ಬೆಂಗಳೂರು(ಸೆ.17): ಒರಾಯನ್ ಮಾಲ್, ದರ್ಶನ್ ಮನೆ, ಶಾಮನೂರು ಶಿವಶಂಕರಪ್ಪನವರ ಆಸ್ಪತ್ರೆ. ಇವೆಲ್ಲ ಒತ್ತುವರಿಯಾಗಿದೆ ಎನ್ನುವುದು ಈಗ ಸಾಕ್ಷಿ ಸಮೇತ ಸಾಬೀತಾಗಿದೆ. ಈ ಅಕ್ರಮ ಮತ್ತು ಸರ್ಕಾರ ನುಣುಚಿಕೊಳ್ಲುತ್ತಿರುವ ವಿಚಾರದ ಬಗ್ಗೆ ಸುವರ್ಣ ನ್ಯೂಸ್ ಬೆನ್ನು ಹತ್ತಿರುವುದು ಎಲ್ಲರಿಗೂ ಗೊತ್ತಿರುವ ವಿಷಯ. ಈಗ ನಿಮ್ಮ ಸುವರ್ಣ ನ್ಯೂಸ್ ಇನ್ನೊಂದು ಸತ್ಯವನ್ನು ಬಹಿರಂಗ ಮಾಡಿದೆ. ಇದು ಸುವರ್ಣ ನ್ಯೂಸ್ ವೀಕ್ಷಿಸುತ್ತಿದ್ದ ಪ್ರಜ್ಞಾವಂತ ವೀಕ್ಷಕರೊಬ್ಬರು ಕೊಟ್ಟ ಮಾಹಿತಿ. ಆ ಮಾಹಿತಿಯನ್ನು ಬೆನ್ನು ಹತ್ತಿದಾಗ, ಸರ್ಕಾರದ ಮತ್ತೊಂದು ಆಟ ಮತ್ತು ದೊಡ್ಡವರನ್ನು ರಕ್ಷಿಸುವ ತಂತ್ರ ಬಯಲಾಗಿದೆ. ಸರ್ಕಾರ ಆಡಿದ ಆ ಆಟವೇನು ಇಲ್ಲಿದೆ ಡಿಟೇಲ್ಸ್..
ಇದು ವೀಕ್ಷಕರೇ ಕೊಟ್ಟ ಸುಳಿವು..!
ಇದು ಸುವರ್ಣ ನ್ಯೂಸ್ ವೀಕ್ಷಕರೊಬ್ಬರು ಕೊಟ್ಟ ಸುಳಿವು. ಬುಧವಾರ ಸುವರ್ಣ ನ್ಯೂಸ್, ಭೂದಾಖಲೆಗಳ ಜಂಟಿ ಇಲಾಖೆ ಕೊಟ್ಟ ಒತ್ತುವರಿ ದಾಖಲೆ ಬಹಿರಂಗಪಡಿಸಿದ ದಿನ ಸುಳಿವು ಸಿಕ್ಕಿತ್ತು.
ಸುವರ್ಣ ನ್ಯೂಸ್ ಅಭಿಮಾನಿ ಕೊಟ್ಟ ಸುಳಿವಿನ ಬೆನ್ನು ಹತ್ತಿದಾಗ..: ಬಯಲಾಯ್ತು ದೊಡ್ಡವರ ರಕ್ಷಣೆಗೆ ನಡೆದ ದೊಡ್ಡಾಟ..!
ದರ್ಶನ್ ಮನೆ, ಶಾಮನೂರು ಶಿವಶಂಕರಪ್ಪ ಆಸ್ಪತ್ರೆ ಇರುವುದು ಐಡಿಯಲ್ ಹೋಮ್ಸ್ ಕೋ ಆಪರೇಟಿವ್ ಸೊಸೈಟಿ ಅಭಿವೃದ್ಧಿ ಮಾಡಿರೋ ಲೇಔಟ್ನಲ್ಲಿ. ಈಗ ಬಿಬಿಎಂಪಿ ನುಣುಚಿಕೊಳ್ಳಲು ಇದೇ ಕುಂಟುನೆಪ ಹಿಡಿದುಕೊಂಡು ನಿಂತಿದೆ. ಅದು ಬಿಡಿಎ ಓಕೆ ಮಾಡಿದ್ದ ಲೇಔಟು ಎನ್ನುವುದು ಅವರ ವಾದ. ಈ ಬಡಾವಣೆಯಲ್ಲಿ ದರ್ಶನ್ ಮನೆ, ಎಸ್ಎಸ್ ಆಸ್ಪತ್ರೆಯೂ ಸೇರಿ 65 ಕಟ್ಟಡಗಳಿವೆ. ಆದರೆ, ಈ ಲೇಔಟ್ ಜಾಗವನ್ನು ಸರ್ಕಾರ ವಶಕ್ಕೆ ತೆಗೆದುಕೊಳ್ಳಬೇಕು ಎಂ ಹೈಕೋರ್ಟ್ ಸರ್ಕಾರಕ್ಕೆ ಸೂಚನೆ ಕೊಟ್ಟಿತ್ತು. ಆದರೆ, ಸರ್ಕಾರವಾಗಲೀ, ಬಿಬಿಎಂಪಿಯಾಗಲೀ, ಹೈಕೋರ್ಟ್ ಆದೇಶವನ್ನು ನೋಡಿದಂತೆ ಮಾಡಿ, ಮುಟ್ಟಿದಂತೆ ತೋರಿಸಿ, ಮರೆತು ಬಿಟ್ಟರು.
2003ರಲ್ಲೇ ಬಯಲಾಗಿತ್ತು ದೊಡ್ಡವರ ಒತ್ತುವರಿ ಆಟ: ಐಐಎಲ್ ಹಾಕಿತ್ತು ಪ್ರಜಾಶಕ್ತಿ ಸಂಘಟನೆ
ಏನು ಹೇಳಿತ್ತು ಹೈಕೋರ್ಟ್..?
-ಐಡಿಯಲ್ ಹೋಮ್ಸ್ನ 7 ಎಕರೆ, 6 ಗುಂಟೆ ಜಾಗ ಸರ್ಕಾರದ್ದು
-ಒತ್ತುವರಿಯಾಗಿರುವ ಈ ಭೂಮಿಯನ್ನು ವಶಕ್ಕೆ ತೆಗೆದುಕೊಳ್ಳಬೇಕು
-ಮಂಜೂರಾಗಿದ್ದ ನಕ್ಷೆಯನ್ನು ಕೂಡಲೇ ವಾಪಸ್ ಪಡೆಯಬೇಕು
ಸರ್ಕಾರಿ ಭೂಮಿ ವಶಪಡಿಸಿಕೊಳ್ಳುವುದು ಜಿಲ್ಲಾಧಿಕಾರಿ ಹೊಣೆ
ಆದರೆ, ಜಿಲ್ಲಾಧಿಕಾರಿಗಳು ಹೈಕೋರ್ಟ್ ಆದೇಶವನ್ನು ಪಾಲನೆ ಮಾಡಲಿಲ್ಲ. ಸರ್ವೆಯನ್ನೂ ಮಾಡಲಿಲ್ಲ. ಬದಲಿಗೆ ಹೈಕೋರ್ಟ್ ಆದೇಶವನ್ನೇ ಮುಚ್ಚಿಟ್ಟರು. ಇದಾದ ಮೇಲೆ ಆಸ್ತಿದಾರರು ಮತ್ತೆ ಹೈಕೋರ್ಟ್ ಮೊರೆ ಹೋದರು. ಅದನ್ನು ವಿಚಾರಣೆಗೆ ಸ್ವೀಕರಿಸಿದ ನ್ಯಾಯಾಲಯ, 2007ರಲ್ಲಿ ಪ್ರಕರಣ ಇತ್ಯರ್ಥವಾಗುವವರೆಗೆ ಅಲ್ಲಿ ಕಟ್ಟಡ ಕಟ್ಟಬಾರದು ಎಂದು ಸೂಚಿಸಿತ್ತು.
ಹೈಕೋರ್ಟ್ ಆದೇಶವನ್ನೇ ಮರೆತರು ಜಿಲ್ಲಾಧಿಕಾರಿ…!
ಆದರೆ, ಈ ಆದೇಶವನ್ನೂ ಮರೆತು ಕುಳಿತ ಆಗಿನ ಬೆಂಗಳೂರು ಡಿಸಿ ರಾಮಾನುಜಂ, ಒತ್ತುವರಿಗೆ ಮುಕ್ತ ಅವಕಾಶ ನೀಡಿದರು. ಈಗ ಏನೇನೂ ಗೊತ್ತಿಲ್ಲದವರಂತೆ ಆಟವಾಡುತ್ತಿದ್ದಾರೆ. ಕಾನೂನು ರಕ್ಷಿಸಬೇಕಾಧ ಕಾನೂನು ಸಚಿವರೂ ಅಷ್ಟೆ, ಏನೂ ಗೊತ್ತಿಲ್ಲದಂತೆ ಕ್ಲೀನ್ ಚಿಟ್ ಕೊಡುತ್ತಿದ್ದಾರೆ.
ಮುಖ್ಯಮಂತ್ರಿಗಳೂ ಗೊತ್ತಿಲ್ಲ ಎನ್ನುತ್ತಿದ್ದಾರೆ. ಮೇಯರ್ ಸೇರಿದಂತೆ ಯಾರೊಬ್ಬರೂ ಇದರ ಜವಾಬ್ದಾರಿ ಹೊರುತ್ತಿಲ್ಲ. ಬೇರೆ ವಿಚಾರಗಳಲ್ಲಿ ನ್ಯಾಯಾಲಯ, ಸಂವಿಧಾನ ಅಂತೆಲ್ಲ ದೊಡ್ಡ ದೊಡ್ಡ ಮಾತನ್ನಾಡುವವರು, ಇಲ್ಲಿ ಹೈಕೋರ್ಟ್ ಆದೇಶವನ್ನು ಕಸದ ಬುಟ್ಟಿಗೆ ಹಾಕಿದ್ದು ಯಾಕೆ? ಈಗಲೂ ಅವರನ್ನು ಮುಟ್ಟುತ್ತಿಲ್ಲ ಏಕೆ..? ಅವರು ದೊಡ್ಡವರು ಅಂತಾನಾ..?
