ಉದ್ಯಮಿ ಪುತ್ರ ಗೀತಾವಿಷ್ಣು ಎಸ್ಕೇಪ್ ಪ್ರಕರಣ ಪ್ರಮುಖ ತಿರುವು ಪಡೆದುಕೊಂಡಿದೆ. ಈ ಹಿಂದೆ ಉದ್ಯಮಿ ಪುತ್ರ ಗೀತಾವಿಷ್ಣು ಜೊತೆ ಸ್ಯಾಂಡಲ್'ವುಡ್ ನಟರಾದ ಪ್ರೇಮ್, ದಿಗಂತ್ ಹಾಗೂ ಪ್ರಜ್ವಲ್ ದೇವರಾಜ್ ಇದ್ದರೆಂಬ ಮಾತು ಕೇಳಿ ಬಂದಿತ್ತು. ಆದರೆ ನಟರು ತಾವು ಗೋವಾದಲ್ಲಿರುವುದಾಗಿ ಹೇಳಿಕೆ ನೀಡಿದ್ದರು. ಇದೀಗ ಎಲ್ಲಾ ಬೆಳವಣಿಗೆಗಳ ನಡುವೆಯೇ ನಟ ದೇವರಾಜ್ ಎರಡನೇ ಪುತ್ರ ಪ್ರಣಮ್ ದೇವರಾಜ್'ಗೆ ಪೊಲೀಸರು ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ನೋಟಿಸ್ ಜಾರಿಗೊಳಿಸಿದ್ದಾರೆ.
ಬೆಂಗಳೂರು(ಅ.02): ಉದ್ಯಮಿ ಪುತ್ರ ಗೀತಾವಿಷ್ಣು ಎಸ್ಕೇಪ್ ಪ್ರಕರಣ ಪ್ರಮುಖ ತಿರುವು ಪಡೆದುಕೊಂಡಿದೆ. ಈ ಹಿಂದೆ ಅಪಘಾತ ನಡೆದಾಗ ಉದ್ಯಮಿ ಪುತ್ರ ಗೀತಾವಿಷ್ಣು ಜೊತೆ ಸ್ಯಾಂಡಲ್'ವುಡ್ ನಟರಾದ ಪ್ರೇಮ್, ದಿಗಂತ್ ಹಾಗೂ ಪ್ರಜ್ವಲ್ ದೇವರಾಜ್ ಇದ್ದರು ಎಂಬ ಮಾತುಗಳು ಕೇಳಿ ಬಂದಿತ್ತು. ಆದರೆ ನಟರು ತಾವು ಗೋವಾದಲ್ಲಿರುವುದಾಗಿ ಹೇಳಿಕೆ ನೀಡಿದ್ದರು. ಈ ಎಲ್ಲಾ ಬೆಳವಣಿಗೆಗಳ ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದೇವರಾಜ್ ಎರಡನೇ ಪುತ್ರ ಪ್ರಣಮ್ ದೇವರಾಜ್'ಗೆ ಪೊಲೀಸರು ನೋಟಿಸ್ ಜಾರಿಗೊಳಿಸಿದ್ದಾರೆ.
ಸೆ.29ರಂದು ಜಯನಗರ ಸೌತ್ ಎಂಡ್ ಸರ್ಕಲ್ ಬಳಿ ಸಂಭವಿಸಿದ ಕಾರು ಅಪಘಾತ ಪ್ರಕರಣದ ವಿಚಾರಣೆಗೆ ಹಾಜರಾಗಲು ಖ್ಯಾತ ನಟ ದೇವರಾಜ್ ಎರಡನೇ ಮಗ ಪ್ರಣಮ್ ದೇವರಾಜ್'ಗೆ ಪೊಲೀಸರು ನೋಟಿಸ್ ಜಾರಿಗೊಳಿಸಿದ್ದಾರೆ. ಇದನ್ನು ಗಮನಿಸಿದರೆ ಅಪಘಾತ ನಡೆದಂದು ಉದ್ಯಮಿ ಪುತ್ರನೊಂದಿಗೆ ಪ್ರಣಮ್ ದೇವರಾಜ್ ಇದ್ದರಾ ಎಂಬ ಅನುಮಾನ ಮೂಡಿದೆ. ಅಲ್ಲದೆ ಗೀತಾವಿಷ್ಣು ಸಹೋದರ ಆದಿ ನಾರಾಯಣ, ಪ್ರಣಮ್ ದೇವರಾಜ್, ಫೈಸಲ್, ಶಶಾಂಕ್ ಸೇರಿ ಒಟ್ಟು 6 ಮಂದಿಗೆ ನೋಟೀಸ್ ಜಾರಿಯಾಗಿದೆ.
ಇನ್ನು ಪುತ್ರನಿಗೆ ನೋಟಿಸ್ ಜಾರಿಗೊಳಿಸಿದ ವಿಚಾರವಾಗಿ ಮಾತನಾಡಿರುವ ನಟ ದೇವರಾಜ್ ' ಅಪಘಾತ ನಡೆದ ರಾತ್ರಿ ನನ್ನ ಮಗ ತನ್ನ ಸ್ನೇಹಿತರ ಮನೆಯಲ್ಲಿದ್ದ, ಅಪಘಾತ ನಡೆದ ಕಾರಿನಲ್ಲಿರಲಿಲ್ಲ. ಗೀತಾವಿಷ್ಣು ನನ್ನ ಮಗನ ಸ್ನೇಹಿತ ಹೀಗಾಗಿ ಅಪಘಾತದ ಸುದ್ದಿ ತಿಳಿಯುತ್ತಿದ್ದಂತೆಯೇ ಅಲ್ಲಿಗೆ ತೆರಳಿದ್ದನಷ್ಟೇ' ಎಂದಿದ್ದಾರೆ.
