ಜಯಾ ಸಾವು ಪ್ರಕರಣಕ್ಕೆ ಹೊಸ ಟ್ವಿಸ್ಟ್

ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜೆ. ಜಯಲಲಿತಾ ನಿಧನರಾಗಿ ಒಂದೂವರೆ ವರ್ಷಗಳು ಉರುಳುತ್ತಿದ್ದರೂ, ಅವರ ಸಾವಿನ ಕುರಿತ ನಿಗೂಢ ಹೆಚ್ಚಾಗುತ್ತಲೇ ಇದೆ. ಜಯಲಲಿತಾ ಅವರು ಆಸ್ಪತ್ರೆಗೆ ದಾಖಲಾದ ಕ್ಷಣಗಳ ಕುರಿತು ಅವರ ಆಪ್ತೆ ಶಶಿಕಲಾ ನಟರಾಜನ್‌ ನೀಡಿದ್ದ ಹೇಳಿಕೆಗೂ, ಜಯಲಲಿತಾ ಅವರಿಗೆ ಚಿಕಿತ್ಸೆ ನೀಡುತ್ತಿದ್ದ ವೈದ್ಯರು ನೀಡಿರುವ ಹೇಳಿಕೆಗೂ ಸಾಕಷ್ಟು ವ್ಯತ್ಯಾಸಗಳು ಕಂಡುಬಂದಿವೆ.

Biggest Twist in Jayalalithaa Death Case

ಚೆನ್ನೈ: ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜೆ. ಜಯಲಲಿತಾ ನಿಧನರಾಗಿ ಒಂದೂವರೆ ವರ್ಷಗಳು ಉರುಳುತ್ತಿದ್ದರೂ, ಅವರ ಸಾವಿನ ಕುರಿತ ನಿಗೂಢ ಹೆಚ್ಚಾಗುತ್ತಲೇ ಇದೆ. ಜಯಲಲಿತಾ ಅವರು ಆಸ್ಪತ್ರೆಗೆ ದಾಖಲಾದ ಕ್ಷಣಗಳ ಕುರಿತು ಅವರ ಆಪ್ತೆ ಶಶಿಕಲಾ ನಟರಾಜನ್‌ ನೀಡಿದ್ದ ಹೇಳಿಕೆಗೂ, ಜಯಲಲಿತಾ ಅವರಿಗೆ ಚಿಕಿತ್ಸೆ ನೀಡುತ್ತಿದ್ದ ವೈದ್ಯರು ನೀಡಿರುವ ಹೇಳಿಕೆಗೂ ಸಾಕಷ್ಟು ವ್ಯತ್ಯಾಸಗಳು ಕಂಡುಬಂದಿವೆ. ಹೀಗಾಗಿ ಜಯಾ ನಿಧನದ ಕುರಿತು ಮತ್ತಷ್ಟುಅನುಮಾನ ವ್ಯಕ್ತವಾಗಿದ್ದು, ಶಶಿಕಲಾ ಮೇಲೆ ಶಂಕೆ ಬಲಗೊಳ್ಳುವಂತಾಗಿದೆ.

ಜಯಲಲಿತಾ ಸಾವಿನ ಬಗ್ಗೆ ನ್ಯಾ. ಎ. ಆರ್ಮುಗಸ್ವಾಮಿ ಆಯೋಗ ವಿಚಾರಣೆ ನಡೆಸುತ್ತಿದೆ. ಈಗಾಗಲೇ ಆಯೋಗಕ್ಕೆ ಶಶಿಕಲಾ ಅವರು 28 ಪುಟಗಳ ಪ್ರಮಾಣಪತ್ರ ಸಲ್ಲಿಸಿ, ‘ನಡೆದಿದ್ದೆಲ್ಲವನ್ನೂ’ ವಿವರಿಸಿದ್ದಾರೆ. ಆದರೆ ಅದೇ ಆಯೋಗಕ್ಕೆ ಜಯಲಲಿತಾ ಅವರ ಖಾಸಗಿ ವೈದ್ಯ ಹೇಳಿಕೆ ನೀಡಿದ್ದಾರೆ. ಶಶಿಕಲಾ ಅವರ ಹೇಳಿಕೆ ಜತೆ ವೈದ್ಯರ ಹೇಳಿಕೆ ತಾಳೆಯಾಗುತ್ತಿಲ್ಲ. ಇದು ಶಂಕೆಗೆ ಕಾರಣವಾಗಿದೆ.

ಶಶಿಕಲಾ ಫೋನ್‌ ಮಾಡಿದ್ದು ನಿಜವೇ?

ಜಯಲಲಿತಾ ಅವರಿಗೆ 2016ರ ಸೆ.22ರಂದು (ಆಸ್ಪತ್ರೆಗೆ ದಾಖಲಾದ ದಿನ) ಕರೆ ಮಾಡಿದ್ದೆ. ಅವರು ಚೆನ್ನಾಗಿಯೇ ಇದ್ದರು. ರಾತ್ರಿ 7ಕ್ಕೆ ನನಗೆ ಕರೆ ಮಾಡಿದ ಶಶಿಕಲಾ ಅವರು, ಜಯಲಲಿತಾ ಅವರು ಕೆಮ್ಮು ಹಾಗೂ ಜ್ವರದಿಂದ ಬಳಲುತ್ತಿದ್ದಾರೆ ಎಂದು ತಿಳಿಸಿದರು. ರಾತ್ರಿ 8.45ಕ್ಕೆ ಜಯಲಲಿತಾ ಮನೆಗೆ ಹೋಗಿದ್ದೆ ಎಂದು ಡಾ. ಶಿವಕುಮಾರ್‌ ತಿಳಿಸಿದ್ದಾರೆ.

ಆದರೆ ಶಶಿಕಲಾ ಅವರು ಆಯೋಗಕ್ಕೆ ಸಲ್ಲಿಸಿರುವ ಅಫಿಡವಿಟ್‌ನಲ್ಲಿ ವೈದ್ಯರಿಗೆ ತಾವು ಕರೆ ಮಾಡಿದ್ದ ವಿಷಯವನ್ನು ತಿಳಿಸಿಯೇ ಇಲ್ಲ. ‘ಜಯಲಲಿತಾ ಅವರು ಆಯಾಸಗೊಂಡಂತೆ ಕಂಡುಬರುತ್ತಿದ್ದರು. ಹೀಗಾಗಿ ಆಸ್ಪತ್ರೆಗೆ ಹೋಗೋಣ ಎಂದಿದ್ದೆ. ಅವರು ಬೇಕಾಗಿಲ್ಲ ಎಂದರು. ನಂತರ ಜ್ವರ ಕಡಿಮೆಯಾಯಿತು. ಡಾ. ಶಿವಕುಮಾರ್‌ ಅವರೇ ರಾತ್ರಿ 9 ಗಂಟೆಗೆ ಜಯಲಲಿತಾ ಅವರನ್ನು ನೋಡಲು ಮನೆಗೆ ಬಂದಿದ್ದರು’ ಎಂಬ ಮಾಹಿತಿ ನೀಡಿದ್ದಾರೆ.

ಜಯಾ ಮನೆಯಲ್ಲಿದ್ದರು ಅಪರಿಚಿತರು : ಜಯಲಲಿತಾ ಅವರ ಮನೆಗೆ ಹೋದಾಗ ಇಬ್ಬರು ಅಪರಿಚಿತ ಮನೆಕೆಲಸದಾಳುಗಳು ಇದ್ದರು ಎಂದು ವೈದ್ಯರು ಹೇಳಿದ್ದಾರೆ. ಆದರೆ ಶಶಿಕಲಾ ಅವರ ಅಫಿಡವಿಟ್‌ನಲ್ಲಿ ಆ ಆಳುಗಳ ಉಲ್ಲೇಖವೇ ಇಲ್ಲ.

ಜಯಾ ಕುಸಿಯುವ ಮುನ್ನ ಏನಾಯ್ತು?

ವೈದ್ಯ ಹೇಳಿದ್ದು: ಜಯಲಲಿತಾ ಮನೆಗೆ ಹೋದಾಗ ಅವರು ಕೆಮ್ಮುತ್ತಿದ್ದರು. ಜ್ವರ ಇತ್ತು. ತೊಂದರೆ ಇಲ್ಲ ನೀವು ಹೋಗಿ ಎಂದು ನನಗೆ ಹೇಳಿದರು. ಆದರೆ ನಾನು ಅಲ್ಲೇ ಉಳಿದೆ. ಅಪೋಲೋ ಆಸ್ಪತ್ರೆಗೆ ಕರೆ ಮಾಡಿ ನೆಬ್ಯುಲೈಸರ್‌ (ಶ್ವಾಸಕೋಶಕ್ಕೆ ಆಮ್ಲಜನಕ ರವಾನಿಸಲು ಬಳಸುವ ಉಪಕರಣ) ಕಳುಹಿಸುವಂತೆ ಸೂಚಿಸಿದೆ. ಅಷ್ಟರಲ್ಲಿ ಜಯಲಲಿತಾ ಅವರು ಯಾರ ಸಹಾಯವೂ ಇಲ್ಲದೇ ಸ್ನಾನಗೃಹಕ್ಕೆ ಹೋದರು. ನಿರಂತರವಾಗಿ ಕೆಮ್ಮಲು ಆರಂಭಿಸಿದರು. ಬಾತ್‌ರೂಂನಿಂದ ಹೊರಬಂದವರೇ ನನ್ನ ಹಾಗೂ ಶಶಿಕಲಾ ಅವರ ಮೇಲೆ ಒರಗಿಕೊಂಡರು. ತಕ್ಷಣವೇ ಅಪೋಲೋ ಆಸ್ಪತ್ರೆಯ ಉನ್ನತ ಅಧಿಕಾರಿ ಪ್ರೀತಾರೆಡ್ಡಿ ಅವರ ಪತಿ ವಿಜಯಕುಮಾರ್‌ ಅವರಿಗೆ ಕರೆ ಮಾಡಿ, ಆ್ಯಂಬುಲೆನ್ಸ್‌ ಕಳುಹಿಸಲು ಹೇಳಿದೆ.

ಶಶಿಕಲಾ ಹೇಳಿದ್ದು: ರಾತ್ರಿ 9.30ರ ವೇಳೆಗೆ ‘ಅಕ್ಕ’(ಜಯಾ)ನ ಜತೆ ಮೊದಲ ಮಹಡಿಯ ಕೋಣೆಯಲ್ಲಿ ಇದ್ದೆ. ಹಲ್ಲುಜ್ಜಲು ಜಯಲಲಿತಾ ಅವರು ಬಾತ್‌ರೂಂನತ್ತ ನಿಧಾನವಾಗಿ ನಡೆಯುತ್ತಿದ್ದರು. ಬಾಯಿ ತೊಳೆದ ನಂತರ ‘ಶಶಿ ನಿತ್ರಾಣವಾಗುತ್ತಿದ್ದೇನೆ, ಬಾ ಇಲ್ಲಿ’ ಎಂದು ಬಾತ್‌ರೂಂನಿಂದಲೇ ಕರೆದರು. ನಾನು ಅಲ್ಲಿಗೆ ಹೋದೆ. ಮಂಚದತ್ತ ಕರೆದುಕೊಂಡು ಬಂದೆ. ಅವರು ನನ್ನ ಪಕ್ಕವೇ ಕುಳಿತರು. ಸುಸ್ತಾಗಿ ನನ್ನ ಹೆಗಲ ಮೇಲೆ ಒರಗಿಕೊಂಡರು. ಆಗ ಡಾ.ಶಿವಕುಮಾರ್‌ ಅವರು ಕೋಣೆ ಪ್ರವೇಶಿಸಿದರು.

ಜಯಾಗೆ ಪ್ರಜ್ಞೆ ಬಂದಿದ್ದು ಎಲ್ಲಿ?

ವೈದ್ಯ: ರಕ್ತ ಪರೀಕ್ಷೆ, ಇಸಿಜಿಯಂತಹ ಪರೀಕ್ಷೆಗಳನ್ನು ಅಪೋಲೋ ಆಸ್ಪತ್ರೆಯಲ್ಲಿ ಮಾಡಿದ ನಂತರ ಜಯಲಲಿತಾ ಅವರು ತಾನು ಎಲ್ಲಿದ್ದೇನೆ ಎಂದು ಕೇಳಿದರು. ಆಗ ಅವರಿಗೆ ಪ್ರಜ್ಞೆ ಮರಳಿತು.

ಶಶಿಕಲಾ: ಆ್ಯಂಬುಲೆನ್ಸ್‌ನಲ್ಲಿದ್ದಾಗ ಜಯಲಲಿತಾ ಅವರಿಗೆ ಪ್ರಜ್ಞೆ ಮರಳಿತು. ಎಲ್ಲಿದ್ದೇನೆ ಎಂದು ಕೇಳಿದರು.

ಆಸ್ಪತ್ರೆಯಲ್ಲಿ ಅಧಿಕಾರಿಗಳು ಇದ್ದರೆ?

ವೈದ್ಯರು: ಅಪೋಲೋ ಆಸ್ಪತ್ರೆಗೆ ಜಯಲಲಿತಾ ದಾಖಲಾದಾಗ ಯಾವುದೇ ಸರ್ಕಾರಿ ಅಧಿಕಾರಿಗಳನ್ನು ನೋಡಿದ ನೆನಪು ನನಗಿಲ್ಲ.

ಶಶಿಕಲಾ: ಆಸ್ಪತ್ರೆಯ ಐಸಿಯು ಹೊರಗೇ ಅಂದು ರಾತ್ರಿ ಮುಖ್ಯ ಕಾರ್ಯದರ್ಶಿ ರಾಮಮೋಹನ ರಾವ್‌, ಸಲಹೆಗಾರ್ತಿ ಶೀಲಾ ಬಾಲಕೃಷ್ಣನ್‌ ಹಾಗೂ ಪೊಲೀಸ್‌ ಅಧಿಕಾರಿಗಳು ಇದ್ದರು. ಅದನ್ನು ಜಯಲಲಿತಾ ಗಮನಿಸಿ, ತಲೆಯಾಡಿಸಿದ್ದರು.

Latest Videos
Follow Us:
Download App:
  • android
  • ios