ಅರ್ಜುನ್ ಸರ್ಜಾ ಹಾಗೂ ಶ್ರುತಿ ಹರಿಹರನ್ ಪ್ರಕರಣಕ್ಕೆ ಇದೀಗ ಬಿಗ್ ಟ್ವಿಸ್ಟ್ ಒಂದು ದೊರಕಿದೆ. ಈ ಪ್ರಕರಣವನ್ನು ಇದೀಗ ಮತ್ತೊಂದು ರೂಪದಲ್ಲಿ ತೆಗೆದುಕೊಂಡು ಹೋಗಲಾಗಿದೆ.
ಬೆಂಗಳೂರು : ಅರ್ಜುನ್ ಸರ್ಜಾ ವಿರುದ್ಧದ ಮೀ ಟೂ ಆರೋಪವು ಹಿಂದೂ ವಿರೋಧಿ ಸಂಚಿನ ಒಂದು ಭಾಗ. ಸರ್ಜಾ ಅವರು ಚೆನ್ನೈನಲ್ಲಿ 25 ಕೋಟಿ ವೆಚ್ಚದ ಹನುಮಾನ್ ಮಂದಿರ ನಿರ್ಮಿಸುತ್ತಿದ್ದು, ಇದನ್ನು ಕ್ರೈಸ್ತ ಮಿಷನರಿಗಳು ಸೇರಿ ಹಲವರು ವಿರೋಧಿಸುತ್ತಿದ್ದಾರೆ. ಆ ಜಾಲದ ಕುಮ್ಮಕ್ಕಿನಿಂದಲೇ ಕಮ್ಯುನಿಸ್ಟ್ ಮನಸ್ಥಿತಿಯ ಶ್ರುತಿ ಹರಿಹರನ್ ‘ದೇಶದ್ರೋಹ’ದ ಕೆಲಸದಲ್ಲಿ ಭಾಗಿಯಾಗಿದ್ದಾರೆ.
ಇದಕ್ಕೆ ಇಬ್ಬರು ಸ್ಟಾರ್ ನಟರ ಬೆಂಬಲವೂ ಇದೆ ಎಂದು ಸರ್ಜಾ ಆಪ್ತ ಪ್ರಶಾಂತ್ ಸಂಬರಗಿ ಗಂಭೀರ ಆರೋಪ ಮಾಡಿದ್ದಾರೆ. ಬಹುಭಾಷಾ ನಟ ಅರ್ಜುನ್ ಸರ್ಜಾ ಅವರ ಮೇಲೆ ಶ್ರುತಿ ಹರಿಹರನ್ ಮಾಡಿರುವ ಮೀಟೂ ಆರೋಪದ ಹಿಂದೆ ಹಿಂದೂ ವಿರೋಧಿ ಮನಸ್ಸುಗಳು ಕೆಲಸ ಮಾಡುತ್ತಿವೆ. ಇವರ ಸಂಚುಗಳಿಗೆ ಮೀಟೂ ಅಭಿಮಾನ ಬಳಕೆ ಆಗುತ್ತಿದೆ ಎಂದು ಅರ್ಜುನ್ ಸರ್ಜಾ ಆಪ್ತ ಪ್ರಶಾಂತ್ ಸಂಬರಗಿ ಗಂಭೀರವಾಗಿ ಆರೋಪಿಸಿದ್ದಾರೆ. ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಕರೆದಿದ್ದ ಮೀಟೂ ಸಂಧಾನ ಸಭೆಗೆ ಆಗಮಿಸಿದ್ದ ಪ್ರಶಾಂತ್ ಸಂಬರಗಿ ಸಭೆ ಆರಂಭವಾಗುವುದಕ್ಕೂ ಮುನ್ನ ಈ ಕುರಿತು ಮಾತನಾಡಿದರು. ಅರ್ಜುನ್ ಸರ್ಜಾ ಆಂಜನೇಯನ ಪರಮ ಭಕ್ತರು.
ಹಿಂದೂ ಪರವಾಗಿ ಯೋಚಿಸುವ ವ್ಯಕ್ತಿ. ಆ ಕಾರಣಕ್ಕೆ ಚೆನ್ನೈನಲ್ಲಿ ಅವರು 25 ಕೋಟಿ ರು. ವೆಚ್ಚದಲ್ಲಿ ಹನುಮಾನ್ ಮಂದಿರವನ್ನು ಕಟ್ಟುತ್ತಿದ್ದಾರೆ. ಇದಕ್ಕೆ ಅಲ್ಲಿನ ಕ್ರಿಶ್ಚಿಯನ್ ಮಿಷನರಿಗಳು ಹಾಗೂ ಹಿಂದೂ ವಿರೋಧಿ ಶಕ್ತಿಗಳು ಅಡ್ಡಗಾಲು ಹಾಕುತ್ತಿವೆ. ಇದೇ ಶಕ್ತಿಗಳು ಸೇರಿಕೊಂಡು ಮೀಟೂ ಹೆಸರಿನಲ್ಲಿ ಅರ್ಜುನ್ ಸರ್ಜಾ ಮೇಲೆ ಸುಳ್ಳು ಆರೋಪ ಮಾಡಿಸುವ ಮೂಲಕ ಚಾರಿತ್ರ್ಯವಧೆಗೆ ಮುಂದಾಗಿವೆ. ಇದಕ್ಕಾಗಿ ಸಾಕಷ್ಟು ದೊಡ್ಡ ಮಟ್ಟದಲ್ಲಿ ಹಣ ಖರ್ಚು ಮಾಡುತ್ತಿರುವುದು ಕ್ರಿಶ್ಚಿಯನ್ ಮಿಷನರಿಗಳು ಎಂದು ಆಕ್ರೋಶ ವ್ಯಕ್ತಪಡಿಸಿದರು. ಈ ಬಗ್ಗೆ ತಮ್ಮ ಬಳಿ ನಿಖರವಾದ ಸಾಕ್ಷಿಗಳಿದ್ದು, ಆ ಎಲ್ಲಾ ಸಾಕ್ಷಿಗಳ ಮೂಲಕ ಶ್ರುತಿ ಹರಿಹರನ್ ಮತ್ತು ಅವರ ಹಿಂದೆ ಕೂತು ಕೆಲಸ ಮಾಡುತ್ತಿರುವವರ ವಿರುದ್ಧ ದೂರನ್ನೂ ಸಹ ದಾಖಲು ಮಾಡಿದ್ದೇವೆ ಎಂದರು.
