆಗೆ ಭೇಟಿ ನೀಡಿದ್ದರು. ಈ ವೇಳೆ 32 ಡಾಕ್ಟರ್‌ಗಳು 130 ಮಕ್ಕಳಿಗೆ ಕೇವಲ 34 ಹಾಸಿಗೆಯಲ್ಲಿ ಚಿಕಿತ್ಸೆ ನೀಡುತ್ತಿದ್ದರು.

ಇದು ಬಿಹಾರದ ಆಸ್ಪತ್ರೆಗಳ ಅವ್ಯವಸ್ಥೆಗೆ ಹಿಡಿದ ಕನ್ನಡಿ. ಇನ್ನು ಸರಿಯಾದ ಸಮಯಕ್ಕೆ ಆ್ಯಂಟಿವೈರಲ್‌ ಔಷಧ, ಸಾಕಷ್ಟುದ್ರವಾಹಾರ ಹಾಗೂ ಗ್ಲೂಕೋಸ್‌ ಕೊಟ್ಟರೂ ರೋಗಪೀಡಿತ ಮಕ್ಕಳು ಬದುಕುಳಿಯುತ್ತವೆ. ಆದರೆ, ತಿಳುವಳಿಕೆಯ ಕೊರತೆಯಿಂದ ಬಡವರು ಸಮಯ ಮೀರಿದ ಮೇಲೆ ಮಕ್ಕಳನ್ನು ಆಸ್ಪತ್ರೆಗೆ ಕೊಂಡೊಯ್ಯುವುದರಿಂದ ಅವರನ್ನು ಉಳಿಸಿಕೊಳ್ಳುವುದು ಕಷ್ಟವಾಗುತ್ತಿದೆ.

ಮಕ್ಕಳೇ ಏಕೆ ಹೆಚ್ಚು ಸಾವಿಗೀಡಾಗುತ್ತಿದ್ದಾರೆ?

ಎಕ್ಯೂಟ್‌ ಎನ್ಸೆಫಲಿಟೀಸ್‌ಗೆ ತುತ್ತಾಗಿ ಸಾವನ್ನಪ್ಪಿದವರಲ್ಲಿ ಮಕ್ಕಳೇ ಹೆಚ್ಚು. ಇದಕ್ಕೆ ಲಿಚಿ ಹಣ್ಣುಗಳ ಸೇವನೆಯೇ ಕಾರಣ ಎಂದು ಹೇಳಲಾಗುತ್ತಿದೆಯಾದರೂ, ಈ ಮರಣ ಮೃದಂಗಕ್ಕೆ ಅದೊಂದೇ ಕಾರಣವಲ್ಲ. ಅತಿ ಹೆಚ್ಚು ಉಷ್ಣಾಂಶ, ಆರ್ದೃತೆ ಮತ್ತು ಪೌಷ್ಟಿಕಾಂಶಯುಕ್ತ ಆಹಾರಗಳ ಕೊರತೆಯೇ ಬಿಹಾರದಲ್ಲಿ ಮೆದುಳು ಜ್ವರದಿಂದ ಸಾವನ್ನಪ್ಪಿದ ಮಕ್ಕಳ ಸಂಖ್ಯೆ ಹೆಚ್ಚಲು ಕಾರಣ ಎಂದು ಹೇಳಲಾಗುತ್ತದೆ. ಅದರ ಹೊರತಾಗಿ ನಿರ್ಜಲೀಕರಣ, ಹೈಪೋಗ್ಲೈಸೇಮಿಯಾ ಮತ್ತು ಹೀಡ್‌ ಸಿಂಡ್ರೋಮ್‌ಗಳೂ ಕಾರಣ ಎಂದು ಐಎಂಎ ಹೇಳಿದೆ.

ಮೆದುಳು ಜ್ವರಕ್ಕೆ ಚಿಕಿತ್ಸೆ ಹೇಗೆ?

ಮೊಟ್ಟಮೊದಲ ಚಿಕಿತ್ಸೆ ಎಂದರೆ ದೇಹದಲ್ಲಿ ನೀರಿನ ಪ್ರಮಾಣವನ್ನು ಹೆಚ್ಚು ಮಾಡುವುದು. ಮತ್ತು ಗ್ಲುಕೋಸ್‌ ಪ್ರಮಾಣವನ್ನು ಹೆಚ್ಚಿಸುವುದು. ಪೌಷ್ಟಿಕಾಂಶಯುಕ್ತ ಆಹಾರ ನೀಡುವುದು, ಜ್ವರವನ್ನು ನಿಯಂತ್ರಣಕ್ಕೆ ತರುವ ಮೂಲಕ ರೋಗವನ್ನು ಗುಣಪಡಿಸಬಹುದು.

ಕೆಲವರಿಗೆ ಉಸಿರಾಟದ ತೊಂದರೆಯೂ ಕಾಣಿಸಿಕೊಳ್ಳುವುದರಿಂದ ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ನಿಡಬೇಕಾಗುತ್ತದೆ. ಈ ರೋಗಕ್ಕೆ ರೋಗನಿರೋಧಕಗಳ ಬಳಕೆಯಿಂದ ಉಪಯೋಗವಿಲ್ಲದ ಕಾರಣ ಆ್ಯಂಟಿ ವೈರಲ್‌ಗಳನ್ನು ನೀಡಬೇಕಾಗುತ್ತದೆ.

ಮುನ್ನೆಚ್ಚರಿಕೆ ಕ್ರಮ

- ಸೊಳ್ಳೆಗಳಿಂದ ಕಾಣಿಸಿಕೊಳ್ಳುವ ರೋಗಗಳ ಬಗ್ಗೆ ಎಚ್ಚರ

- ದಿನಕ್ಕೆ ಹೆಚ್ಚೆಚ್ಚು ನೀರು ಕುಡಿಯುವುದು

- ದಡಾರ ಮತ್ತು ಸಿಡುಬಿಗೆ ಸಂಬಂಧಿಸಿದ ಲಸಿಕೆ ಪಡೆಯುವುದು

- ಹಣ್ಣು ಮತ್ತು ತರಕಾರಿಗಳನ್ನು ಸೇವಿಸುವ ಮುನ್ನ ತೊಳೆಯುವುದು

- ವಾಕ್ಸಿನೇಶನ್‌ ತೆಗೆದುಕೊಳ್ಳಬಹುದು

- ಆ್ಯಂಟಿ ವೈರಲ್‌ ಔಷಧಗಳನ್ನು ಸ್ವೀಕರಿಸುವುದು

- ಉದ್ದ ತೋಳಿನ ಬಟ್ಟೆಧರಿಸುವುದು

- ಊಟ ಮಾಡುವ ಮುಂಚೆ ಮತ್ತು ಅನಂತರ ಕೈ ತೊಳೆಯುವುದು